ಪುತ್ತೂರು : ಮಧುಪ್ರಪಂಚ ಯುಗಾದಿ ಸಂಚಿಕೆಯ ಲೋಕಾರ್ಪಣಾ ಕಾರ್ಯಕ್ರಮವು ದ.ಕ ಜೇನು ವ್ಯವಸಾಯಗಾರರ ಸಂಘ ಮಿತ ಮಾಧುರಿ ಸೌಧ ಪುತ್ತೂರಿನಲ್ಲಿ ಮಾ.21ರಂದು ನಡೆಯಿತು.
ಮಧುಪ್ರಪಂಚದ ಯುಗಾದಿ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ದ.ಕ ಜೇನು ವ್ಯವಸಾಯಗಾರರ ಸಂಘ ಮಿತ ಮಾಧುರಿ ಸೌಧ ಪುತ್ತೂರು, ಇದರ ಅಧ್ಯಕ್ಷ, ಪತ್ರಿಕೆಯ ಗೌರವ ಸಂಪಾದಕ ಚಂದ್ರಕೋಲ್ಚಾರ್ “ಮಧುಪ್ರಪಂಚ ಕಳೆದ ಸುಮಾರು ನಲುವತ್ತೆರಡು ವರುಷಗಳಿಗಿಂತಲೂ ಅಧಿಕ ವರ್ಷಗಳಿಂದ ಜೇನು ವ್ಯವಸಾಯಗಾರರ,ಜೇನು ಪ್ರೇಮಿಗಳ ಮೆಚ್ಚಿನ ಮುಖವಾಣಿಯಾಗಿ,ಸಂಚಿಕೆಯಾಗಿ ಪ್ರಕಟವಾಗುತ್ತಿದೆ.ಕಳೆದ ನಾಲ್ಕೈದು ವರ್ಷಗಳಿಂದ ವರ್ಣಮಯವಾಗಿ ಜೇನು ಕುರಿತ ಲೇಖನ ಕವನ ಚಿತ್ರಗಳೊಂದಿಗೆ ಮೂಡಿಬರುತ್ತಿದ್ದು ಎಲ್ಲರ ಅಭಿಮಾನ ಗಳಿಸಿದ ಪ್ರಪ್ರಥಮ ಜೇನು ಪತ್ರಿಕೆಯಾಗಿದೆ.ಚಂದಾದಾರರಾಗಿ,ಜಾಹೀರಾತುದಾರರಾಗಿ ಸಹಕಾರ ನೀಡಿ ಪತ್ರಿಕೆಯನ್ನು ಕೂಡಿ ಬೆಳೆಸೋಣ..ಯುಗಾದಿ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಲು ಸಂತೋಷ ಪಡುತ್ತೇನೆ” ಎಂದರು.
ಪತ್ರಿಕೆಯ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ “ಒಂದು ಪತ್ರಿಕೆ ಸಮಾಜದ ಪ್ರತಿಬಿಂಬ.ಅದರಲ್ಲೂ ಜೇನು,ಮಧುಸಂಬಂಧಿತ ಪತ್ರಿಕೆ ವಿಶೇಷ ಪತ್ರಿಕೆಯಾಗಿದೆ.ಜೇನು ಕೃಷಿಕರು ತಮ್ಮಜೀವನಾನುಭವ,ಸಾಧಕ-ಬಾಧಕಗಳನ್ನು ತಮ್ಮದೇ ಮಾತುಗಳಲ್ಲಿ ಬರೆದು ಕಳಿಸಬೇಕು.ಜೇನು ಬದುಕಿಗೆ ಸಂಬಂಧಿಸಿದ,ಕೃಷಿ ಕಾರ್ಯ,ಹೈನುಗಾರಿಕೆ,ಮತ್ಸ್ಯ,ಕೋಳಿಸಾಕಣೆ,ಪರಿಸರ ಸಂಬಂಧಿಸಿದ ಲೇಖನಗಳಿಗೂ ಅವಕಾಶವಿದೆ.ಅಂತೆಯೇ ಎಲ್ಲರೂ ಚಂದಾದಾರರಾಗಿ ಜಾಹೀರಾತುದಾರರಾಗಿ ಸಹಕರಿಸಬೇಕೆಂದು,ಶಾಲಾ-ಕಾಲೇಜು,ಸಂಘ-ಸಂಸ್ಥೆಗಳು,ಪಂಚಾಯತ್ ಗಳು ತಮ್ಮ ವಾಚನಾಲಯಗಳಿಗೆ ಪತ್ರಿಕೆ ತರಿಸಿಕೊಳ್ಳ ಬೇಕು,ಪ್ರತೀ ಸದಸ್ಯರೂ ಚಂದಾದಾರರಾಗಿ ಸಹಕರಿಸಬೇಕೆಂದೂ ವಿನಂತಿಸಿದರು.ಸರಕಾರವೂ ತಮ್ಮ ಜಾಹೀರಾತುಗಳನ್ನು ನಮ್ಮ ಪತ್ರಿಕೆಗೆ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ವಿಶೇಷವಾಗಿ ಮನವಿ ಮಾಡಿಕೊಂಡರು.
ಸಂಘದ ಉಪಾಧ್ಯಕ್ಷ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ,ಸಂಘದ ನಿರ್ದೇಶಕ-ನಿರ್ದೇಶಕಿಯರು,ಸಂಪಾದಕ ಮಂಡಳಿಯ ಸದಸ್ಯರು,ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ವ್ಯವಸ್ಥಾಪನಾ ನಿರ್ದೇಶಕ ಸಂಪಾದಕ ತಿಮ್ಮಯ್ಯ ಪಿಂಡಿಮನೆ ಸ್ವಾಗತಿಸಿ, ವಂದಿಸಿದರು.