ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಪ್ರಕರಣ; ಆರೋಪಿ ಜಯೇಶ್ ನಾಗ್ಪುರ ಪೊಲೀಸ್ ವಶಕ್ಕೆ

0

ಪುತ್ತೂರು: ದಾವೂದ್ ಇಬ್ರಾಹಿಂ ತಂಡದ ಸದಸ್ಯನೆಂದು ಹೇಳಿಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿರುವ ಆರೋಪಿ, 2008ರಲ್ಲಿ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ನಾಗ್ಪುರ ಪೊಲೀಸರು ಬೆಳಗಾವಿ ಜೈಲಿನಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ತನ್ನ ದೊಡ್ಡಪ್ಪನ ಮಗನ ಪತ್ನಿ ಮತ್ತು ಆಕೆಯ 3 ವರ್ಷದ ಮಗುವಿನ ಕೊಲೆ ಪ್ರಕರಣದ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಜಯೇಶ್ ಜೈಲಿಂದಲೇ ಗಡ್ಕರಿಯವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಕೊಲ್ಲಾಪುರ ಟೆರರಿಸ್ಟ್ ವಿರೋಧಿ ದಳ ಮತ್ತು ನಾಗ್ಪುರ ಪೊಲೀಸರು ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ ವೇಳೆ ಜಯೇಶ್ ಬಳಿಯಲ್ಲಿದ್ದ ಡೈರಿಯಲ್ಲಿ ಗಡ್ಕರಿ ಕಚೇರಿಯ ದೂರವಾಣಿ ಸಂಖ್ಯೆ ಸಹಿತ ಹಲವು ನಂಬರ್‌ಗಳು ಪತ್ತೆಯಾಗಿದ್ದವು.

ಜೈಲೊಳಗೆ ಆರೋಪಿಗೆ ಫೋನ್ ಎಲ್ಲಿಂದ ಬಂತು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ಆರೋಪಿ ಜಯೇಶ್‌ನನ್ನು ಬೆಳಗಾವಿ ಜೈಲಿನಿಂದ ನಾಗ್ಪುರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಶೇಷ ವಿಮಾನದಲ್ಲಿ ನಾಗ್ಪುರಕ್ಕೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಜಯೇಶ್: ಗಡ್ಕರಿಯವರ ಕಚೇರಿಗೆ ಬೆದರಿಕೆ ಕರೆ ಮಾಡಿರುವ ಆರೋಪಿ ಜಯೇಶ್ 2008ರಲ್ಲಿ ಶಿರಾಡಿಯಲ್ಲಿ ತನ್ನ ದೊಡ್ಡಪ್ಪನ ಮಗನ ಪತ್ನಿ ಮತ್ತು ಮಗುವಿನ ದಾರುಣ ಹತ್ಯೆ ಪ್ರಕರಣದ ಅಪರಾಧಿಯಾಗಿ ಪುತ್ತೂರು ಜಿಲ್ಲಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಶಿರಾಡಿ ಗ್ರಾಮದ ಸಿರಿಬಾಗಿಲು ಪೊಲ್ಯೊಟ್ಟು ಎಂಬಲ್ಲಿ 2008ರ ಆ.2ರಂದು ತನ್ನ ದೊಡ್ಡಪ್ಪನ ಮಗ ಲೋಹಿತ್‌ರವರ ಪತ್ನಿ ಸೌಮ್ಯ (23ವ.) ಮತ್ತು ಆಕೆಯ 3 ವರ್ಷದ ಗಂಡು ಮಗು ಜಿಷ್ಣುವನ್ನು ಕೊಲೆಗೈದ ಪ್ರಕರಣದ ಅಪರಾಧಿಯಾಗಿರುವ ಜಯೇಶ್ ಯಾನೆ ಜಯೇಶ್‌ಕಾಂತ್ ಅಲಿಯಾಸ್ ಶಾಹೀರ್ ಅಲಿಯಾಸ್ ಶಾಕೀರ್‌ಗೆ ಗಲ್ಲು ಶಿಕ್ಷೆ ವಿಽಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 2016ರ ಆಗಸ್ಟ್ 12ರಂದು ತೀರ್ಪು ನೀಡಿತ್ತು.

3 ಬಾರಿ ಕರೆ ಮಾಡಿದ್ದ

ನಿತಿನ್ ಗಡ್ಕರಿಯವರ ಕಚೇರಿಗೆ ಅಪರಿಚಿತ ವ್ಯಕ್ತಿ ಮೂರು ಬಾರಿ ಕರೆ ಮಾಡಿ 100 ಕೋಟಿ ರೂ.ಹಣ ನೀಡುವಂತೆ ಹೇಳಿ ಕೊಲೆ ಬೆದರಿಕೆ ಹಾಕಿದ್ದಲ್ಲದೇ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಕುರಿತು ನಿತಿನ್ ಗಡ್ಕರಿ ಅವರ ಕಚೇರಿಯಿಂದ ಬಂದ ದೂರಿನ ಮೇರೆಗೆ ನಾಗ್ಪುರ ಪೊಲೀಸರು ತನಿಖೆ ಆರಂಭಿಸಿದ್ದರು. ಬೆಳಿಗ್ಗೆ 11.25, 11:32 ಮತ್ತು ಮಧ್ಯಾಹ್ನ 12:30ಕ್ಕೆ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆಗಳು ಬಂದಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯು ನಾಗ್ಪುರದ ಖಮ್ಲಾ ಚೌಕ್‌ನಲ್ಲಿದೆ, ಇದು ಅವರ ಮನೆಯಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿದೆ.

LEAVE A REPLY

Please enter your comment!
Please enter your name here