ಮಹಿಳೆ ಅಬಲೆಯಲ್ಲ ಸಬಲೆ-ಶಾಂತಿ ಹೆಗ್ಡೆ
ಪುತ್ತೂರು: ಮಹಿಳೆಯರ ಉತ್ಥಾನ ಮತ್ತು ಸಬಲೀಕರಣ ರಾಷ್ಟ್ರದ ಬೆಳವಣಿಗಗೆ ದಾರಿ ಮಾಡಿಕೊಡುವುದು. ಹೆಣ್ಣುಮಗುವೊಂದು ಜನಿಸಿದರೆ ನಾವು ಹೆಮ್ಮೆ ಪಡಬೇಕು. ಹೆಣ್ಣು ಮಗುವಿಗೆ ಯೋಗ್ಯ ಶಿಕ್ಷಣ ನೀಡಿ ಅದು ದೇಶದ ಅಭಿವೃದ್ಧಿಯಲ್ಲಿ ಪಾಲುದಾರಳಾಗುವಂತೆ ಮಾಡೋಣ. ಹೆಣ್ಣು ಎಂದೂ ಅಬಲೆಯಲ್ಲ. ಹೆಣ್ಣಿಗೆ ಹೆಣ್ಣೇ ಶತ್ರು ಆಗದಂತೆ ಎಲ್ಲರನ್ನು ಪ್ರೀತಿಸಿ ಜೊತೆಯಾಗಿ ಸಾಗೋಣ. ಎಂದು ನಿವೃತ್ತ ಸಿ.ಡಿ.ಪಿ.ಓ, ಹಾಗೂ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗ್ಡೆ ಹೇಳಿದರು.
ಅವರು ಪುತ್ತೂರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಮಂಗಳೂರು, ತಾಲೂಕು ಮಹಿಳಾ ಒಕ್ಕೂಟ ಪುತ್ತೂರು,ನವ್ಯಶ್ರೀ ಮಹಿಳಾ ಮಂಡಳಿ ಪುತ್ತೂರು, ವನಿತಾ ಸಮಾಜ ಹಾರಾಡಿ, ಮಹಿಳಾ ವಿವಿಧೋದ್ದೇಶ ಸಂಘ ಪುತ್ತೂರು, ಲಯನ್ಸ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಜರುಗಿದ ವಿಶ್ವಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಐತ್ತಪ್ಪ ನಾಯ್ಕ, ದೀಪ ಪ್ರಜ್ವಲನಗೊಳಿಸಿ ಮಾತನಾಡಿ ಹೆಣ್ಣು ತಾಯಿಯಾಗಿ, ಮಗಳಾಗಿ, ಸಮಾಜದ ಮುಖ್ಯವಾಹಿನಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಗಂಡಸಿನಂತೆ ಸಮಾನ ಅವಕಾಶಗಳನ್ನು ಪಡೆದುಕೊಂಡು, ರಾಜ್ಯ, ರಾಷ್ಟ್ರದ ಉನ್ನತ ಸ್ಥಾನಗಳನ್ನು ಅಲಂಕರಿಸಿ, ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಮಿನುಗುತ್ತಿರುವುದು ದೇಶದ ಹಿರಿಮೆಯಾಗಿದೆ ಎಂದು ಹೇಳಿದರು.
ಸನ್ಮಾನ:
ಸಾಧಕ ಮಹಿಳೆಯರಾದ ಕಲಾವಿದೆ ರೋಹಿಣಿ ರಾಘವ ಆಚಾರ್ಯ, ಮತ್ತು ಯುವ ಉದ್ಯಮಿ ದಿವ್ಯಾ ದಾರಂದಕುಕ್ಕು ಶಾಲು ಹೊದಿಸಿ, ಹಾರಾರ್ಪಣೆಗೈದು ಹಣ್ಣುಹಂಪಲು ನೀಡಿ ಅಭಿನಂದಿಸಲಾಯಿತು. ಜಿಲ್ಲಾ ಮಹಿಳಾ ಒಕ್ಕೂಟದ ಕ್ರಿಯಾಶೀಲ ಅಧ್ಯಕ್ಷೆ ಚಂಚಲಾ ತೇಜೋಮಯರವರನ್ನು ಶಾಲು ಹೊದಿಸಿ ಹಾರಾರ್ಪಣೆ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು.
ಅಭಿನಂದನೆ:
ಪುತ್ತೂರಿನ ವಿಶ್ವ ಮಹಿಳಾ ದಿನಾಚರಣೆಯಲ್ಲಿ ವಿಶೇಷವಾಗಿ “ಅದೃಷ್ಠವಂತ ಮಹಿಳೆ”ಯಾಗಿ ಆಯ್ಕೆಗೊಂಡ ಪುತ್ತೂರು ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಶೆಟ್ಟಿಯವರನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿದ ಚಂಚಲಾ ತೇಜೋಮಯ ಮಾತನಾಡಿ ನಾನು ಮೂಲತಃ ಪುತ್ತೂರಿನವಳೇ ಆಗಿದ್ದು ಇಲ್ಲಿನ ಮಹಿಳೆಯರ ಸಾಧನೆ ಚಟುವಟಿಕೆಗಳ ಬಗ್ಗೆ ಹೆಮ್ಮೆಯಿದೆ.ಹೆಣ್ಣು ಕ್ಷಮಯಾ ಧರಿತ್ರಿ.ಇನ್ನೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರ. ಮಹಿಳೆ ಸರ್ವತ್ರ ಮಾನ್ಯಳು. ಯಾವತ್ತೂ ಹೆಣ್ಣು ಮಕ್ಕಳ ಶೋಷಣೆಯ ವಿರುದ್ಧ ನಾವು ಧ್ವನಿಯೆತ್ತಲೇ ಬೇಕೆಂದು ನುಡಿದರು.
ಮಂಗಳೂರು ಕ್ಷೇತ್ರ ನಿರ್ವಹಣಾ ಅಧಿಕಾರಿ ದಿವ್ಯಾ ವೈ.ಜೆ ಮಾತನಾಡಿ ತಾಯಿ ಜನುಮ ನೀಡುತ್ತಾಳೆ ತಂದೆ ಬದುಕು ಕೊಡುತ್ತಾನೆ. ಇಂದು ಸಮಾಜದಲ್ಲಿ ಮಹಿಳೆಯ ಸ್ಥಾನಮಾನ ಹೆಚ್ಚಿದೆ. ಸರಕಾರದ ಯೋಚನೆ ಯೋಜನೆಗಳಿಂದ ಹೆಣ್ಣಿನ ಸಬಲೀಕರಣ ಆಗುತ್ತಿದೆ. ಹೆಣ್ಣಿನ ಧ್ವನಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಆದರೂ ಅಲ್ಲಿ ಇಲ್ಲಿ ಕೆಲವೊಂದು ಘಟನೆಗಳು ನಡೆಯುತ್ತಿರುವುದು ವಿಷಾಧನೀಯ. ಹೆಣ್ಣುಮಕ್ಕಳ ಹಕ್ಕು-ಕರ್ತವ್ಯ ಸ್ಥಾನಮಾನಗಳ ಕುರಿತು ಅರಿವು ಮೂಡಿಸುವ ಕೆಲಸ ನಮ್ಮೆಲ್ಲರಿಂದಲೂ ಆಗಬೇಕಾದ ಅಗತ್ಯವಿದೆ ಎಂದರು.
ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ ಮಾತನಾಡಿ. ಇಂದು ಮಹಿಳೆ ಸಮಾಜದ ಮುಖ್ಯಶಕ್ತಿಯಾಗಿ ಪ್ರತಿಯೊಂದು ಗಂಡಸಿನ ಯಶಸ್ಸಿನ ಹಿಂದೆ ಮಹಿಳೆಯಿದ್ದಾಳೆ. ತಾಯಿ, ಮಗಳು, ಅಧಿಕಾರಿ, ಶಿಕ್ಷಕಿ, ಸರಕಾರ, ಸಂಘಸಂಸ್ಥೆಗಳು, ಆರೋಗ್ಯ, ಶಿಕ್ಷಣ, ಸಮಾಜಸೇವೆ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದೇಶದ ಅಭಿವೃದ್ಧಿಗೆ ಕಾರಣವಾಗಿರುವ ಹೆಣ್ಣನ್ನು ಗೌರವಿಸೋಣ ಎಂದು ಮಾತನಾಡಿದರು.
ವೇದಿಕೆಯಲ್ಲಿ ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ ನೆಲ್ಲಿಕಟ್ಟೆ, ವತ್ಸಲಾ ರಾಜ್ಞಿ ಉಪಸ್ಥಿತರಿದ್ದರು.
ವಿಶ್ವಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಹಾರಾಡಿ ವನಿತಾ ಸಮಾಜದ ಉಪಾಧ್ಯಕ್ಷೆ ವತ್ಸಲಾ ರಾಜ್ಞಿ, ಸುರೇಖಾ ಹೆಬ್ಬಾರ್, ಉಷಾ ಮುಳಿಯ, ಲಲಿತಾ, ಪ್ರೇಮಾ ಕೆಮ್ಮಾಯಿ, ಇಂದಿರಾ, ಸುಧಾ, ವೇದಾವತಿ, ಧರ್ಮಾವತಿ ಕೋಡಿಯಾಡಿ, ಮೋಹಿನಿ ದಿವಾಕರ್, ಸುರೇಖಾ ಹೆಬ್ಬಾರ್ ಸಹಕರಿಸಿದರು. ಪೂರ್ಣಿಮಾ ಶೆಟ್ಟಿ ಮತ್ತು ರಂಜಿನಿ ರಾಧಾಕೃಷ್ಣ ಭಟ್, ಕೊಡಿಪ್ಪಾಡಿ ಸನ್ಮಾನ ಪತ್ರ ವಾಚಿಸಿದರು. ವತ್ಸಲಾ ರಾಜ್ಞಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.
ಪುತ್ತೂರು ಮಹಿಳಾ ವಿವಿಧೊದ್ದೇಶ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಸ್ವಾಗತಿಸಿದರು. ಪುತ್ತೂರು ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು. ಜಯಲಕ್ಷ್ಮೀ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ನಯನಾ ರೈ ಮತ್ತು ಬಳಗದವರಿಂದ ಹಾಡು, ಪ್ರೇಮಲತಾ ರಾವ್ ಮತ್ತು ಮತ್ತು ವತ್ಸಲಾ ರಾಜ್ಞಿರವರಿಂದ ಕೀಬೋರ್ಡ್ ವಾದನ ನಡೆಯಿತು. ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ಪುತ್ತೂರು ಸುದ್ದಿ ಬಿಡುಗಡೆಯ ಪ್ರತಿಭಾರಂಗದ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು. ಕೋಡಿಯಾಡಿ, ಉಪ್ಪಿನಂಗಡಿ, ಬನ್ನೂರು, ಕೊಡಿಪ್ಪಾಡಿ, ಪುತ್ತೂರು ಮಹಿಳಾ ಮಂಡಳಿಗಳ ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ವಜ್ರಮಾತೆ, ಗುರುಸೇವಾ ಬಳಗದ ಸದಸ್ಯರು, ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.