ಕಾಣಿಯೂರು: ಬಾಳಿಲ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ತಕಧಿಮಿ ಬೇಸಿಗೆ ಶಿಬಿರದ ಪ್ರಯುಕ್ತ ಮಕ್ಕಳ ಮೆಟ್ರಿಕ್ ಮೇಳಕ್ಕೆ ಚಾಲನೆ ನೀಡಲಾಯಿತು. ವಿನೂತನ ರೀತಿಯಲ್ಲಿ ಮಕ್ಕಳ ಸಂತೆಯನ್ನು ಏರ್ಪಡಿಸಲಾಯಿತು. ವಿದ್ಯಾಬೋಧಿನಿ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಎನ್ ವೆಂಕಟ್ರಮಣ ಭಟ್ ಉದ್ಘಾಟಿಸಿದರು. ಕೋಶಾಧಿಕಾರಿ ರಾಧಾಕೃಷ್ಣ ರಾವ್ ಶುಭ ಹಾರೈಸಿದರು.
ಸಂಚಾಲಕ ಪಿ. ಜಿ. ಎಸ್. ಎನ್ ಪ್ರಸಾದ್, ಎಸ್. ಡಿ. ಎಂ. ಸಿ ಅಧ್ಯಕ್ಷ ಭುವನೇಶ್ವರ ಪಿ, ಮುಖ್ಯಗುರುಗಳಾದ ಕೃಷ್ಣಮೂರ್ತಿ, ಶಾಲಾ ವಿದ್ಯಾರ್ಥಿ ನಾಯಕರಾದ ನಿತೀಶ್, ಜಾಹ್ನವಿ, ಅಧ್ಯಾಪಕರು, ಪೋಷಕರು ಉಪಸ್ಥಿತರಿದ್ದರು.
ಶಾಲೆಯಲ್ಲಿ ಪ್ರತೀ ವರ್ಷ ವಿನೂತನ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದು, ವಿದ್ಯಾಬೋಧಿನಿ ಪ್ರಾಥಮಿಕ ಶಾಲೆಯಲ್ಲಿ ಎ.1ರಿಂದ ಬೇಸಿಗೆ ಶಿಬಿರ ನಡೆಯುತ್ತಿದ್ದು, ಅದರ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಆಡಳಿತ ಮಂಡಳಿ, ಶಾಲಾ ಎಸ್.ಡಿ.ಎಂ.ಸಿ ಸಹಕಾರದಲ್ಲಿ ಶಾಲಾ ಅಧ್ಯಾಪಕ ವೃಂದದವರು ಕಾರ್ಯಕ್ರಮ ಸಂಘಟಿಸಿ, ಶಿಕ್ಷಕ ಶಿವಪ್ರಸಾದ್. ಜಿ ಕಾರ್ಯಕ್ರಮ ಸಂಯೋಜಿಸಿದ್ದರು.
ವಿದ್ಯಾರ್ಥಿಗಳೇ ವ್ಯಾಪಾರಿಗಳಾಗಿ ತರಕಾರಿ, ಹಣ್ಣು, ಮನೆ ಬಳಕೆ ವಸ್ತುಗಳು, ಪಾನೀಯ ಇತ್ಯಾದಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದರು. ಯಾವುದೇ ಸಂತೆಗೆ ಮೀರದಂತೆ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಿ ಜನರ ಮೆಚ್ಚುಗೆ ಗಳಿಸಿದರು.
ಸುತ್ತ ಮುತ್ತ ಊರಿನ ಸುಮಾರು 300ಕ್ಕಿಂತಲೂ ಮಿಕ್ಕಿ ಗ್ರಾಹಕರು ಮೆಟ್ರಿಕ್ ಮೇಳಕ್ಕೆ ಭೇಟಿ ಕೊಟ್ಟು ವಸ್ತುಗಳನ್ನು ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳೂ ಕೆಲವು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಗಮನ ಸೆಳೆದರು. ಚಿಣ್ಣರ ತಕಧಿಮಿ ಬೇಸಿಗೆ ಶಿಬಿರದಲ್ಲಿ ರಂಗತರಬೇತಿ, ಚಿತ್ರಕಲೆ, ಕ್ರಾಫ್ಟ್, ಮೆಟ್ರಿಕ್ ಮೇಳ ಹಾಗೂ ಜಾನಪದ ಗೀತೆ ಮುಂತಾದ ವಿಷಯಗಳ ಬಗ್ಗೆ ಮಕ್ಕಳಿಗೆ ವಿಶೇಷ ತರಬೇತಿಗಳು ನಡೆಯಲಿದೆ.