ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನ ರಾಜ್ಯವ್ಯಾಪಿ ವಿಸ್ತರಿಸಲು ಸಂಭಾವ್ಯ ಮುಖ್ಯಮಂತ್ರಿಗಳ ಕ್ಷೇತ್ರದ ಚುನಾವಣೆಯಲ್ಲಿ ಸಕ್ರಿಯವಾಗಲು ನಿರ್ಧಾರ ?

0

ಸಾಮಾಜಿಕ ಚಟುವಟಿಕೆಗಳ ಕಡೆ ಗಮನಕ್ಕಾಗಿ 38 ವರ್ಷಗಳ ಸುದೀರ್ಘ ಪತ್ರಿಕಾ ರಂಗದ ಪ್ರಯಾಣದಿಂದ ನಿವೃತ್ತಿ

ಮಂಗಳೂರು:ಕಳೆದ 38 ವರ್ಷಗಳಿಂದ ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಸಮಸ್ತ ಜನತೆಯ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ತಾನು ಇದೀಗ ಸುದೀರ್ಘ ಪತ್ರಿಕಾ ಮಾಧ್ಯಮ ಕ್ಷೇತ್ರದ ಪ್ರಯಾಣದಿಂದ ಹೊರಬಂದು ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನವನ್ನು ರಾಜ್ಯವ್ಯಾಪಿಯಾಗಿ ವಿಸ್ತರಿಸುವ ಉದ್ದೇಶದೊಂದಿಗೆ ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ತೀರ್ಮಾನಿಸಿರುವುದಾಗಿ ಸುದ್ದಿ ಬಿಡುಗಡೆ ಪತ್ರಿಕೆಗಳ ಪ್ರಧಾನ ಸಂಪಾದಕರು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಸುದ್ದಿ ಜನಾಂದೋಲನಗಳ ರೂವಾರಿ ಡಾ.ಯು.ಪಿ.ಶಿವಾನಂದ ಅವರು ಮಂಗಳೂರುನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮೂರು ತಾಲೂಕುಗಳಲ್ಲಿಯೂ ಪತ್ರಿಕೆ ಜನರ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ತಾನು ಪತ್ರಿಕಾ ಕ್ಷೇತ್ರದಲ್ಲೇ ಸಕ್ರಿಯವಾಗಿದ್ದರೆ ಜನಪರ ಆಂದೋಲನಗಳ ಸಹಿತ ಇತರ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮೂರು ತಾಲೂಕುಗಳಲ್ಲಿಯೂ ಪತ್ರಿಕೆಯನ್ನು ನಡೆಸಿಕೊಂಡು ಬರಲು ಆಯಾ ತಾಲೂಕಿನ ಸಮರ್ಥರಿಗೆ ಈಗಾಗಲೇ ಹೇಳಿದ್ದು ಸಂಪಾದಕತ್ವವನ್ನೂ ಬದಲಾವಣೆ ಮಾಡಲು ನಿರ್ಧರಿಸಿದ್ದೇನೆ. ಸುಳ್ಯದಲ್ಲಿ ಹರೀಶ್ ಬಂಟ್ವಾಳ, ಪುತ್ತೂರುನಲ್ಲಿ ಕರುಣಾಕರ ರೈ, ಬೆಳ್ತಂಗಡಿಯಲ್ಲಿ ಸಂತೋಷ್ ಕುಮಾರ್ ಅವರಿಗೆ ಸಂಪಾದಕ ಜವಾಬ್ದಾರಿ ವಹಿಸಿಕೊಡಲು ನಿರ್ಧರಿಸಿದ್ದು ಮುಂದಿನ ವಾರ ಈ ಕುರಿತು ಎಗ್ರಿಮೆಂಟ್ ಕೂಡಾ ಆಗಲಿದೆ ಎಂದು ಹೇಳಿದ ಡಾ.ಶಿವಾನಂದರು ಪತ್ರಿಕೆಯನ್ನು ಯಾವುದೇ ರಾಜಿಯಿಲ್ಲದೇ ಮೊದಲಿನ ರೀತಿಯಲ್ಲಿಯೇ ಅವರು ಸಮರ್ಥವಾಗಿ ಮುಂದುವರಿಸಿಕೊಂಡು ಬರುತ್ತಾರೆಂಬ ವಿಶ್ವಾಸವಿದೆ. ಎಲ್ಲಿಯ ತನಕ ಸುದ್ದಿ ಪತ್ರಿಕೆ ನಮ್ಮ ಪತ್ರಿಕೆ ಎಂದು ಜನರು ಬೆಂಬಲ ನೀಡುತ್ತಾರೋ ಅಲ್ಲಿಯವರೆಗೆ ಪತ್ರಿಕೆ ಯಶಸ್ವಿಯಾಗಿ ನಡೆಯುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಸುದ್ದಿ ಬಿಡುಗಡೆ ಪತ್ರಿಕೆ ಇರುವ ಮೂರು ತಾಲೂಕುಗಳಲ್ಲಿಯೂ ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ.ಅದೇ ರೀತಿ ಉತ್ತಮ ಸೇವೆ ಮಾಡುವ ಹಲವು ಅಧಿಕಾರಿಗಳನ್ನು ಗುರುತಿಸುವ ಕೆಲಸವೂ ಆಗಿದೆ. ಈ ಆಂದೋಲನವನ್ನು ರಾಜ್ಯವ್ಯಾಪಿಯಾಗಿ ವಿಸ್ತರಿಸಬೇಕು ಎನ್ನುವ ಅಪೇಕ್ಷೆಯೊಂದಿಗೆ ತಾನು ಈ ಬಾರಿ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳ ಕ್ಷೇತ್ರಗಳಲ್ಲಿ ಈ ವಿಚಾರದ ಕುರಿತು ಅಭ್ಯರ್ಥಿಗಳಲ್ಲಿ, ಅಲ್ಲಿನ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಉದ್ದೇಶಿಸಿದ್ದೇನೆ. ಜತೆಗೆ ಆಡಳಿತ ಹಳ್ಳಿಯಿಂದ ಡೆಲ್ಲಿಗೆ ಎಂಬ ಆಶಯವನ್ನೂ ಜನರ, ಜನಪ್ರತಿನಿಧಿಗಳ ಮತ್ತು ರಾಜಕೀಯ ನಾಯಕರ ಗಮನಕ್ಕೆ ತರಲಾಗುವುದು ಎಂದು ಹೇಳಿದ ಡಾ.ಯು.ಪಿ. ಶಿವಾನಂದರವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಮತದಾರರು ರಾಜರಾಗಿದ್ದು ಚುನಾವಣೆ ಮುಗಿದ ಬಳಿಕ ಮತ್ತೆ ಗುಲಾಮರಾಗಿಯೇ ಇರುತ್ತಾರೆ. ಈ ನಿಟ್ಟಿನಲ್ಲಿ ಈ ಚುನಾವಣೆಯನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಯೋಚಿಸಿರುವುದಾಗಿ ಹೇಳಿದರು.

ಸ್ಪರ್ಧಿಸುವ ಅನಿವಾರ್ಯತೆ ಇಲ್ಲ: ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಶಿವಾನಂದರು, ನಾನು ಸ್ಪರ್ಧಿಸಿಯೇ ಆಗಬೇಕು ಎಂದು ಇಲ್ಲ. 1985ರಲ್ಲಿ ಸುಳ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಅಂದು ನಾನು ಸ್ಪರ್ಧಿಸುವುದು ಅನಿವಾರ್ಯವಾಗಿತ್ತು. ಆದರೆ ಇವತ್ತು ನಮ್ಮ ವಿಚಾರಧಾರೆಗಳನ್ನು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳಿಗೆ, ವಿರೋಧ ಪಕ್ಷಗಳ ನಾಯಕರಿಗೆ, ಆ ಕ್ಷೇತ್ರದ ಮತದಾರರಿಗೆ ಮತ್ತು ಮಾಧ್ಯಮಗಳ ಮಿತ್ರರಿಗೆ ಮನವರಿಕೆ ಮಾಡುತ್ತೇನೆ. ಇಲ್ಲಿ ರಾಜಕೀಯ ಪಕ್ಷ ಯಾವುದೆನ್ನುವುದು ಮುಖ್ಯವಲ್ಲ. ಯಾವುದೇ ಕ್ಷೇತ್ರದ ಅಭ್ಯರ್ಥಿ, ತಾನು ಲಂಚ ಭ್ರಷ್ಟಾಚಾರದ ವಿರೋಧಿ ಎಂದು ಘೋಷಣೆ ಮಾಡಬೇಕು ಮತ್ತು ಲಂಚ ಭ್ರಷ್ಟಾಚಾರದ ವಿರುದ್ಧ ಅಭ್ಯರ್ಥಿಗಳಲ್ಲಿ ಮತದಾರರು ಪ್ರತಿಜ್ಞೆ ಮಾಡಿಸಬೇಕು ಮತ್ತು ಯಾವುದೇ ಅಧಿಕಾರಿ ಲಂಚ ಪಡೆದುಕೊಂಡದ್ದೇ ಆದರೆ ಆ ಹಣವನ್ನು ವಾಪಸ್ ತೆಗೆಸಿಕೊಡುವ ಕೆಲಸವಾಗಬೇಕು.ಆ ರೀತಿಯಲ್ಲಿ ಮತದಾರರಲ್ಲಿ ಪ್ರಜ್ಞೆ ಮೂಡಿಸುವುದೇ ನಮ್ಮ ಉದ್ದೇಶ. ಮುಖ್ಯಮಂತ್ರಿ ಅಭ್ಯರ್ಥಿ ಅಥವಾ ವಿರೋಧ ಪಕ್ಷದ ನಾಯಕರಾಗುವವರು ತಾವು ಅಧಿಕಾರಕ್ಕೆ ಬಂದರೆ ಲಂಚ, ಭ್ರಷ್ಟಾಚಾರವನ್ನು ನಿಲ್ಲಿಸುತ್ತೇವೆ. ಯಾವುದೇ ಅಧಿಕಾರಿ ಜನರಿಂದ ಲಂಚ ಪಡೆದರೆ ಆ ಹಣವನ್ನು ವಾಪಸ್ ತೆಗೆಸಿಕೊಡುತ್ತೇವೆ ಎಂದು ಪ್ರತಿಜ್ಞೆ ಮಾಡುವಂತಾಗಬೇಕು. ಜೊತೆಗೆ ಗ್ರಾಮ ಸ್ವರಾಜ್ಯದ ಹಳ್ಳಿಯಿಂದ ಡೆಲ್ಲಿಗೆ ಆಡಳಿತ ದೊರಕಲಿಕ್ಕಾಗಿ ಗ್ರಾಮಗಳಿಗೆ ಹೆಚ್ಚು ಅಽಕಾರ ನೀಡುವಂತಾಗಬೇಕು ಎಂಬುದೇ ನನ್ನ ಉದ್ದೇಶವಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಮೋದಿ, ರಾಹುಲ್ ಕ್ಷೇತ್ರದಲ್ಲೂ ಸ್ಪರ್ಧೆಗೆ ಬಯಸಿದ್ದೆ: ಲಂಚ, ಭ್ರಷ್ಟಾಚಾರದ ವಿರುದ್ಧದ ಆಂದೋಲನ ಮತ್ತು ಆಡಳಿತ ಹಳ್ಳಿಯಿಂದ ಡೆಲ್ಲಿಗೆ ಹೋಗಬೇಕು, ಜನರಿಗೆ ಗ್ರಾಮಸ್ವರಾಜ್ಯದ ಆಡಳಿತ ದೊರಕಬೇಕು ಎನ್ನುವ ಆಶಯವನ್ನು ರಾಷ್ಟ್ರವ್ಯಾಪಿಯಾಗಿ ಹರಡುವಂತೆ ಮಾಡುವ ಉದ್ದೇಶದಿಂದ 2019ರಲ್ಲಿ ಪ್ರಧಾನಿ ಮೋದಿಯವರ ವಾರಣಾಸಿ ಮತ್ತು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರ ಅಮೇಠಿ ಕ್ಷೇತ್ರದಲ್ಲೂ ಸ್ಪರ್ಧಿಸಲು ಬಯಸಿದ್ದೆ. ಆ ಕ್ಷೇತ್ರಗಳಲ್ಲಿ ಮತ್ತು ದೆಹಲಿ, ಬೆಂಗಳೂರು, ಉತ್ತರ ಪ್ರದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಮ್ಮ ವಿಚಾರಧಾರೆಯನ್ನು ತಿಳಿಸಲಾಗಿತ್ತು ಎಂದು ಡಾ.ಶಿವಾನಂದರು ಹೇಳಿದರು. ಲಂಚ ಭ್ರಷ್ಟಾಚಾರದ ವಿರುದ್ಧದ ಆಂದೋಲನ ಮನೆ ಮನೆಗೆ ತಲುಪಿ ಚುನಾವಣಾ ಸಂದರ್ಭದಲ್ಲಿ ಜನರು ಜಾಗೃತರಾಗುವಂತೆ ಮಾಡಲು ಮಾಧ್ಯಮದವರೂ ಪ್ರಯತ್ನಿಸಬೇಕೆಂದು ವಿನಂತಿ ಮಾಡಿದರು.

ಕ್ಷೇತ್ರ ಮೀಸಲಾತಿ ಬದಲಾಗಬೇಕು: ವಿಧಾನಸಭಾ ಕ್ಷೇತ್ರ ಮೀಸಲಾತಿ ಸುಳ್ಯದ ರೀತಿಯಲ್ಲಿ ಹಲವು ವರ್ಷಗಳ ಕಾಲ ಒಂದೇ ಕ್ಷೇತ್ರದಲ್ಲಿ ಇರದೆ ಎಲ್ಲಾ ಕ್ಷೇತ್ರಗಳಿಗೂ ರೊಟೇಷನ್ ಮೂಲಕ ಹೋಗಬೇಕು. ಅಲ್ಲಿಯ ಮೀಸಲು ಸಮುದಾಯದವರಿಗೂ ಸ್ಪರ್ಧಿಸಲು ಅವಕಾಶ ದೊರೆಯುವಂತಾಗಬೇಕು. ಸುಳ್ಯದಲ್ಲಿ ಸುಮಾರು 70 ವರ್ಷಗಳಿಂದ ಮೀಸಲಾತಿ ಇರುವುದರಿಂದ ಆ ಕ್ಷೇತ್ರದಲ್ಲಿರುವ ಸಾಮಾನ್ಯ ವರ್ಗದ ಜನರಿಗೆ ಅವಕಾಶ ಇಲ್ಲದಂತಾಗಿದೆ. ರೊಟೇಷನ್ ಇದ್ದಲ್ಲಿ ಅವರಿಗೂ ಅವಕಾಶ ದೊರೆಯುತ್ತಿತ್ತು ಮತ್ತು ಸಿಗಬೇಕು ಎಂಬ ಕಾರಣಕ್ಕಾಗಿ ಮೀಸಲಾತಿ ರೊಟೇಷನ್‌ನಲ್ಲಿ ಬದಲಾಗುತ್ತಿರಬೇಕು.ಎಲ್ಲ ಕ್ಷೇತ್ರಗಳಿಗೂ ಹೋಗಬೇಕು ಎಂಬುದನ್ನು ರಾಜ್ಯವ್ಯಾಪಿ ವಿಷಯವಾಗಿ ಮಾಡಲು ಈ ಚುನಾವಣೆಯನ್ನು ಉಪಯೋಗಿಸಲಿದ್ದೇನೆ ಎಂದು ಡಾ.ಯು.ಪಿ.ಶಿವಾನಂದರು ಹೇಳಿದರು.

ಬೆಳ್ತಂಗಡಿಯಲ್ಲಿ ‘ಸುದ್ದಿ’ಯ ಧ್ವನಿಯಡಗಿಸುವ ಪ್ರಯತ್ನ: ಪತ್ರಿಕಾ ಮಾಧ್ಯಮಗಳು ತಾವು ಹೇಳಿದಂತೆ ಕೇಳಬೇಕು, ಬರೆಯಬೇಕು,ವಿರೋಧಿಗಳ ಸುದ್ದಿಗೆ ಪ್ರಚಾರ ನೀಡಬಾರದು, ತಮ್ಮ ವಿರುದ್ಧ ಯಾವುದೇ ವಿಷಯವಿದ್ದರೂ, ಸತ್ಯದ ಘಟನೆಯಾಗಿದ್ದರೂ ಬರೆಯಬಾರದೆಂದು ರಾಜಕೀಯ ನಾಯಕರು, ಬಂಡವಾಳಶಾಹಿಗಳು, ಅಧಿಕಾರಸ್ಥರು ಬಯಸುವ ಅನುಭವ ಬಹುತೇಕ ಮಾಧ್ಯಮಗಳಿಗಿದ್ದು ಅದೆಲ್ಲವನ್ನೂ ಎದುರಿಸಿ ಯಶಸ್ವಿಯಾಗಿ ಕೆಲಸ ಮಾಡುತ್ತಿರುವ ನಡುವೆಯೇ ಪತ್ರಿಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಮತ್ತು ಅವರ ತಂಡದ ಕೆಲವರು ಮಾಡುತ್ತಿದ್ದಾರೆ. ಅದಕ್ಕಾಗಿ ‘ಸುದ್ದಿ’ ಪತ್ರಿಕಾ ಕಚೇರಿಯನ್ನೇ ಮುಚ್ಚಿಸುವ ಮೂಲಕ ‘ಸುದ್ದಿ’ ಪತ್ರಿಕೆಯ ಧ್ವನಿಯನ್ನು ಅಡಗಿಸುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಹೇಳಿದ ಡಾ.ಯು.ಪಿ.ಶಿವಾನಂದರು, ಅವರು ಹೊಸ ಪತ್ರಿಕೆ ತರುವುದಕ್ಕೆ ನಮ್ಮ ಆಕ್ಷೇಪವೇನೂ ಇರಲಿಲ್ಲ. ಆದರೆ, ಆ ನೆಪದಲ್ಲಿ ಮ್ಯಾನೇಜರ್ ಹೊರತು ಸುದ್ದಿಯ ಇತರ ಸಿಬ್ಬಂದಿಗಳನ್ನು ಆಪರೇಷನ್ ಮಾಡಿ, ಸುದ್ದಿಯ ಕಚೇರಿಯಲ್ಲಿ ಕೆಲಸಕ್ಕೆ ಯಾರೂ ಇಲ್ಲದಂತೆ ಮಾಡುತ್ತಿರುವುದನ್ನು ನಾವು ವಿರೋಧಿಸುತ್ತೇವೆ ಎಂದರು. ಪೂಂಜರ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಸಿಬ್ಬಂದಿಗಳು ನಮ್ಮವರೇ ಆಗಿರುವುದರಿಂದ ಅವರ ಕಚೇರಿಗೆ ಹೋಗಿ, ಪತ್ರಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ಶುಭಾಶಯ ಕೋರಿದ್ದೇನೆ. ಅವರು ಕೂಡಾ ಆ ಸಮಾರಂಭದಲ್ಲಿ ನನ್ನ ಕಾಲಿಗೆ ನಮಸ್ಕರಿಸಿರುವುದಲ್ಲದೆ, ಗುರುತಿಸಿ ಗೌರವಿಸಿದ್ದಾರೆ ಎಂಬುದು ನಮ್ಮೊಳಗಿನ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಸುದ್ದಿ ಬಳಗ ದ್ವೇಷದಿಂದ ಒಡೆದು ಆ ರೀತಿ ಹೊಸ ಪತ್ರಿಕೆ ಉದಯವಾಗಲು ಕಾರಣ ಎಂಬ ಅಪಪ್ರಚಾರವನ್ನು ತಡೆಯಲು ಮಾತ್ರ ಈ ವಿಚಾರವನ್ನು ಉಲ್ಲೇಖಿಸುತ್ತಿರುವುದಾಗಿಯೂ ಡಾ.ಶಿವಾನಂದರು ಹೇಳಿದರು. ಇಷ್ಟು ವರ್ಷದ ನಡೆದ ಸುದ್ದಿ ಪತ್ರಿಕೆಯನ್ನು ಆಯಾ ತಾಲೂಕಿನ ಸಿಬ್ಬಂದಿಗಳು ವಹಿಸಿಕೊಂಡು ನಡೆಸುವುದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಪತ್ರಿಕೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಯಸುವವರಿಂದ ರಕ್ಷಣೆ ನೀಡಬೇಕು ಮಾತ್ರವಲ್ಲ ಸುದ್ದಿ ಬಳಗಕ್ಕೆ ಬೆಂಬಲ ನೀಡಿ ಪತ್ರಿಕಾ ಸ್ವಾತಂತ್ರ್ಯವನ್ನು ಉಳಿಸುವ ಕೆಲಸಕ್ಕೆ ಕೈಜೋಡಿಸಬೇಕೆಂದು ಮಾಧ್ಯಮದವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು. ಸುಳ್ಯ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ, ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲು, ಮಂಗಳೂರು ವರದಿಗಾರ ಮಹಮ್ಮದ್ ಪೆರುವಾಯಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಚುನಾವಣೆಗೆ ನಿಲ್ಲುವುದೇ ಉದ್ದೇಶವಲ್ಲ

ನಾನೀಗ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ರಾಜ್ಯ ಮಟ್ಟದಲ್ಲಿ ಮಾಡಲು ಚಿಂತಿಸಿದ್ದೇನೆ. ಅದಕ್ಕಾಗಿ ಚುನಾವಣೆಗೆ ನಿಲ್ಲುವುದೇ ಉದ್ದೇಶವಲ್ಲ. ಆಯಾ ಕ್ಷೇತ್ರಗಳ ಜನರೆದುರು ಹೋಗಿ ಜಾಗೃತಿ ಮೂಡಿಸುವುದೇ ಮುಖ್ಯ ಉದ್ದೇಶ. ಅದಕ್ಕಾಗಿ ಪತ್ರಕರ್ತರೆದುರು ಹೋಗಿ ಪತ್ರಿಕಾಗೋಷ್ಠಿ ನಡೆಸಿ ನನ್ನ ನಿಲುವುಗಳನ್ನು ತಿಳಿಸುತ್ತೇನೆ. ಇದರಿಂದ ಒಂದಷ್ಟು ಜನರಿಗಾದರೂ ಜಾಗೃತಿಯಾದರೆ ಮನ ಮುಟ್ಟಿದರೆ ಅದೇ ನನ್ನ ಗೆಲುವು ಆಗುತ್ತದೆ ಎಂದು ಡಾ. ಶಿವಾನಂದರು ಹೇಳಿದರು.

ಚುನಾವಣಾ ಸಂದರ್ಭದಲ್ಲಿ ಮಾತಾಡುವ ಸ್ವಾತಂತ್ರ್ಯ ನಮ್ಮದು

ಪತ್ರಿಕೆಯನ್ನು ಬಿಟ್ಟು ಆಂದೋಲನದ ಕಡೆಗೆ ಹೆಜ್ಜೆ ಹಾಕಲು ಇದು ಸಕಾಲ. ಯಾಕಂದ್ರೆ ಚುನಾವಣಾ ಸಂದರ್ಭದಲ್ಲಿ ಮಾತಾಡುವ ಸ್ವಾತಂತ್ರ್ಯವನ್ನು ನಾವು ಬಳಸಿಕೊಳ್ಳಬೇಕು. ಸ್ಥಳೀಯ ಜನಪ್ರತಿನಿಧಿಗಳಿಗೆ ಶಕ್ತಿ ಕೊಡುವ ಜೊತೆ ಅವರಿಂದ ಮತದಾರರು ಭ್ರಷ್ಟಾಚಾರದ ವಿರುದ್ಧ ನಿಲ್ಲುವಂತೆ ಶಪಥ ಮಾಡಿಸಿಕೊಳ್ಳಬೇಕು.

ಸಂಭಾವ್ಯ ಮುಖ್ಯಮಂತ್ರಿ ಕ್ಷೇತ್ರ ಪರ್ಯಟನೆ ಯಾಕೆ
ಸಂಭಾವ್ಯ ಮುಖ್ಯಮಂತ್ರಿಗಳ ಕ್ಷೇತ್ರಕ್ಕೆ ತೆರಳಿ ಅಲ್ಲಿ ಲಂಚ-ಭ್ರಷ್ಚಾಚಾರ ವಿರೋಧಿ ಆಂದೋಲನ ನಡೆಸುತ್ತೇನೆ. ಜನರೊಂದಿಗೆ ಮಾತನಾಡಿ ಲಂಚವನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುತ್ತೇನೆ. ಮುಖ್ಯಮಂತ್ರಿಗಳು ಅಂದ್ರೆ ಇಡೀ ರಾಜ್ಯವನ್ನು ತಮ್ಮ ಕೈಯಲ್ಲಿ ಇರಿಸಿಕೊಳ್ಳಬಹುದಾದ ಪ್ರಭಾವವನ್ನು ಹೊಂದಿರುವವರು, ಈ ಕಾರಣಕ್ಕಾಗಿ ಅವರಿಗೆ ಈ ಬಗ್ಗೆ ತಿಳಿಯಪಡಿಸಿ, ಲಂಚ ಪಡೆದ ಅಧಿಕಾರಿಯಿಂದ ವಾಪಾಸ್ ಕೊಡಿಸಿ ಅಂತ ಜನ ಕೇಳುವಂತಾಗಬೇಕು. ಆಗ ಮುಖ್ಯಮಂತ್ರಿಗಳ ಇಂತಹ ಬದಲಾವಣೆಗಳಾದ್ರೆ ಶಾಸಕರಲ್ಲಿ ಆಗಿಯೇ ಆಗುತ್ತದೆ ಅದರಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲುತ್ತದೆ. ಅನ್ನುವ ನಂಬಿಕೆ ನನ್ನದಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ,ಬದಲಾಗಿ ಜನಜಾಗೃತಿ ಮೂಡಿಸುವ ಪ್ರಯತ್ನವಷ್ಟೇ ಮಾಡುತ್ತಿದ್ದೇನೆ.

ನಾನು ಹರೀಶ್ ಪೂಂಜರವರ ಒಳ್ಳೆಯ ಕೆಲಸಗಳ ಅಭಿಮಾನಿ. ಅವರ ತಪ್ಪುಗಳ ವಿರೋಧಿ. ಅದನ್ನು ತೋರಿಸುವುದು ಪತ್ರಿಕೆಯ ಕರ್ತವ್ಯ
ನಾನು ಪೂಂಜರ ವಿರುದ್ಧ ಚುನಾವಣೆಗಾಗಲೀ, ರಾಜಕೀಯಕ್ಕಾಗಲೀ ಸ್ಪರ್ಧಿಯಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ನಾನು ಹರೀಶ್ ಪೂಂಜರವರ ಒಳ್ಳೆಯ ಕೆಲಸಗಳ ಅಭಿಮಾನಿಯಾಗಿದ್ದೇನೆ. ಅವರಿಂದ ಅತ್ಯುತ್ತಮ ಕೆಲಸಗಳು ಆಗಿವೆ. ಆ ಬಗ್ಗೆ ನನಗೂ ಖುಷಿಯಿದೆ. ಅವರ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ತಪ್ಪುಗಳ್ನು ತೋರಿಸುವುದು ಅದನ್ನು ವಿರೋಧಿಸುವುದು ಪತ್ರಿಕೆಯ ಕರ್ತವ್ಯವೂ ಹೌದು. ಆದರೆ ಅವರ ತಪ್ಪುಗಳು ಹೊರಗೆ ಬರಬಾರದು ಎಂಬ ಕಾರಣಕ್ಕಾಗಿ ಪತ್ರಿಕೆಯನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಹರೀಶ್ ಪೂಂಜರವರು ಬಯಸುವುದು ಸರಿಯಲ್ಲ. ಅದನ್ನು ವಿರೋಧಿಸುತ್ತೇವೆ. ಐಪಿಎಲ್ ಫ್ರಾಂಚೈಸಿಯಲ್ಲಿ ಆಟಗಾರರನ್ನು ಖರೀದಿಸುವ ರೀತಿಯಲ್ಲಿ ಹಣ ಮತ್ತು ಅಧಿಕಾರದ ಬಲದಿಂದ ನಮ್ಮ ಪತ್ರಿಕಾ ಬಳಗವನ್ನು ಎರಡು ವರ್ಷದ ಕಾಂಟ್ರಾಕ್ಟ್ ಮಾಡಿಕೊಂಡು ಆಪರೇಷನ್ ಮಾಡಿದ್ದಾರೆ. ನಮ್ಮ ಹುಡುಗರು ಯಾವುದೋ ಆಮಿಷ, ಒತ್ತಡಕ್ಕೆ ಒಳಗಾಗಿ ಹೋಗಿದ್ದರೆ. ಅವರ ವಿರುದ್ಧ ನನ್ನ ಧ್ವನಿ ಇಲ್ಲ. ಬದಲಾಗಿ ಕುಲಾಲ್ ಸಂಪಾದಕತ್ವದಲ್ಲಿ ಅತ್ಯುತ್ತಮ ಪತ್ರಿಕೆ ಹೊರಬರುತ್ತಿದೆ. ಅದಕ್ಕೆ ಖುಷಿಯಿದೆ.

ಮೀಸಲಾತಿ ಒಂದೇ ಕ್ಷೇತ್ರಕ್ಕೆ ಯಾಕೆ-ಅದು ರೊಟೇಷನ್ ಆಗಬೇಕು: ಒಂದೇ ಕ್ಷೇತ್ರದಲ್ಲಿ ಮೀಸಲಾತಿ ಇರಬಾರದು. ಉದಾಹರಣೆಗೆ ಸುಳ್ಯದಲ್ಲಿ ಕಳೆದ 70 ವರ್ಷದಿಂದ ಮೀಸಲಾತಿ ಯಾಕಿದೆ. ಎಷ್ಟೋ ಜನ ಸುಳ್ಯದ ನಾಯಕರಿಗೆ ಚುನಾವಣಾ ರಾಜಕೀಯದಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಅಲ್ಲದೇ ಇತರ ಕ್ಷೇತ್ರಗಳ ದಲಿತರು ಯಾಕೆ ಅವಕಾಶಗಳಿಂದ ವಂಚಿತರಾಗಬೇಕು. ಅದಕ್ಕಾಗಿ ಮೀಸಲಾತಿಯನ್ನು ರೊಟೇಷನ್ ಪಾಲಿಸಿಯ ಮೂಲಕ ಎ ಕ್ಷೇತ್ರಗಳಿಗೂ ಬದಲಾಯಿಸುತ್ತಾ ಇರಬೇಕು. ಆಗ ಬೇರೆ ಕ್ಷೇತ್ರದ ದಲಿತರಿಗೂ ಅವಕಾಶ ಸಿಕ್ಕಂತಾಗುತ್ತದೆ.

ಅಂಗಾರರಿಗೆ ನನ್ನ ವಿರೋಧ ಇಲ್ಲ-ಅವರ ನೇತೃತ್ವದ ಮೀಸಲಾತಿ ತೆರವಾಗಲಿ
ಅಂಗಾರರು ಸುಳ್ಯದಿಂದ 6 ಬಾರಿ ಗೆದ್ದಿದ್ದಾರೆ. ಅವರು ಈಗ ಇತರೇ ಕ್ಷೇತ್ರದ ದಲಿತರಿಗೂ ಅವಕಾಶ ಸಿಗುವಂತಾಗಬೇಕು ಅಂತ ಹೋರಾಟ ನಡೆಸಬೇಕು. ಮೀಸಲಾತಿಯನ್ನು ರೊಟೇಷನ್ ಪಾಲಿಸಿಯಲ್ಲಿ ತರಲು ನೆರವಾಗಬೇಕು. ಜೊತೆಗೆ ಬೇರೆ ಕ್ಷೇತ್ರದ ದಲಿತರು ನಮಗೆ ಮೀಸಲಾತಿ ಕೊಡಿ ಅಂತ ಕೇಳುವಂತಾಗಬೇಕು. ಹೀಗೆ ಮಾಡಿದರೆ ಮಾತ್ರ ಸಾಮಾಜಿಕ ನ್ಯಾಯ ಆಗುತ್ತದೆ.

LEAVE A REPLY

Please enter your comment!
Please enter your name here