ಪುತ್ತೂರು: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ ದೇಶದಾದ್ಯಂತ ಪ್ರಧಾನ ಮಂತ್ರಿಯವರ ಪಿಎಂ ಶ್ರೀ ಯೋಜನೆಯಡಿ ಶಾಲೆಗಳ ಆಯ್ಕೆ ನಡೆದಿದ್ದು ಪುತ್ತೂರಿನ ವೀರಮಂಗಲ ಸ.ಹಿ.ಪ್ರಾ.ಶಾಲೆ ಹಾಗೂ ಕಡಬ ತಾಲೂಕಿನ ನೆಲ್ಯಾಡಿ ಸ.ಹಿ.ಪ್ರಾ.ಶಾಲೆ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು 8 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಸರಕಾರಿ ಶಾಲೆಗಳಿಗೆ ಶಕ್ತಿ ತುಂಬಿ ನವೋದಯ ಶಾಲೆಯ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೇಂದ್ರ ಸರಕಾರ ಆರಂಭಿಸಿದ್ದು ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಅಂಗವಾಗಿ ಪಿಎಂಶ್ರೀ ಯೋಜನೆಯಡಿ ಶಾಲೆಗಳನ್ನು ಆಯ್ಕೆ ಮಾಡಿದೆ. ಕರ್ನಾಟಕದ 129 ಸರಕಾರಿ ಶಾಲೆಗಳು ಯೋಜನೆಯಡಿ ಆಯ್ಕೆಯಾಗಿದ್ದು ಇದರಲ್ಲಿ ದ.ಕ. ಜಿಲ್ಲೆಯ 8 ಶಾಲೆಗಳು ಆಯ್ಕೆಯಾಗಿವೆ. ಈ ಶಾಲೆಗೆ ಬೇಕಿರುವ ಮೂಲ ಸೌಕರ್ಯ ಹಾಗೂ ಕಲಿಕೆಗೆ ಪೂರಕವಾದ ಪರಿಕರಗಳನ್ನು ಮುಂದಿನ ಐದು ವರ್ಷದಲ್ಲಿ ಕೇಂದ್ರ ಸರಕಾರದಿಂದ ಅಗತ್ಯಗಳಿಗೆ ತಕ್ಕಂತೆ ಒದಗಿಸಲಾಗುತ್ತದೆ. ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಎನ್ನುವ ಸ್ಕೀಂನಲ್ಲಿ ದೇಶದಲ್ಲಿ ಒಟ್ಟು 14,500 ಶಾಲೆಗಳನ್ನು ಗುರುತಿಸಲಾಗಿದೆ.
ಸೌಲಭ್ಯಗಳು: ಈ ಯೋಜನೆಯಲ್ಲಿ ಶಾಲೆಗೆ ಅಗತ್ಯವಿರುವ ಸ್ಮಾರ್ಟ್ಲ್ಯಾಬ್, ಸ್ಮಾರ್ಟ್ ತರಗತಿಗಳು, ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೊಠಡಿ, ತರಗತಿ ಕೊಠಡಿ, ಶೌಚಾಲಯ ಸೇರಿದಂತೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಧಿಸಲು ಬೇಕಾದ ಸಲಕರಣೆಗಳನ್ನು ಒದಗಿಸಲಾಗುತ್ತದೆ. ಪಠ್ಯಕ್ರಮದ ರಚನೆ ಮತ್ತು ಬೋಧನಾ ಶೈಲಿಯನ್ನು ವಿವಿಧ ಹಂತಗಳಾಗಿ ಈ ಯೋಜನೆಯಡಿ ವಿಂಗಡಿಸಲಾಗಿದೆ. ಅಡಿಪಾಯ, ಪೂರ್ವಸಿದ್ದತೆ, ಮಧ್ಯಮ ಮತ್ತು ಮಾಧ್ಯಮಿಕ ಎಂಬ ವಿಭಾಗಗಳಾಗಿ ವಿಭಜಿಸಲಾಗಿದೆ. ಅಡಿಪಾಯದ ವರ್ಷಗಳು (ಪ್ರಿ-ಸ್ಕೂಲ್ ಮತ್ತು 1, 2ನೇ ತರಗತಿ) ಆಟದ ಆಧಾರಿತ ಕಲಿಕೆಯನ್ನು ಒಳಗೊಂಡಿರುತ್ತದೆ. ಪೂರ್ವಸಿದ್ಧತಾ ಹಂತದಲ್ಲಿ (3ರಿಂದ 5ನೇ ತರಗತಿ) ಕೆಲವು ಔಪಚಾರಿಕ ತರಗತಿಯ ಬೋಧನೆಯೊಂದಿಗೆ ಲಘು ಪಠ್ಯಪುಸ್ತಕಗಳನ್ನು ಪರಿಚಯಿಸಬೇಕು. ಮಧ್ಯಮ ಹಂತದಲ್ಲಿ (6ರಿಂದ 8ನೇ ತರಗತಿ) ವಿಷಯ ಶಿಕ್ಷಕರನ್ನು ಪರಿಚಯಿಸಬೇಕು, ಸೆಕೆಂಡರಿ ಹಂತದಲ್ಲಿ (9ರಿಂದ 12ನೇ ತರಗತಿ) ಕಲೆ ಮತ್ತು ವಿಜ್ಞಾನ ಅಥವಾ ಇತರ ವಿಭಾಗಗಳು ಒಳಗೊಂಡಿರುತ್ತದೆ.
ಆಯ್ಕೆ ಪ್ರಕ್ರಿಯೆ: ಎಲ್ಲ ಜಿಲ್ಲೆಯಿಂದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಆನ್ಲೈನ್ ಮೂಲಕ ಕೇಂದ್ರಕ್ಕೆ ಅಪ್ ಲೋಡ್ ಮಾಡಲಾಗಿದೆ. ಕೇಂದ್ರದಿಂದ ಪರಿಶೀಲಿಸಿ, ಆಯಾ ಜಿಲ್ಲೆಗಳಲ್ಲಿ ಆಯ್ದ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿವೆ. ಆಯ್ಕೆಯಾಗಿರುವ ಎಲ್ಲಾ ಶಾಲೆಗಳಿಗೂ ಮಾಹಿತಿಯನ್ನು ಒದಗಿಸಲಾಗಿದೆ.
ಪರಿವರ್ತನೆ : ಆಯ್ಕೆಯಾಗಿರುವ ಶಾಲೆಗಳು ತಮ್ಮ ಶಾಲೆಗೆ ಅಗತ್ಯವಿರುವ ಭೌತಿಕ ಸೌಲಭ್ಯ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಪರಿಕರಗಳ ಬಗ್ಗೆ ಆನ್ಲೈನ್ ಮೂಲಕವೇ ಪ್ರಸ್ತಾವನೆ ಸಲ್ಲಿಸಬೇಕು. ಅದರಂತೆ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಸೌಲಭ್ಯ ಒದಗಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಒಂದೇ ಸೂರಿನಡಿ ಬರುವಂತೆ ಹಂತಹಂತವಾಗಿ ಪರಿವರ್ತನೆ ಮಾಡಲಿದೆ.
ಶಾಲೆಯಲ್ಲಿರುವ ಸವಲತ್ತುಗಳು, ಆಡಳಿತ ವ್ವವಸ್ಥೆ, ಶೈಕ್ಷಣಿಕ ವ್ಯವಸ್ಥೆ, ಶಿಕ್ಷಕರ ಚಟುವಟಿಕೆಗಳ ಬಗ್ಗೆ ಹಾಗೂ ರಾಷ್ಟ್ರಮಟ್ಟದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಾಧನೆ ಗುರುತಿಸಲಾಗಿದೆ. ಅಲ್ಲದೆ ಶಾಲೆಯಲ್ಲಿರುವ ಒಟ್ಟು ಮೂಲಭೂತ ಸೌಕರ್ಯಗಳನ್ನು ಗುರುತಿಸಿ ನಮ್ಮ ಶಾಲೆಯನ್ನು ಆಯ್ಕೆ ಮಾಡಲಾಗಿದೆ.
ತಾರನಾಥ ಸವಣೂರು, ಮುಖ್ಯಶಿಕ್ಷಕರು,
ವೀರಮಂಗಲ ಸ.ಹಿ.ಪ್ರಾ.ಶಾಲೆ
ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಗೆ 75 ವರ್ಷಗಳ ಇತಿಹಾಸವಿದೆ. ಈಗ 1 ರಿಂದ 8ರ ತನಕ ತರಗತಿ ನಡೆಯುತ್ತಿದೆ. ನಾಲ್ಕು ವರ್ಷದಿಂದ ಎಲ್ಕೆಜಿ, ಯುಕೆಜಿ ಹಾಗೂ 1ನೇ ತರಗತಿಯಿಂದಲೇ ಆಂಗ್ಲಮಾಧ್ಯಮದಲ್ಲೂ ಶಿಕ್ಷಣ ನೀಡಲಾಗುತ್ತಿದೆ. ಎಲ್ಕೆಜಿ ಹಾಗೂ ಯುಕೆಜಿಯಲ್ಲಿ 53 ಮಕ್ಕಳಿದ್ದು ಶಾಲೆಯಲ್ಲಿ ಒಟ್ಟು 456 ಮಕ್ಕಳು ಕಲಿಯುತ್ತಿದ್ದಾರೆ. ಈ ಸಲ ವಿವೇಕ ಯೋಜನೆಯಡಿ 2 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದೀಗ ಪಿಎಂಶ್ರೀ ಯೋಜನೆಯಡಿ ಅಭಿವೃದ್ಧಿಗೆ ನಮ್ಮ ಶಾಲೆ ಆಯ್ಕೆಗೊಂಡಿರುವ ಸುದ್ದಿ ತಿಳಿದು ಸಂತಸವಾಗಿದೆ. ಶಾಲೆ ಇನ್ನಷ್ಟೂ ಅಭಿವೃದ್ಧಿ ಹೊಂದಲಿದೆ.
-ಆನಂದ ಅಜಿಲ, ಮುಖ್ಯಶಿಕ್ಷಕರು, ಸರಕಾರಿ ಉ.ಹಿ.ಪ್ರಾ.ಶಾಲೆ ನೆಲ್ಯಾಡಿ