ಅತಿ ಹೆಚ್ಚು ಪದವಿ, ಓದುಗ ಡಾ. ಬಿ.ಆರ್ ಅಂಬೇಡ್ಕರ್ – ಲೋಕೇಶ್ ಎಸ್.ಆರ್
ಪುತ್ತೂರು: ದೇಶದಲ್ಲಿ ಅತಿ ಹೆಚ್ಚು ಪದವಿ ಮತ್ತು ಓದುಗನಾಗಿರುವವರು ಡಾ. ಬಿ.ಆರ್.ಅಂಬೇಡ್ಕರ್ ಅವರು ಮಾತ್ರ. ಅವರ ಜೀವನ ಬದುಕಿನ ಪುಸ್ತಕ ಓದಿದ ವ್ಯಕ್ತಿ ಖಂಡಿತಾ ಪ್ರಬುದ್ಧತೆಯೆಡೆಗೆ ಹೋಗುತ್ತಾನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಎ.14ರಂದು ತಾಲೂಕು ಆಡಳಿತ ಸೌಧದದಲ್ಲಿರುವ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು. ಬಾಲ್ಯದ ದಿನಗಳಲ್ಲಿ ಅವರು ಓದುವಿಕೆಗೆ ಬಹಳ ಕಷ್ಟ ಇತ್ತು. ಅವರ ಕಷ್ಟ ನಮಗೆ ಬರುತ್ತಿದ್ದರೆ ನಾವು ಕಂಡಿತಾ ಅವರ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಆದರೂ ಅವರು ಶಿಷ್ಯವೇತನದದ ಮೂಲಕ ವಿದೇಶದಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ 18 ಗಂಟೆ ನಿರಂತರ ಓದುತ್ತಿದ್ದರು. ಅವರ ಓದುವಿಕೆಯಿಂದಾಗಿ ಅವರು ಅತಿ ಹೆಚ್ಚು ಪದವಿ ಪಡೆದರು ಎಂದರು.
ಸ್ವಾತಂತ್ರ್ಯ ನಂತರವೂ ಹಿಂದುಳಿದವರಿದ್ದಾರೆ ಎಂಬುದು ಆಶ್ಚರ್ಯಕರ:
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಅವರು ಮಾತನಾಡಿ ಎಲ್ಲರಿಗೂ ಸಮಾನತೆಯನ್ನು ತಂದಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆ ಬಹಳ ದೊಡ್ಡದು. ಅವರು ಎಲ್ಲರು ಶಿಕ್ಷಿತರಾಗಬೇಕೆಂದು ಪ್ರಯತ್ನ ಪಟ್ಟರು. ಆದರೆ ಇವತ್ತು ಸ್ವಾತಂತ್ರ್ಯ ಬಂದು ಅನೇಕ ವರ್ಷಗಳಾದರೂ ಇನ್ನೂ ಅನೇಕರು ಹಿಂದುಳಿದವರಿದ್ದರೆ ಎಂಬುದು ಆಶ್ಚರ್ಯಕರ ಎಂದರು. ತಹಸೀಲ್ದಾರ್ ಶಿವಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಗ್ರೇಡ್ 2 ತಹಸೀಲ್ದಾರ್ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ನಾಯ್ಕ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.