ಕೆರೆಮೂಲೆಯ ಕೆರೆ ಅಭಿವೃದ್ಧಿಗೆ ಚಾಲನೆ-ಪತ್ರಿಕಾ ವರದಿ ಬಳಿಕ ಎಚ್ಚೆತ್ತ ಗ್ರಾ.ಪಂ.

0

ಉಪ್ಪಿನಂಗಡಿ: ಇಲ್ಲಿನ ಮಠದ ಬಳಿಯ ಕೆರೆಮೂಲೆಯ ಸಾರ್ವಜನಿಕ ಕೆರೆಯ ಅಭಿವೃದ್ಧಿ ಕಾರ್ಯವು ಪತ್ರಿಕಾ ವರದಿಯ ಬಳಿಕ ಆರಂಭವಾಗಿದ್ದು, ಈ ಕೆರೆಯು ಒಟ್ಟು 27 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳಲಿದೆ.


ಗ್ರಾ.ಪಂ.ನ ಆರನೇ ವಾರ್ಡ್‌ನಲ್ಲಿ ಪುರಾತನ ಸಾರ್ವಜನಿಕ ಕೆರೆಯೊಂದಿದ್ದು, ಇದರಿಂದಾಗಿ ಈ ಪ್ರದೇಶಕ್ಕೆ ಕೆರೆಮೂಲೆ ಎಂದೇ ಹೆಸರು ಬಂದಿತ್ತು. ಎಂಟು ವರ್ಷಗಳ ಹಿಂದೆ ಕೆರೆಯನ್ನು ಉಳಿಸಬೇಕೆಂಬ ನಿಟ್ಟಿನಲ್ಲಿ ಸರಕಾರ ಹೂಳೆತ್ತಿ, ಭಾಗಶಃ ತಡೆಗೋಡೆಯನ್ನು ನಿರ್ಮಿಸಿತ್ತು. ಬಳಿಕ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾದ ಕೆರೆಯು ಕ್ರಮೇಣ ಹೂಳು ತುಂಬಿಕೊಂಡಿದ್ದು, ಈ ಹಿಂದೆಲ್ಲಾ ಬಿರು ಬೇಸಿಗೆಯಲ್ಲೂ ಬತ್ತದ ಈ ಕೆರೆಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಮಾತ್ರ ನೀರಿರುತ್ತಿತ್ತು. ಉಪ್ಪಿನಂಗಡಿ ಗ್ರಾ.ಪಂ. ಈ ಕೆರೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ 15 ಲಕ್ಷ ಹಾಗೂ ಉದ್ಯೋಗ ಖಾತ್ರಿ ಯೋಜನೆಯಿಂದ 12 ಲಕ್ಷ ರೂಪಾಯಿ ಹೀಗೆ ಒಟ್ಟು 27 ಲಕ್ಷ ರೂಪಾಯಿಯಲ್ಲಿ ಈ ಕೆರೆಯ ಅಭಿವೃದ್ಧಿಗೆ ಚಿಂತಿಸಿತ್ತು. ಇದಕ್ಕೆ 2022-23ನೇ ಸಾಲಿನಲ್ಲಿ ಮಂಜೂರಾತಿ ಕೂಡಾ ದೊರಕಿತ್ತು. ಆದರೂ ಈ ಬಾರಿಯ ಬೇಸಿಗೆಯಲ್ಲಿ ಕೆರೆ ಸಂಪೂರ್ಣ ಬತ್ತಿ ಹೋಗಿದ್ದರೂ, ಇದರ ಅಭಿವೃದ್ಧಿ ಕಾಮಗಾರಿ ನಡೆದಿರಲಿಲ್ಲ. ಈ ಬಗ್ಗೆ `ಅಭಿವೃದ್ಧಿಗೆ ಮೊದಲೇ ಬತ್ತಿದ ಕೆರೆಮೂಲೆಯ ಕೆರೆ’ ಎಂಬ ಶೀರ್ಷಿಕೆಯಡಿ ಪತ್ರಿಕೆಯು ವರದಿ ಪ್ರಕಟಿಸಿದ್ದು, ಬಳಿಕ ಎಚ್ಚೆತ್ತುಕೊಂಡ ಗ್ರಾ.ಪಂ. ಅದರ ಅಭಿವೃದ್ಧಿಗೆ ಮುಂದಾಗಿದೆ. ಕೆರೆಯ ಹೂಳೆತ್ತಿ, ಉಳಿಕೆಯಾದ ಕೆರೆ ದಂಡೆಯ ಕಾಮಗಾರಿಯನ್ನು ಈ ಅನುದಾನದಲ್ಲಿ ಮಾಡಲಾಗುವುದು. ಈ ಕಾಮಗಾರಿಯನ್ನು ಎರಡು ತಿಂಗಳೊಳಗೆ ಮುಗಿಸಲಾಗುವುದು ಎಂದು ಗುತ್ತಿಗೆದಾರ ಉಸ್ಮಾನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here