ಪುತ್ತೂರು : ಪಟ್ಟೆ ವಿದ್ಯಾಸಂಸ್ಥೆಗಳು, ಬಡಗನ್ನೂರು, ಪುತ್ತೂರು ಇಲ್ಲಿ ಏಳು ದಿನಗಳಿಂದ ನಡೆದ ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ಶಿಬಿದರ ಸಮಾರೋಪ ಸಮಾರಂಭವನ್ನು ಎ.15ರಂದು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ ಅತಿ ವಂ| ಲಾರೆನ್ಸ್ ಮಸ್ಕರೇನ್ಹಸ್ರ ವರು “ವಿದ್ಯಾರ್ಥಿಗಳಿಗೆ ಪರಿಸರ ಪ್ರೀತಿ, ಸಹಬಾಳ್ವೆ, ಶಿಸ್ತಿನ ಜೀವನ ನಡೆಸಲು ಎನ್ ಎಸ್ ಎಸ್ ಶಿಬಿರಗಳು ಸಹಕಾರಿಯಾಗುತ್ತವೆ. ಇಂತಹ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುವುದು.
ವಿದ್ಯಾರ್ಥಿಗಳಿಗೆ ಸೇವೆಯ ಮಹತ್ವ ಹಾಗೂ ತಮ್ಮ ಶ್ರಮದ ಬೆಲೆ ಈ ಶಿಬಿರದಲ್ಲಿ ಭಾಗವಹಿಸಿದ್ದರಿಂದ ಅರಿವಿಗೆ ಬಂದಿದೆ” ಎಂದು ಹೇಳಿದರು.
ಶಿಬಿರದ ಸಮಾರೋಪ ಭಾಷಣವನ್ನು ಮಾಡಿದ ಬೆಟ್ಟಂಪಾಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹರಿಪ್ರಸಾದ್ ರವರು “ ಕಾಲೇಜುಗಳಲ್ಲಿ ನಡೆಸುವ ಏಕದಿನ ಎನ್ ಎಸ್ ಎಸ್ ಶಿಬಿರಗಳಲ್ಲಿ ಭಾಗವಹಿಸಿದಲ್ಲಿ ವಿದ್ಯಾರ್ಥಿಗಳಿಗೆ ಸೇವೆಯ ಅನುಭವ ದೊರಕುತ್ತದೆ. ವಾರ್ಷಿಕ ಶಿಬಿರಗಳು ಶಿಬಿರಾರ್ಥಿಗಳ ಸರ್ವತೋಮುಖ ಬೆಳವಣೆಗೆಗೆ ಕಾರಣವಾಗುತ್ತವೆ. ಏಳು ದಿನಗಳ ಸಹಬಾಳ್ವೆ ಶಿಬಿರಾರ್ಥಿಗಳಿಗೆ ಮುಂದೆ ಯಾವುದೇ ಪರಿಸರದಲ್ಲೂ ಜೀವನ ನಡೆಸಲು ಸಹಕಾರಿಯಾಗುತ್ತವೆ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣ, ಆತ್ಮವಿಶ್ವಾಸ ಹೆಚ್ಚಿಸಿ ಸಭಾಕಂಪನವನ್ನು ಹೋಗಲಾಡಿಸುತ್ತವೆ. ಸಮುದಾಯ ಸೇವೆಯ ಮೂಲಕ ಶಿಬಿರಾರ್ಥಿಗಳ ವ್ಯಕ್ತಿತ್ತವದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲ ಶಕ್ತಿ ಎನ್ ಎಸ್ ಎಸ್ ಶಿಬಿರಗಳಿಗಿದೆ. ಶಿಬಿರಾರ್ಥಿಯು ಮುಂದೆ ಪರಿಸರಪ್ರಜ್ಞೆ, ದೇಶಪ್ರೇಮ, ಸೇವಾ ಮನೋಭಾವವುಳ್ಳ ವ್ಯಕ್ತಿಯಾದಲ್ಲಿ ಅದುವೇ ರಾಷ್ಟ್ರಕ್ಕೆ ನೀಡುವ ಉತ್ತಮ ಕೊಡುಗೆಯಾಗಿದೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಹವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ| ಸ್ಟ್ಯಾನಿ ಪಿಂಟೋ ರವರು “ತರಗತಿಯ ನಾಲ್ಕು ಗೋಡೆಗಳ ನಡುವೆ ಕಲಿತ ಪಾಠಗಳು ಜ್ಷಾನವನ್ನು ವೃದ್ಧಿಸಿದರೆ ಇಂತಹ ಶಿಬಿರಗಳು ಜೀವನಾನುಭವವನ್ನು ಹೆಚ್ಚಿಸುತ್ತವೆ. ಇಲ್ಲಿ ಕಲಿತ ಜೀವನ ಪಾಠವು ಶಿಬಿರಾರ್ಥಿಗಳಿಗೆ ತಮ್ಮ ಜೀವನದುದ್ದಕ್ಕೂ ಅವಿಸ್ಮರಣೀಯವಾಗಿರುತ್ತದೆ” ಎಂದು ಹೇಳಿ ಉರಿವ ಬಿಸಿಲಿನಲ್ಲಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಮಾರ್ಗದರ್ಶನ ನೀಡಿದ ಶಿಬಿರಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಭಾಹವಹಿಸಿದ ಪಟ್ಟೆ ಶ್ರೀಕೃಷ್ಣ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರಾಜಗೋಪಾಲ್ ರವರು “ಇಂತಹ ಶಿಬಿರಗಳು ನಮ್ಮಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡುತ್ತವೆ. ಕಳೆದ ಏಳು ದಿನಗಳಲ್ಲೂ ಶಿಸ್ತು ಹಾಗೂ ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವ ಶಿಬಿರಾರ್ಥಿಗಳ ಪರಿಶ್ರಮ ಶ್ಲಾಘನೀಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗೌರವಾನ್ವಿತ ಅತಿಥಿಯಾದ ನಹುಷಾ ಪಿ ಬಿ, ನಿರ್ದೇಶಕರು, ಪಟ್ಟೆ ವಿದ್ಯಾಸಂಸ್ಥೆಗಳು ಇವರು ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಬಗ್ಗೆ ಅರಿವು ಮೂಡಿಸಲು ಪಟ್ಟೆ ವಿದ್ಯಾಸಂಸ್ಥೆಗಳನ್ನು ಆಯ್ಕೆ ಮಾಡಿದುದಕ್ಕೆ ಸಂತೋಷ ವ್ಯಕ್ತಪಡಿಸಿದ ಅವರು “ಕಳೆದ ಏಳು ದಿನಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಕಾರ್ಯನಿರ್ವಹಿಸಿದ ರೀತಿಯು ಉತ್ತವವಾಗಿತ್ತು. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಕಲಿತರೆ ಇಂತಹ ಶಿಬಿರಗಳಲ್ಲಿ ಜೀವನ ಪಾಠ ಕಲಿಯುತ್ತಾರೆ” ಎಂದು ಹೇಳಿದರು.
ಶಿಬಿರಾರ್ಥಿಗಳಾದ ವೈಷ್ಣವಿ ಹಾಗೂ ಜೈನುದ್ದೀನ್ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಏಳು ದಿನಗಳಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಸವಿವರ ವರದಿಯನ್ನು ಶಿಬಿರಾರ್ಥಿಗಳಾದ ಚಸ್ಮಿಕಾ ಹಾಗೂ ನಿಕ್ಷೀತ್ ವಾಚಿಸಿದರು. ಶಿಬಿರಾಧಿಕಾರಿಗಳಾದ ಪುಷ್ಪ ಎನ್ ಸ್ವಾಗತಿಸಿದರು ಹಾಗೂ ವಾಸುದೇವ ಎನ್ ವಂದಿಸಿದರು. ಸಹಶಿಬಿರಾಧಿಕಾರಿಯಾದ ಚೈತ್ರ ಎನ್ ಪಿ ಶಿಬಿರಕ್ಕೆ ಸಹಾಯಹಸ್ತ ನೀಡಿದವರ ವಿವರಗಳನ್ನು ತಿಳಿಸಿದರು. ಸಹಶಿಬಿರಾಧಿಕಾರಿ ಧನ್ಯ ಪಿ ಟಿ ಕಾರ್ಯಕ್ರಮ ನಿರೂಪಿಸಿದರು.