ಪುತ್ತೂರು: ಪುತ್ತೂರಿನ ರಾಜಕೀಯ ಬೆಳವಣಿಗೆಯ ಕುರಿತು ಎಪ್ರಿಲ್ 18ರಂದು ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಕೊನೇಯ ಪುಟದಲ್ಲಿ ಪ್ರಕಟವಾದ ‘ಮನವೊಲಿಸುವುದನ್ನು ನಿಲ್ಲಿಸಿದ ಆರ್‌ಎಸ್‌ಎಸ್.. ಮಾಸ್ಟರ್‌ಪ್ಲ್ಯಾನ್ ರೂಪಿಸಿದ ಸಂಘ ಪರಿವಾರಪುತ್ತಿಲರನ್ನು ಮಣಿಸಲು ಜಗದೀಶ್ ಕಾರಂತರನ್ನು ಫೀಲ್ಡ್‌ಗಿಳಿಸಲು ಚಿಂತನೆ ಫೈರ್‌ಬ್ರಾಂಡ್ ನಾಯಕ ಜಗದೀಶ್ ಕಾರಂತರಿಗೆ ಬುಲಾವ್’ ಎಂಬ ವಿಶೇಷ ವರದಿ ಪರ ವಿರೋಧ ಭಾರೀ ಚರ್ಚೆಗೆ ಕಾರಣವಾಗಿದೆ. ಫೇಸ್‌ಬುಕ್, ವಾಟ್ಸ್‌ಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಲ್ಲದೆ, ಬಿಜೆಪಿ ಸಹಿತ ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ವಿಚಾರದ ಕುರಿತು ಚರ್ಚೆ ನಡೆಸಲಾರಂಭಿಸಿದ್ದಾರೆ. ಜಗದೀಶ್ ಕಾರಂತ್ ಅವರು ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿರುವವರೇ ಹೊರತು ರಾಜಕೀಯದಲ್ಲಿ ತೊಡಗಿಸಿಕೊಂಡವರಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನಾಂತರ ದೂರ ಕಾಯ್ದುಕೊಳ್ಳುವ ಕಾರಂತರು ಖಂಡಿತವಾಗಿಯೂ ಈ ವಿಚಾರಕ್ಕೆ ಪುತ್ತೂರಿಗೆ ಬರಲಾರರು ಎಂದು ಕಾರಂತರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ವಿಚಾರಕ್ಕಾಗಿ ಕಾರಂತರು ಬರಲಾರರು. ಆದರೆ, ಸಂಘಟನೆಯೊಳಗೆ ಬಿರುಕು ಇರಬಾರದು. ಹಿಂದು ಜಾಗರಣ ವೇದಿಕೆಯೊಳಗಿನ ಕಾರ್ಯಕರ್ತರು ಸಂಘ ಪರಿವಾರದ ಶಿಸ್ತು ಮೀರಿ ಹೋಗಬಾರದು ಎಂಬ ಕಾರಣಕ್ಕಾಗಿ ಗೊಂದಲ ಸರಿ ಪಡಿಸಲು ಕಾರಂತರು ಪುತ್ತೂರಿಗೆ ಬರುತ್ತಾರೆ ಎಂದು ಕಾರಂತ್ ಅವರ ಆಪ್ತರಾಗಿರುವ ಇತರ ನಾಯಕರು ಪ್ರತಿಕ್ರಿಯಿಸಿದ್ದಾರೆ. ಒಟ್ಟು ವಿಚಾರ ಕುತೂಹಲ ಮೂಡಿಸಿದ್ದು ಜಗದೀಶ್ ಕಾರಂತರ ಮುಂದಿನ ನಡೆಯತ್ತ ಎಲ್ಲರ ಚಿತ್ತ ಹರಿದಿದೆ.
ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ: ಅರುಣ್ ಕುಮಾರ್ ಪುತ್ತಿಲರವರನ್ನು ಮಣಿಸಲು ಜಗದೀಶ್ ಕಾರಂತರು ಪುತ್ತೂರಿಗೆ ಬರುವುದು ಸರಿಯೇ ತಪ್ಪೇ ಎಂಬ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಹಿಂದೆ ಸಂಘ ಪರಿವಾರದಲ್ಲಿ ಸಕ್ರಿಯರಾಗಿದ್ದು ಪ್ರಸ್ತುತ ವಿವಿಧ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸುಳ್ಯದ ಲಕ್ಷ್ಮೀಶ ಗಬ್ಲಡ್ಕರವರು ಸೋಶಿಯಲ್ ಮೀಡಿಯಾದಲ್ಲಿ ಇದರ ಚರ್ಚೆಗೆ ನಾಂದಿ ಹಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಲಕ್ಷ್ಮೀಶ ಗಬ್ಲಡ್ಕರವರು ‘ಅವತ್ತು ಅರುಣ ಪುತ್ತಿಲ ಶ್ರೀರಾಮ ಸೇನೆಯ ಮೂಲಕ ವ್ಯಾಪಿಸಿದಾಗ ತಿರುಪತಿ ಬಚಾವೋ ಹೆಸರಿನಲ್ಲಿ ದೊಡ್ಡ ಸಮಾವೇಶ ಮಾಡಿ ಕಾರಂತರ ಭಾಷಣ ಮಾಡಿಸಿದ ಸಂಘ ಪರಿವಾರ. ಕಳೆದ ವರ್ಷ ಪುತ್ತೂರಿನಲ್ಲಿ ಏಕಾಏಕಿ ಹಿಂದು ಸಮಾವೇಶ ಮಾಡಿ, ಕಾರಂತರನ್ನು ಭಾಷಣ ಮಾಡಿಸಿ, ಇಡೀ ಸಮಾವೇಶದಲ್ಲಿ ಪುತ್ತಿಲರನ್ನು ಹೊರಗೆ ಇಟ್ಟದ್ದು ಆಯಿತು. ಕಾರಂತರ ವೇಗ ಹೆಚ್ಚು ಇದ್ದಾಗ ಮುತಾಲಿಕರನ್ನೂ, ಮುತಾಲಿಕ್ ವೇಗ ಇದ್ದಾಗ ಕಾರಂತರನ್ನು ಅಡ್ಡ ಇಟ್ಟರು. ನಿಜವಾಗಿ ಈಗ ಕಾರಂತರು ಭಾಷಣಕ್ಕೆ ಬರಬಾರದು, ಕಾರಂತರು ಪರಮ ಪ್ರಾಮಾಣಿಕರು. ದೇಶದ ಬಗ್ಗೆ ಅವರ ಕಾಳಜಿ ಪ್ರಶ್ನಾತೀತ. ಆದರೆ, ಭಾಷಣ ನಾಟಕೀಯ ಆಗುತ್ತಿದೆ. ಹೊಸ ವಿಷಯ ಸೃಜನಶೀಲತೆ ಇಲ್ಲ. ಬಂದರೆ ಅವರ ಗೌರವ ಕಡಿಮೆ ಆಗುತ್ತದೆ. ಪುತ್ತಿಲರ ಎಲ್ಲಾ ನಿಲುವುಗಳನ್ನು ನಾನು ಒಪ್ಪದೇ ಇದ್ದರೂ ಅವರನ್ನು ದಮನಿಸುವುದನ್ನು.. ಅವರನ್ನು ಖಳನಂತೆ ಬಿಂಬಿಸುವುದು, ಸರ್ವಥಾ ತಪ್ಪು..’ ಎಂದು ಲಕ್ಷ್ಮೀಶ ಗಬ್ಲಡ್ಕ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಮಂಡಿಸಿದ್ದಾರೆ. ಪುತ್ತೂರಿನ ರಾಜೇಶ್ ಕೃಷ್ಣಪ್ರಸಾದ್ ಎಂಬವರು ಪುತ್ತಿಲ ಮತ್ತು ಕಾರಂತರ ಕುರಿತು ಸುದ್ದಿ ಬಿಡುಗಡೆಯಲ್ಲಿ ಪ್ರಕಟವಾದ ವರದಿಯ ಪ್ರತಿಯನ್ನು ಫೇಸ್‌ಬುಕ್‌ನಲ್ಲಿ ಲಗತ್ತಿಸಿದ್ದು ‘ನಾವೆಲ್ಲಾ ಹಿಂದೂ.. ನಾವೆಲ್ಲಾ ಒಂದು ಅಂತ ಭಾಷಣ ಮಾಡುವವರು ಈಗ ಅದೇ ಹಿಂದುತ್ವದ ಹೆಸರಲ್ಲಿ ಚುನಾವಣೆಗೆ ನಿಂತವರನ್ನು ಇನ್ನೊಬ್ಬ ಹಿಂದೂ ಮುಖಂಡನ ಮೂಲಕ ಮಣಿಸಲು ಮಾಸ್ಟರ್‌ಪ್ಲ್ಯಾನ್ ಹಾಕುವುದು ಅಂದ್ರೆ ಏನರ್ಥ? ಜನ ಮೂರ್ಖರಲ್ಲ ನೆನಪಿರಲಿ ಯಾವುದು ನಿಜವಾದ ಹಿಂದುತ್ವ? ಎಂದು ರಾಜೇಶ್ ಕೃಷ್ಣಪ್ರಸಾದ್ ಪ್ರಶ್ನಿಸಿದ್ದಾರೆ.
ಜಿ.ಕೆ. ಅಡ್ಯಂತಾಯ ಎಂಬವರು ಕಮೆಂಟ್ ಮಾಡಿ ‘ನಿಜ..ಈ ಸಂಘ ಪರಿವಾರ ಹಿಂದೂಗಳಲ್ಲಿ ಸಮಾನಾಂತರ ನಾಯಕರನ್ನು ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಮನೋಜ್ ಮಡ್ತಿಲ ಎಂಬವರು ಕಮೆಂಟ್ ಹಾಕಿ ‘ಜಗದೀಶ ಕಾರಂತರು ಬಂದರೆ..ಅವರ ಬಗ್ಗೆ ಇರುವ ನಮ್ಮೆಲ್ಲರ ಗೌರವ ಸತ್ತು ಹೋಗುತ್ತದೆ’ ಎಂದಿದ್ದಾರೆ. ಭರತ್ ಕನ್ನಡ್ಕ ಗುತ್ತಿಗಾರ್ ಎಂಬವರು ಕಮೆಂಟ್ ಹಾಕಿ ‘ನಿಮ್ಮ ಅಭಿಪ್ರಾಯವೇ ನನ್ನ ಅಭಿಪ್ರಾಯ..ಕಾರಂತರು ಬರಲೇಬಾರದು..ಬಂದರೆ ಹಿನ್ನಡೆ ಅವರಿಗೆ’ ಎಂದು ಅಭಿಪ್ರಾಯ ಹಾಕಿದ್ದಾರೆ. ರಾಮಕೃಷ್ಣ ಕುತ್ಯಾಡಿ ಎಂಬವರು ‘ಅವರು ಬರ‍್ಲಿಕ್ಕಿಲ್ಲ’ ಎಂದು ಕಮೆಂಟ್ ಹಾಕಿದ್ದಾರೆ. ಗಿರೀಶ್ ಗೌಡ ಕಡಬ ಎಂಬವರು ಕಮೆಂಟ್ ಹಾಕಿ ‘ಈ ವಿಚಾರಕ್ಕೆ ತಾನು ಬರುವುದಿಲ್ಲ ಎನ್ನುವ ಸಂದೇಶ ಜಗದೀಶ ಕಾರಂತರಿಂದ ಬಂದಿದೆ’ ಎಂದು ಅಭಿಪ್ರಾಯ ಹಾಕಿದ್ದಾರೆ. ಇದಕ್ಕೆ ಸನತ್ ಗೌಡ ಪಟ್ಟೆ ಪ್ರತಿಕ್ರಿಯಿಸಿ ‘ಅಂತಹ ಸಂದೇಶ ಬಂದರೆ ಅವರಿಗೆ ಗೌರವ. ನಮ್ಮ ಹಿಂದು ಸಂಘಟನೆಗಳು, ನಾಯಕರ ನಡುವೆ ಹೊಂದಾಣಿಕೆ ಇಲ್ಲ. ಎಲ್ಲಾ ಹಿಂದು ಸಂಘಟನೆಗಳ ಉದ್ದೇಶ ಹಿಂದುತ್ವ ಮಾತ್ರ ಎಂಬುದನ್ನು ನಾಯಕರು ತಿಳಿದುಕೊಳ್ಬೇಕು ಮೊದಲು’ ಎಂದು ಅಭಿಪ್ರಾಯ ಹಾಕಿದ್ದಾರೆ. ಗೋಪಾಲಕೃಷ್ಣ ಕೆ. ಎಂಬವರು ‘ಇದ್ದ ಮರ್ಯಾದೆನೂ ಹೋಗುತ್ತದೆ’ ಎಂದಿದ್ದಾರೆ. ಶಿವರಾಜ್ ಕೆ.ಪಿ. ಎಂಬವರು ಕಮೆಂಟ್ ಹಾಕಿ ‘ಈಗಿನ ಕಾಲ ಅಂದರೆ ಉತ್ತರಕ್ಕೆ ಕಾಯುವ ಪ್ರಶ್ನೆನೇ ಇಲ್ಲಾ. ಒಂದು ವೇಳೆ ಸಭೆಯಲ್ಲಿ ಪುತ್ತಿಲರ ಬಗ್ಗೆ ಹೇಳಿದರೆ ಅಲ್ಲೇ ಸಾರ್ವಜನಿಕವಾಗಿ ಪ್ರಶ್ನೆ ಮಾಡುವ ಪ್ರಜ್ಞಾವಂತರು ಇದ್ದಾರೆ’ ಎಂದಿದ್ದಾರೆ. ಮನೋಜ್ ಮಡ್ತಿಲರವರು ‘ಬೆಳ್ಳಾರೆಯಲ್ಲಿ ಹಿಂದೆ ಇನ್ನೋವಾ ಕಾರ್ ಮಾತ್ರ ಅಲುಗಾಡಿದ್ದು ಮುಂದೆ ಏನು ಅಲುಗಾಡುವುದು ನೋಡೋಣ’ ಎಂದಿದ್ದಾರೆ. ಎಸ್.ಬಿ. ದಾರಿಮಿಯವರು ಫೇಸ್‌ಬುಕ್‌ನಲ್ಲಿ ಕಮೆಂಟ್ ಹಾಕಿ ‘ಅದರಲ್ಲಿ ನಾವೇ ಬೆಸ್ಟ್. ನಮ್ಮಲ್ಲಿ ನಾಯಕರೂ ಇಲ್ಲ. ಸಂಘಟನೆಯೂ ಇಲ್ಲ. ಫಯರ್‌ಬ್ರಾಂಡ್ ಮೊದಲೇ ಇಲ್ಲ. ಆದರೆ, ಧರ್ಮ ಮುಲ್ಲಾಗಳ ಕೈಯಲ್ಲಿ ಭದ್ರ. ನಮ್ಮಲ್ಲಿ ಧರ್ಮವನ್ನು ರಾಜಕೀಯದವರಿಗೆ ಕೊಡುವುದೇ ಇಲ್ಲ’ ಎಂದಿದ್ದಾರೆ. ಜಿ.ಕೆ. ಅಡ್ಯಂತಾಯ ಇದಕ್ಕೆ ಪ್ರತಿಕ್ರಿಯಿಸಿ ‘ನೇರ ರಸ್ತೆಗಿಳಿದು ಕಲ್ಲು ತೂರಾಟ.. ಪೊಲೀಸರು ಲಾಠಿಚಾರ್ಜ್ ಮಾಡಿ ಎತ್ತಾಕೊಂಡು ಹೋದರೆ ಇಸ್ಲಾಮಿನ ಮೇಲೆ ದೌರ್ಜನ್ಯ ಅಂತ ಘೋಷಣೆ ಕೂಗೋದು ಅಷ್ಟೇ’ ಎಂದಿದ್ದಾರೆ. ಭರತ್ ಕನ್ನಡ್ಕ ಗುತ್ತಿಗಾರ್ ಅವರು ‘ನಿಮ್ಮಲ್ಲಿ 10 ವರ್ಷದ ಮಕ್ಕಳಿಂದ ಹಿಡಿದು ಮುದುಕರವರೆಗೆ ಫಯರ್ ಬ್ರಾಂಡೇ ಅಲ್ವ’ ಎಂದು ಪ್ರಶ್ನಿಸಿದ್ದಾರೆ. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಕಮೆಂಟ್ ಹಾಕಿದ್ದು ‘ನೋಡಿ ಲಕ್ಷ್ಮೀಶರೇ ಒಬ್ಬರನ್ನು ಮಟ್ಟ ಹಾಕಲು ಇನ್ನೊಬ್ಬರ ಸೃಷ್ಠಿ. ಒಂದು ಸಂಸ್ಥೆ, ಸಂಘಟನೆ ಕಟ್ಟಿದ ಮೇಲೆ ಇನ್ನೊಬ್ಬರ ಸ್ಥಾಪನೆ ಅದೆಲ್ಲಾ ಹಿಂದಿನಿಂದಲೇ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಗಣಪತಿ ಭಟ್ ಬರ್ಲಾಯಬೆಟ್ಟು ಅವರು ‘ಒಬ್ಬರನ್ನು ಮಟ್ಟ ಹಾಕಲು ಇನ್ನೊಬ್ಬರ ಸೃಷ್ಠಿ ಅಲ್ಲ. ಸಂಪೂರ್ಣ ನಿಷ್ಕ್ರಿಯ ತನ್ನವನನ್ನು ರಕ್ಷಿಸಲು ಇನ್ನೊಬ್ಬರನ್ನ ಗುರಾಣಿಯಾಗಿ ಬಳಕೆ ಅಷ್ಟೇ’ ಎಂದಿದ್ದಾರೆ. ಲಕ್ಷ್ಮೀಶ ಗಬ್ಕಡ್ಕರವರು ‘ಮಟ್ಟ ಹಾಕಲು ಅನ್ನುವುದೇ ಸರಿ. ನಾವು ಅನುಭವಿಸಿದ ವಿಷಯ ಅದು’ ಎಂದಿದ್ದಾರೆ. ಗಣಪತಿ ಭಟ್ ಬರ್ಲಾಯಬೆಟ್ಟು ಅವರು ‘ಆ ವ್ಯೂವ್ ಕೂಡ ತಪ್ಪಲ್ಲ’ ಎಂದಿದ್ದಾರೆ. ಲಕ್ಷ್ಮೀಶ ಗಬ್ಲಡ್ಕರವರು ‘ವಾಸ್ತವ ಅದು. ವ್ಯೂ ಅಲ್ಲ’ ಎಂದಿದ್ದಾರೆ. ಕರುಣಾಕರ ಬಿಳಿಮಲೆರವರು ‘ಭಸ್ಮಾಸುರನ ಪ್ರಸಂಗ’ ಎಂದಿದ್ದಾರೆ. ಕುಕ್ಕೆ ಯತೀಶ್ ದೇವ್ರಲ್ಲಿ ಅವರು ‘ಕಾರಂತುರು ಬಂದ್ರೆ ಅವರಿಗಿದ್ದ ಗೌರವ ಮತ್ತೆ ಸಿಗದು’ ಎಂದಿದ್ದಾರೆ. ಬಾಲಸುಬ್ರಹ್ಮಣ್ಯ ಕಂಜರ್ಪಣೆ ಪರಮೇಶ್ವರಯ್ಯ ಎಂಬವರು ‘ಹೀಗಾದರೆ (ಅ)ಖಂಡ ಭಾರತ ಖಂಡಿತಾ’ ಎಂದಿದ್ದಾರೆ. ಶಿವಾನಂದ ಕುಕ್ಕಂಬಳರವರು ‘ಹಿಂದೂ ನಾಯಕರಲ್ಲಿ ಅತ್ಯಂತ ಹೆಚ್ಚು ರಿಸ್ಕ್ ತಗೊಂಡು ಸಂಘಟನೆಯನ್ನು ಕಟ್ಟಿ ಅಗ್ರಗಣ್ಯರು ಆದ ಎಂದಿಗೂ ರಾಜಕೀಯ ಸ್ಥಾನಮಾನಗಳನ್ನು ಅಪೇಕ್ಷಿಸದ ಕಾರಂತರು ಆದರ್ಶಪ್ರಾಯರು’ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಫೇಸ್‌ಬುಕ್ ಮತ್ತು ವಾಟ್ಸಪ್‌ನಲ್ಲಿ ಮಾತ್ರವಲ್ಲದೆ ಬಿಜೆಪಿ ಸಹಿತ ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಪರ ವಿರೋಧ ಚರ್ಚೆ ನಡೆಯುತ್ತಿದೆ.
ಜಗದೀಶ್ ಕಾರಂತ್ ಬರ್ತಾರಾ… ಬರಲ್ವಾ? – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರವರೊಂದಿಗೆ ಇರುವ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಮತ್ತೆ ಸಂಘಟನೆಯೊಳಗೆ ಸಕ್ರಿಯವನ್ನಾಗಿಸಲು ಹಿಂದು ಜಾಗರಣ ವೇದಿಕೆಯ ನಾಯಕ ಜಗದೀಶ್ ಕಾರಂತ್ ಪುತ್ತೂರಿಗೆ ಬರುತ್ತಾರ, ಬರುವುದಿಲ್ಲವಾ ಎಂದೂ ಚರ್ಚೆ ನಡೆಯುತ್ತಿದೆ. ಜಗದೀಶ್ ಕಾರಂತರವರನ್ನು ಪುತ್ತೂರಿಗೆ ಕರೆಸಿ ಪುತ್ತಿಲ ವಿರುದ್ಧ ಫೀಲ್ಡ್‌ಗಿಳಿಯುವಂತೆ ಮಾಡಿ ಬಿಜೆಪಿಯ ಮತಗಳನ್ನು ಭದ್ರವಾಗಿರಿಸಿಕೊಳ್ಳುವ ಕಾರ್ಯತಂತ್ರ ಮಾಡಲಾಗುತ್ತಿದೆ ಎಂಬ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ಜಗದೀಶ್ ಕಾರಂತ್ ಅವರು ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿರುವವರೇ ಹೊರತು ರಾಜಕೀಯದಲ್ಲಿ ತೊಡಗಿಸಿಕೊಂಡವರಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನಾಂತರ ದೂರ ಕಾಯ್ದುಕೊಳ್ಳುವ ಕಾರಂತರು ಖಂಡಿತವಾಗಿಯೂ ಈ ವಿಚಾರಕ್ಕೆ ಪುತ್ತೂರಿಗೆ ಬರಲಾರರು ಎಂದು ಕಾರಂತರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮುಖಂಡರು ತಿಳಿಸಿದ್ದಾರೆ. ರಾಜಕೀಯ ವಿಚಾರಕ್ಕಾಗಿ ಕಾರಂತರು ಬರಲಾರರು. ಆದರೆ, ಸಂಘಟನೆಯೊಳಗೆ ಬಿರುಕು ಇರಬಾರದು. ಹಿಂದು ಜಾಗರಣ ವೇದಿಕೆಯೊಳಗಿನ ಕಾರ್ಯಕರ್ತರು ಸಂಘ ಪರಿವಾರದ ಶಿಸ್ತು ಮೀರಿ ಹೋಗಬಾರದು ಎಂಬ ಕಾರಣಕ್ಕಾಗಿ ಗೊಂದಲ ಸರಿ ಪಡಿಸಲು ಕಾರಂತರು ಪುತ್ತೂರಿಗೆ ಬರಬಹುದು ಎಂದು ಅವರ ಆಪ್ತರಾಗಿರುವ ನಾಯಕರು ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್ ಮೀಡಿಯಾದ ಅಭಿಪ್ರಾಯ, ಪುತ್ತೂರಿನ ಪ್ರಮುಖ ನಾಯಕರ ಅಭಿಪ್ರಾಯ ಆಲಿಸಿ ಜಗದೀಶ್ ಕಾರಂತ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಅರುಣ್ ಪುತ್ತಿಲರವರ ವಿಚಾರಕ್ಕೆ ಅಲ್ಲದೇ ಇದ್ದರೂ ಸಂಘಟನಾತ್ಮಕ ವ್ಯವಸ್ಥೆಗಾಗಿ ಜಗದೀಶ್ ಕಾರಂತ್ ಪುತ್ತೂರಿಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.