ಪುತ್ತೂರು: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಯೋಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರೂ ನಾಮಪತ್ರ ಸಲ್ಲಿಸಿದ್ದು ಏ.24ನಾಮಪತ್ರ ಹಿಂತೆಗೆದುಕೊಳ್ಳಲು ಕಡೆ ದಿನವಾಗಿದೆ. ಈಗಾಗಲೇ ಅಭ್ಯರ್ಥಿಗಳು, ಪಕ್ಷಗಳ ಮುಖಂಡರು,ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿದ್ದಾರೆ. ಚುನಾವಣೆ ನಿಷ್ಪಕ್ಷಪಾತವಾಗಿ ಮತ್ತು ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಚುನಾವಣೆ ಸಂದರ್ಭದಲ್ಲಿ ಅಕ್ರಮ ಮದ್ಯ ಹಂಚಿಕೆ ನಡೆಯುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಮದ್ಯ ದಾಸ್ತಾನು, ಮಾರಾಟದ ಮೇಲೂ ನಿಗಾ ಇರಿಸಲಾಗುತ್ತಿದೆ. ಏ.23ರಂದು ಪುತ್ತೂರು ನಗರದ ಹೆಚ್ಚಿನ ಮದ್ಯದಂಗಡಿಗಳಲ್ಲಿ ಬಿಯರ್ ದಾಸ್ತಾನು ಇಲ್ಲದೆ ಬಿಯರ್ ಪ್ರಿಯರು ನಿರಾಸೆಗೊಂಡು ಬರಿಗೈಲಿ ಹಿಂತಿರುಗುವಂತಾದ ಘಟನೆ ವರದಿಯಾಗಿದೆ. ಬಿಯರ್‌ಗಾಗಿ ಮದ್ಯದಂಗಡಿಗಳಿಗೆ ಅಲೆದ ಬಿಯರ್ ಪ್ರಿಯರು ಕೊನೆಗೂ ತಮಗೆ ಬೇಕಾದ ಬಿಯರ್ ದೊರೆಯದೆ ಸಪ್ಪೆ ಮೋರೆಯೊಂದಿಗೆ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಡಿಸ್ಟಿಲ್ಲರಿಗಳಲ್ಲಿ ಈ ಹಿಂದಿನಂತೆ ಪೂರ್ಣ ಪ್ರಮಾಣದಲ್ಲಿ ಬಿಯರ್‌ಗಳು ಉತ್ಪಾದನೆಯಾಗದೇ ಇರುವುದರಿಂದ ಬೇಡಿಕೆಯಷ್ಟು ಪ್ರಮಾಣದ ಬಿಯರ್‌ಗಳು ಮದ್ಯದಂಗಡಿಗೆ ಪೂರೈಕೆಯಾಗದೇ ಇರುವುದರಿಂದ ಸಮಸ್ಯೆಯಾಗಿದೆ. ಪುತ್ತೂರುನಲ್ಲಿರುವ ಪಾನೀಯ ನಿಗಮವ ವ್ಯಾಪ್ತಿಯಲ್ಲಿ ಬರುವ 146 ಮದ್ಯದಂಗಡಿಗಳಿಂದ ಬೇಡಿಕೆ ಸಲ್ಲಿಕೆಯಾಗುವ ಶೇ.25ರಷ್ಟು ಪ್ರಮಾಣದಲ್ಲಿ ಮಾತ್ರ ಬಿಯರ್ ಇದೀಗ ಪೂರೈಕೆಯಾಗುತ್ತಿದೆ. ಚುನಾವಣೆ ಪ್ರಕ್ರಿಯೆ ಮುಗಿಯುವ ತನಕ ಈ ರೀತಿಯ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ವೈನ್‌ಶಾಪ್ ಮಾಲಕರೋರ್ವರು ಪ್ರತಿಕ್ರಿಯಿಸಿದ್ದಾರೆ.