ಪುತ್ತೂರು: ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಲಂಚ, ಭ್ರಷ್ಟಾಚಾರದ ವಿರುದ್ಧ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ವರುಣಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪಽಸಿರುವ ಸುದ್ದಿ ಜನಾಂದೋಲನ ವೇದಿಕೆಯ ಸಂಚಾಲಕ ಡಾ. ಯು.ಪಿ. ಶಿವಾನಂದ ಅವರ ಪರವಾಗಿ ಏ. 25ರಂದು ವರುಣಾ ಕ್ಷೇತ್ರದ ಹಳ್ಳಿಗಳಿಗೆ, ಬಡಾವಣೆಗಳಿಗೆ ಭೇಟಿ ನೀಡಿದಾಗ ಲಂಚ, ಭ್ರಷ್ಟಚಾರದ ಬಗ್ಗೆ ಅಲ್ಲಿನ ಜನರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇಂದು ರೈತರು ಯಾವುದೇ ಇಲಾಖೆಗಳಿಗೆ ತಮ್ಮ ಕೆಲಸಗಳಿಗೆ ಹೋದಾಗ ಅಧಿಕಾರಿಗಳು ಸತಾಯಿಸುತ್ತಾರೆ, ಲಂಚ ಕೊಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ, ನಮ್ಮ ಕಷ್ಟವನ್ನು ಕೇಳುವವರಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು, ಜಾಗದ ರಿಜಿಸ್ಟ್ರೇಷನ್‌ನಿಂದ ಹಿಡಿದು ಸಣ್ಣ ಸಣ್ಣ ಕೆಲಸಗಳಿಗೂ ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಹೀಗಾದರೆ ಜನರು ಉದ್ದಾರ ಆಗುವುದಿಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಉದ್ದಾರ ಆಗುತ್ತಾರೆ, ರಸ್ತೆ, ಕುಡಿಯುವ ನೀರು ಸಮರ್ಪಕವಾಗಿಲ್ಲ, ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಯಾವ ಸರಕಾರ ಬಂದರೂ ನಮಗೆ ಸರಿಯಾದ ಸೌಲಭ್ಯ ನೀಡದಿದ್ದರೆ ಏನು ಪ್ರಯೋಜನ ಎಂಬ ಅಭಿಪ್ರಾಯವನ್ನು ಮತದಾರರು ವ್ಯಕ್ತಪಡಿಸಿದರು.
ಲಂಚ, ಭ್ರಷ್ಟಚಾರ ವಿರುದ್ದ ಪ್ರತಿಜ್ಞೆ ಮಾಡಿಸುತ್ತೇವೆ
ವಿಶೇಷವಾಗಿ ವರುಣಾ ಕ್ಷೇತ್ರದಲ್ಲಿ ಜನರನ್ನು ಭೇಟಿಯಾದಾಗ ಲಂಚ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಮತ್ತು ಲಂಚ ಪಡೆದುಕೊಂಡ ಅಧಿಕಾರಿಯಿಂದ ಹಣವನ್ನು ವಾಪಸ್ ತೆಗೆದುಕೊಡುವ ಬಗ್ಗೆ ಕ್ಷೇತ್ರದ ಜನಪ್ರತಿನಿಧಿಗಳಲ್ಲಿ ಪ್ರತಿಜ್ಞೆ ಮಾಡಿಸುತ್ತೇವೆ ಎಂದು ಮತದಾರರು ಹೇಳಿದರು. ರೈತರು, ಮಹಿಳೆಯರು ಸೇರಿದಂತೆ ಹಲವಾರು ಮಂದಿ ಸುದ್ದಿ ಜನಾಂದೋಲನ ತಂಡದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡು ಇದೊಂದು ಉತ್ತಮ ಆಂದೋಲನ ಎಂದು ಶ್ಲಾಘನೆ ವ್ಯಕ್ತಪಡಿಸಿದರು.