ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಪುತ್ತೂರು ನಗರ ವಲಯ ಸಮಿತಿಯ ಮಹಾಸಭೆ ಎ.25ರಂದು ದರ್ಬೆ ಸಣ್ಣ ಕೈಗಾರಿಕಾ ತರಬೇತಿ ಸಭಾಭವನದಲ್ಲಿ ನಡೆಯಿತು.
ದೇವಾ ಟ್ರೆಡರ್ಸ್‌ನ ಮಾಲಕ ಟಿ.ವಿ.ರವೀಂದ್ರನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ರಾಜ್ಯ ಸಮಿತಿ ಆಂತರಿಕ ಲೆಕ್ಕ ಪರಿಶೋಧಕ ರಘುನಾಥ್ ಬಿ. ಮಾತನಾಡಿ ಸಂಘಟನೆಯು ಬೆಳೆದು ಬಂದ ದಾರಿಯನ್ನು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ ಉರ್ಲಾಂಡಿ ಮಾತನಾಡಿ ನಮ್ಮ ಸಂಘಟನೆಗೆ 24 ವರ್ಷಗಳಲ್ಲಿ ಯಾವುದೇ ಸರಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಆದರೂ ನಮ್ಮ ಸಂಘಟನೆ ಬಡ ಟೈಲರ್ಸ್‌ಗಳ ನೋವಿಗೆ ಸದಾ ಸ್ಪಂದಿಸುತ್ತಾ ಬಂದಿದೆ ಎಂದು ತಿಳಿಸಿದರು. ವಲಯದ ಅಧ್ಯಕ್ಷ ಯಶೋಧರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ಎಕ್ಸರೆ ಟೆಕ್ನೀಷಿಯನ್ ಪಕೀರ ಗೌಡ, ಫ್ಯಾಶನ್ ಡಿಸೈನರ್, ಯುವ ಉದ್ಯಮಿ ನಮೃತಾ ಎನ್, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ್ ಬಿ.ಎನ್. ಪ್ರಧಾನ ಕಾರ್ಯದರ್ಶಿ ಉಮಾ ನಾಕ್, ಕೋಶಾಧಿಕಾರಿ ಸುಜಾತ ಮಂದಾರ, ವಲಯದ ಕೋಶಾಧಿಕಾರಿ ಜಯದೇವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಮಾಜಿ ಸದಸ್ಯರಾದ ದಯಾನಂದ ಹೆಗ್ಡೆ ಮತ್ತು ದಂಪತಿ ಹಾಗೂ ವಿಜಯಲಕ್ಷ್ಮಿರವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ಹರಿಣಿ ಗೌಡ, ಕರಣ್ ಗೌಡ ಪ್ರಾರ್ಥಿಸಿದರು. ಆಶಾ ಕಲ್ಲಾರೆ ಸ್ವಾಗತಿಸಿ ಕಾರ್ಯದರ್ಶಿ ಭಾರತಿ ವಂದಿಸಿದರು.