ಉಪ್ಪಿನಂಗಡಿ: ಇಲ್ಲಿನ ರೋಟರಿ ಕ್ಲಬ್‌ಗೆ ಎಪ್ರಿಲ್ 30 ರಂದು ಜಿಲ್ಲಾ ಗವರ್ನರ್ ಭೇಟಿ ನೀಡಲಿದ್ದು, ಈ ವೇಳೆ ಹಲವಾರು ಸೇವಾ ಯೋಜನೆಗಳನ್ನು ಸಮಾಜಕ್ಕೆ ಸಮರ್ಪಿಸಲಾಗುವುದು ಎಂದು ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ನಾಯಕ್ ತಿಳಿಸಿದರು.
ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಎನ್. ಪ್ರ್ರಕಾಶ್ ಕಾರಂತ್ ರವರು ಎಪ್ರಿಲ್ 30 ರಂದು ಅಧಿಕೃತ ಭೇಟಿ ನೀಡಲಿರುವ ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಉಪ್ಪಿನಂಗಡಿ ಘಟಕವು 34 ನೇ ನೆಕ್ಕಿಲಾಡಿಯ ಸುಭಾಷ್ ನಗರದಲ್ಲಿನ ವಿಕಲಾಂಗ ವ್ಯಕ್ತಿ ನಾಗೇಶ್ ಮನೆಯ ದುರಸ್ತಿ ಕಾರ್ಯವನ್ನು ನೆರವೇರಿಸಿ ಹಸ್ತಾಂತರ, ಉಪ್ಪಿನಂಗಡಿ ಸರಕಾರಿ ಪ್ರೌಢ ಶಾಲೆಗೆ 1 ಲಕ್ಷ್ಷ ರೂ. ವೆಚ್ಚದಲ್ಲಿ ಡೆಸ್ಕ್ ಹಾಗೂ ಬೆಂಚುಗಳನ್ನು ಸಮರ್ಪಣೆ, ಸರ್ವೋದಯ ಪ್ರೌಢ ಶಾಲೆ ಪೆರಿಯಡ್ಕ ಇಲ್ಲಿಗೆ ಬ್ಯಾಂಡ್ ಸೆಟ್ ಹಾಗೂ ಪ್ರೊಜೆಕ್ಟರ್‌ಗಳ ಹಸ್ತಾಂತರ, ಇಲ್ಲಿನ ವೇದಶಂಕರ ನಗರದಲ್ಲಿ ಶ್ರೀ ಮಾಧವ ಶಿಶು ಮಂದಿರಕ್ಕೆ ಶಾಶ್ವತ ಯೋಜನೆಯಡಿ 25,೦೦೦ ರೂ. ಗಳ ದೇಣಿಗೆ ಸಮರ್ಪಣೆ, ಸಂಜೆ 6:30ಕ್ಕೆ ಉಪ್ಪಿನಂಗಡಿಯ ಆಶಿ ಅಡಿಟೋರಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವನಸಿರಿ ಯೋಜನೆಯಡಿ ಬರುವ ಎಲ್ಲರಿಗೂ ಗಿಡವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಗರ್ವನರ್ ಭೇಟಿಯ ವೇಳೆ ಸಹಾಯಕ ಗವರ್ನರ್ ರೋಟೇರಿಯನ್ ಮಂಜುನಾಥ ಆಚಾರ್ಯ, ವಲಯ ಸೇನಾನಿ ಮೊಹಮ್ಮದ್ ವೊಳವೂರ್ ರವರು ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ದುರ್ಗಾಮಣಿ, ಆಂಬುಲೆನ್ಸ್ ಹಾಗೂ ಅಟೋ ಚಾಲಕ ಫಾರೂಕ್ ಅವರನ್ನು ಸನ್ಮಾನಿಸಲಾಗುವುದು ಹಾಗೂ ಸಾಧಕ ವಿದ್ಯಾರ್ಥಿಗಳಾದ ವೃಂದಾ ಆರ್. ಪ್ರಭು, ಮರಿಯಮ್ ರೇನಿಷಾ ಬಸ್ತಿಕಾರ್, ಶ್ರೀಲಕ್ಷ್ಮೀ ಭಟ್ ರವರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಘಟಕದ ಕಾರ್ಯದರ್ಶಿ ಗಿರಿಧರ ನಾಯಕ್, ಪದಾಧಿಕಾರಿಗಳಾದ ಶ್ರೀಕಾಂತ್ ಪಟೇಲ್, ರಾಜೇಶ್ ದಿಂಡಿಗಲ್ ಉಪಸ್ಥಿತರಿದ್ದರು.