ಪುತ್ತೂರು: ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳಿಗೆ ಚಂಡಿಕಾ ಹೋಮ, ಬೆಳ್ಳಿಯ ಕತ್ತಿ ಹಾಗೂ ತ್ರಿಶೂಲ ಸಮರ್ಪಣೆ ಹಾಗೂ ವಾರ್ಷಿಕ ಮಾರಿಪೂಜೆಯು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ್ ತಂತ್ರಿ ಕೆಮ್ಮಿಂಜೆರವರ ನೇತೃತ್ವದಲ್ಲಿ ಎ.26 ರಿಂದ 28ರ ವರೆಗೆ ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ಜರಗಿತು.
ಬುಧವಾರದಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ-ಪುಣ್ಯವಾಚನ ಶುದ್ಧಿ, ಮಹಾಗಣಪತಿ ಹೋಮ, ಕಲಶ ಪೂಜೆ ಬಳಿಕ ಶ್ರೀ ಅಮ್ಮನವರಿಗೆ ಚಂಡಿಕಾ ಹೋಮ ನಡೆಯಿತು.(ಶ್ರೀಮತಿ ಮತ್ತು ಶ್ರೀ ಶಾಲಿನಿ ಸುರೇಶ್ ಪಿ.ದಂಪತಿಗಳ ಹರಕೆ ಸೇವೆ), ಶ್ರೀ ಅಮ್ಮನವರಿಗೆ ಕಲಶಾಭೀಷೇಕ, ಪರಿವಾರದೈವಗಳಿಗೆ ತಂಬಿಲ, ಶ್ರೀ ಅಮ್ಮನವರಿಗೆ, ಬೆಳ್ಳಿಯ ಕತ್ತಿ ಮತ್ತು ತ್ರಿಶೂಲ ಸಮರ್ಪಣೆ ನಡೆಯಿತು. ಬೆಳಿಗ್ಗೆ ಶ್ರೀ ಅಮ್ಮನವರಿಗೆ ಚಂಡಿಕಾ ಹೋಮ ಪೂರ್ಣಾಹುತಿ ಶ್ರೀ ಅಮ್ಮನವರಿಗೆ ಗುಡಾನ್ನ ಮತ್ತು ಹಾಲು ಪಾಯಸ ಸಮರ್ಪಣೆ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಹಾಗೂ ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಅಮ್ಮನ ಪ್ರಸಾದ’ ನಡೆಯಿತು.
ಸಂಜೆ ಶ್ರೀ ಕಲ್ಲುರ್ಟಿ ದೈವದ ಅಭಯ ಸ್ವೀಕಾರ, ರಾತ್ರಿ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಶ್ರೀ ಅಮ್ಮನವರಿಗೆ ಮಹಾಪೂಜೆ, ಕ್ಷೇತ್ರದ ಇತರೇ ದೈವಗಳಿಗೆ ಪೂಜೆ, ಶ್ರೀ ಅಮ್ಮನವರಿಂದ ಹಾಗೂ ಸ-ಪರಿವಾರ ದೈವಗಳಿಂದ ಆಭಯ ಸ್ವೀಕಾರ, ಶ್ರೀ ಅಮ್ಮನವರ ಭಂಡಾರ ತೆಗೆಯುವುದು ಉತ್ಸವ ಬಯಲು ಆರ್ಯಾಪು ನೇರಳಕಟ್ಟೆ’ ಮೂಲ ಕ್ಷೇತ್ರಕ್ಕೆ ಶ್ರೀ ಅಮ್ಮನವರ ಭಂಡಾರವನ್ನು ಕೊಂಡೊಯ್ಯುವುದು ನಡೆಯಿತು.
ಪ್ರಾತಃಕಾಲ ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರನ್ನು ಪ್ರತಿಸ್ಥಾಪಿಸುವುದು, ಶ್ರೀ ಅಮ್ಮನವರ ದೂತರಿಗೆ ಬಲಿ ನೀಡುವುದು ನಡೆಯಿತು. ಪೂರ್ವಾಹ್ನ ಕೈತೋಡು ಶ್ರೀ ಶಾರದಾಂಬ ಸೇವಾ ಸಮಿತಿ ಅದೂರು, ಕಾಸರಗೋಡು ಇವರಿಂದ ಭಜನಾ ಕಾರ್ಯಕ್ರಮ ನೆರವೇರಲ್ಪಟ್ಟಿತು. ಮಧ್ಯಾಹ್ನ ಶ್ರೀ ಅಮ್ಮನವರಿಗೆ ಮಹಾಪೂಜೆ, ಅನ್ನದ ಪಲ್ಲ ಪೂಜೆ, ಸ-ಪರಿವಾರ ದೈವಗಳಿಗೆ ಪೂಜೆ, ಮಡಸ್ಥಾನ ಸೇವೆ(ವಿಶೇಷ ಸೇವೆ), ಶ್ರೀ ಅಮ್ಮನವರ ಹಾಗೂ ಇತರೇ ದೈವಗಳಿಂದ ಅಭಯ ಸ್ವೀಕಾರ, ಆರ್ಯಾಪು ನೇರಳಕಟ್ಟೆಯಲ್ಲಿ ಶ್ರೀ ಅಮ್ಮನವರ ಮಹಾಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಅಮ್ಮನ ಪ್ರಸಾದ, ಸಂಜೆ ಶ್ರೀ ಅಮ್ಮನವರು ಹಾಗೂ ಸ-ಪರಿವಾರ ದೈವಗಳ ಭಂಡಾರವನ್ನು ಆರ್ಯಾಪು ನೇರಳಕಟ್ಟೆಯಿಂದ ದೇವಸ್ಥಾನಕ್ಕೆ ಕೊಂಡೊಯ್ಯುವುದು ಹಾಗೂ ಪ್ರತಿಷ್ಠಾಪಿಸಲಾಯಿತು. ಶುಕ್ರವಾರದಂದು ಪೂರ್ವಾಹ್ನ ಶ್ರೀ ಅಮ್ಮನವರಿಗೆ ಶುದ್ಧಿ ಕಲಶ, ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.
ಸಭಾ ಕಾರ್ಯಕ್ರಮ:
ಬುಧವಾರದಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆರವರು ಹಿಂದು ಧರ್ಮಧದಲ್ಲಿನ ದ್ರಾವಿಡ ಸಮಾಜದ ಆಚಾರ ವಿಚಾರಗಳ ಕುರಿತು ಧಾರ್ಮಿಕ ಭಾಷಣ ಮಾಡಿದರು. ಅಧ್ಯಕ್ಷತೆ ವಹಿಸಿದ ಆರ್ಯಾಪು ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಷನ್‌ಮೂಲೆ, ಮುಖ್ಯ ಅತಿಥಿ ಕೃಷ್ಣಯ್ಯ ವಿಟ್ಲ ಅರಮನೆರವರು ಮಾತನಾಡಿದರು. ಗೌರವ ಉಪಸ್ಥಿತಿಯಾಗಿ ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಆಚಾರ್ಯ, ಆರ್ಯಾಪು ಬಾರಿಕೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಅಧ್ಯಕ್ಷ ಮಂಜಪ್ಪ ರೈ ಬಾರಿಕೆ ಮನೆತನ, ಆರ್ಯಾಪು ಗುತ್ತಿನ ಮನೆಯ ಪಣಿರಾಜ್ ಜೈನ್, ನೇರಳಕಟ್ಟೆ ಆರ್ಯಾಪು ಶ್ರೀ ಅಮ್ಮನವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಗಂಗಾದರ ಸೀಗೆಬಲ್ಲೆರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಪುಣ್ಯ ಕಾರ್ಯದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ, ಅಧ್ಯಕ್ಷ ರವಿಚಂದ್ರ ಆಚಾರ್ಯ, ಅನುವಂಶಿಕ ಆಡಳತ ಮೊಕ್ತೇಸರ ಗಂಗಾಧರ್ ಸೀಗೆಬಲ್ಲೆ ವಿಟ್ಲ, ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಪ್ರಧಾನ ಸಂಚಾಲಕರಾದ ನೇಮಾಕ್ಷ ಸುವರ್ಣ, ಕೋಶಾಧಿಕಾರಿ ಸುರೇಶ್ ಪಿ, ಶ್ರೀ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ಪಿ., ಆಡಳಿತ ಸಮಿತಿ ಕಾರ್ಯದರ್ಶಿ ಲೋಕೇಶ್ ರೈ ಮೇರ್ಲ, ಪ್ರಧಾನ ಅರ್ಚಕ ಸುನಿಲ್ ಮಚ್ಚೇಂದ್ರರವರ ಸಹಿತ ಅನೇಕ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.
ಪ್ರಕೃತಿದತ್ತವಾದ ಪರಿಸರದಲ್ಲಿ ನಾವೆಲ್ಲಿ ಎಡವಿದ್ದೇವೆ ಅರಿತುಕೊಳ್ಳಬೇಕಾಗುತ್ತದೆ…
ವೃತ್ತಿ ಪರಂಪರೆ ಹಾಗೂ ಕೃಷಿ ಪರಂಪರೆಯು ಪ್ರಕೃತಿದತ್ತವಾದ ಈ ಪ್ರಕೃತಿಯಲ್ಲಿ ನಮ್ಮ ಕೃಷಿ ಸಂಪನ್ಮೂಲಗಳು ಅದರಲ್ಲಿ ಪ್ರಬುದ್ಧತೆಯಿಂದ ಕೆಲಸ ಮಾಡಿದ ಕೃಷಿಕ ಅಥವಾ ರೈತಾಪಿ ವರ್ಗ ಬೆವರು ಸುರಿಸದೇ ಇದ್ದರೆ ಅವನ್ನು ಉಳಿಸಿಕೊಳ್ಳಲು ಸಾಧ್ಯವಾಗದು. ಇಲ್ಲದಿದ್ದರೆ ಸಮಾಜದಲ್ಲಿ ಏನೆಲ್ಲಾ ವೈಪರೀತ್ಯಗಳನ್ನು ಉಂಟು ಮಾಡಬಹುದು ಎಂಬುದನ್ನು ಊಹಿಸಲಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿ ಅಮೂಲ್ಯವಾದ ಶಕ್ತಿ ಅಂದರೆ ಅದು ಅಮ್ಮ. ನಮಗೆ ಜನ್ಮ ನೀಡಿದ ಅಪ್ಪ-ಅಮ್ಮನ ಋಣಾನುಬಂಧ ಅದು ನಿರಂತರವಾದ ಬದುಕಿನ ಅರ್ಥಪೂರ್ಣಯನ್ನು ಪಡೆದಿದೆ. ನಮ್ಮ ಆರಾಧನೆ, ಆಚರಣೆಗಳು, ವ್ಯವಸ್ಥೆಗಳು ವ್ಯಾವಹಾರಿಕವಾದ ಪ್ರಪಂಚದಲ್ಲಿ ಮನುಷ್ಯನ ಆಯುಷ್ಯ ಪ್ರಮಾಣ ಕಡಿಮೆಯಾಗುತ್ತಾ ಬಂದಂತಹ ಸಂದರ್ಭದಲ್ಲಿ ನಮ್ಮ ಕಲಿಯುಗದಲ್ಲಿ ಮತಿಭ್ರಮಣೆ ಹೆಚ್ಚಾಗುತ್ತಾ ಹೋಗುತ್ತಿರುವುದು ಖೇದಕರ. ಮನುಷ್ಯನ ನಿಜವಾದ ಆಸ್ತಿತ್ವ ಏನು?, ನಮ್ಮ ಕರ್ತವ್ಯ ಏನು?, ದೇಶದ ಆಸ್ತಿತ್ವದಲ್ಲಿ ನಮ್ಮ ಪಾತ್ರ ಏನು?, ಎಂಬುದನ್ನು ನಾವು ಅರಿಯಬೇಕು. ವಿಜ್ಞಾನ ಮುಂದುವರೆದಿದೆ, ಬಿಸಿಯ ಕಾವು ಏರುತ್ತಲಿದೆ. ಮನುಷ್ಯನ ಲಾಲಸೆಗೋಸ್ಕರ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾಶ ಮಾಡುತ್ತಿರುವುದು ಅಷ್ಟೊಂದು ಸಮಂಜಸವಲ್ಲ. ಪ್ರಕೃತಿದತ್ತವಾದ ಪರಿಸರದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ.
-ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀಧಾಮ ಮಾಣಿಲ
ಸನ್ಮಾನ/ಪ್ರತಿಭಾ ಪುರಸ್ಕಾರ..
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ವೈದ್ಯಕೀಯ ಕ್ಷೇತ್ರದಲ್ಲಿ ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ, ಕೃಷಿ ಕ್ಷೇತ್ರದಲ್ಲಿ ಆನಂದ ಅಮೀನ್ ಹೊಸಮನೆ, ಕ್ರೀಡಾ ಕ್ಷೇತ್ರದಲ್ಲಿ ಡಿಂಪಲ್ ಶೆಟ್ಟಿ, ಬಾಲಪ್ರತಿಭೆ ಸದ್ವಿತಾ ಬಿರಾದಾರ್‌ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಓರ್ವ ವಿದ್ಯಾರ್ಥಿನಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.