ತಿಂಗಳಾಡಿ ಶ್ರೀ ಮಾರಿಯಮ್ಮ ದೇವಿಯ ವೈಭವದ ಮಾರಿಪೂಜೆ ಮಹೋತ್ಸವ, ಅನ್ನಸಂತರ್ಪಣೆ

0

ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಗಾಂಧಿನಗರದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಜರಗುವ ಶ್ರೀ ಮಾರಿಪೂಜೆ ಮಹೋತ್ಸವವು ಏ.26ರಿಂದ 28 ರ ತನಕ ವಿಜೃಂಭಣೆಯಿಂದ ಜರಗಿತು. ಏ.26 ರಂದು ಬೆಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಶುದ್ಧಿ ಕಲಶ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಭಂಡಾರ ಶುದ್ಧಿಗೊಳಿಸುವುದು, ಭಂಡಾರವನ್ನು ಉತ್ಸವ ಬಯಲಿಗೆ ಕೊಂಡೊಯ್ಯುವ ಕಾರ್ಯಕ್ರಮ ನಡೆದ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವಿಯ ಗುಡಿ ಪ್ರತಿಷ್ಠಾಪಿಸಿ, ಗುಳಿಗ, ಪಂಜುರ್ಲಿ, ಕಲ್ಲುರ್ಟಿ, ಶನಿಗುಳಿಗ, ಕಾಲಭೈರವ ದೈವಗಳ ದರ್ಶನ ಮತ್ತು ತಂಬಿಲ ಸೇವೆ ನಡೆಯಿತು.


ಏ.27 ರಂದು ಸೂರ್ಯೋದಯಕ್ಕೆ ಮಾರಿ ಕಡಿಯುವ ಕಾರ್ಯಕ್ರಮ ನಡೆಯಿತು ಆ ಬಳಿಕ ಅಮ್ಮನವರ ದರ್ಶನ ಮತ್ತು ಇತರ ದೈವಗಳ ದರ್ಶನ ನಡೆದು ಮಧ್ಯಾಹ್ನ ಶ್ರೀ ಮಾರಿಯಮ್ಮ ದೇವಿಗೆ ಮಹಾಪೂಜೆ, ಹರಿಕೆ ಕಾಣಿಕೆ ಸ್ವೀಕಾರದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಭಂಡಾರವನ್ನು ದೇವಾಲಯಕ್ಕೆ ಕೊಂಡೊಯ್ಯುವ ಕಾರ್ಯಕ್ರಮ ನಡೆದು ಏ.೨೮ ರಂದು ಸೂರ್ಯೋದಯಕ್ಕೆ ಶ್ರೀ ದೇವಿಯ ಭಂಡಾರ ಪ್ರತಿಷ್ಠಾಪನೆಯೊ೦ದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ಶ್ರೀ ಕ್ಷೇತ್ರಕ್ಕೆ ಸೇವಾರೂಪದಲ್ಲಿ ನೂತನವಾಗಿ ನಿರ್ಮಾಣಗೊಂಡ ದೇವಸ್ಥಾನದ ಮೆಟ್ಟಿಲುಗಳ ಸಮರ್ಪಣೆ ಏ.26 ರಂದು ಬೆಳಿಗ್ಗೆ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಮಾದಿಗ, ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಭಕ್ತಾಧಿಗಳನ್ನು ಸ್ವಾಗತಿಸಿ, ಶ್ರೀ ದೇವಿಯ ಪ್ರಸಾದ ನೀಡಿ ಸತ್ಕರಿಸಿದರು.


ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ಮಾರಿಪೂಜೆ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಏ.26 ರಂದು ರಾತ್ರಿ ಸ್ಥಳೀಯ ಮಕ್ಕಳಿಂದ ಮತ್ತು ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಆ ಬಳಿಕ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಇವರಿಂದ `ಮಲ್ಲ ಸಂಗತಿಯೇ ಅತ್ತ್’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ನೂರಾರು ಮಂದಿ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು.

4 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ
ಎರಡು ದಿನಗಳ ಕಾಲ ನಡೆದ ಶ್ರೀ ಮಾರಿಪೂಜೆ ಮಹೋತ್ಸವದಲ್ಲಿ ಬೆಳಿಗ್ಗೆ ಮತ್ತು ರಾತ್ರಿ ವೇಳೆ ಭಕ್ತಾಧಿಗಳಿಗೆ, ಸಾರ್ವಜನಿಕರಿಗೆ ಅನ್ನಪ್ರಸಾದ ಸಮರ್ಪಣೆ ನಡೆಯಿತು. ಏ.26 ರಂದು ಹರಿಪ್ರಸಾದ್ ರೈ ಮತ್ತು ಮನೆಯವರ ಸೇವಾರೂಪದಲ್ಲಿ ಅನ್ನಸಂತರ್ಪಣೆ ನಡೆದರೆ, ಏ.27 ರಂದು ಓಲೆಮುಂಡೋವು ಮೋಹನ್ ರೈಯವರ ಸೇವಾರೂಪದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಊರಪರವೂರ ಸುಮಾರು ೪ ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.


ಭಜನಾ ಕಾರ್ಯಕ್ರಮ
ಶ್ರೀ ಕ್ಷೇತ್ರದಲ್ಲಿ ಏ.19 ರಿಂದ ಎ 26 ರ ತನಕ ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ಕೋಡಿಂಬಾಡಿ, ನೂಜಿಬೈಲು, ಮೇನಾಲ, ಪಳ್ಳತ್ತೂರು, ಆಲಡ್ಕ, ಕಿಲಂಗೋಡಿ, ಸಜಂಕಾಡಿ ಮತ್ತು ಬೆದ್ರಾಜೆಯ ಭಜನಾ ತಂಡಗಳು ಭಜನೆಯಲ್ಲಿ ಪಾಲ್ಗೊಂಡವು. ಭಜನೆಯ ಬಳಿಕ ಶ್ರೀ ದೇವಿಗೆ ದೀಪಾರಾಧನೆ ನಡೆಯಿತು.

LEAVE A REPLY

Please enter your comment!
Please enter your name here