ಪುತ್ತೂರು:ಈ ಬಾರಿಯ ಚುನಾವಣೆ ಹಿಂದುತ್ವದ ಸಿದ್ದಾಂತದಲ್ಲಿ ನಡೆಯಲಿದೆ. ಯಾವುದೇ ಪಕ್ಷದಿಂದ ಹಣ ಪಡೆದು ಸ್ಪರ್ಧಿಸಿಲ್ಲ. ಸಾಮಾನ್ಯ ಕಾರ್ಯಕರ್ತರ ಭಾವನೆಗಳಿಗೆ ಬೆಲೆಕೊಡದೆ ಅವರನ್ನು ಗುಲಾಮಗಿರಿಗೆ ಬೆಳವಣಿಗೆಯ ಷಡ್ಯಂತ್ರದ ವಿರುದ್ಧ ನನ್ನ ಸ್ಪರ್ಧೆಯಾಗಿದೆ. ಈ ಭಾರಿಯ ಚುನಾವಣೆಯಲ್ಲಿ ಹಿಂದುತ್ವದ ಸಿದ್ದಾಂತ್ಕಕ್ಕೆ, ಹಿಂದೂ ಕಾರ್ಯಕರ್ತರ ಜಯವಾಗಲಿದೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಆರ್ಲಪದವು ಶ್ರೀದುರ್ಗಾ ಸಭಾಭವನದಲ್ಲಿ ಎ.27ರಂದು ಸಂಜೆ ನಡೆದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಈ ಬಾರಿ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆದಿದೆ. ನಾನು ವೈಯಕ್ತಿಕವಾಗಿ ಸ್ಪರ್ಧಿಸಿಲ್ಲ. ಎಲ್ಲರ ಅಭಿಪ್ರಾಯದಂತೆ, ಎಲ್ಲಾ ಸಂಘಟನೆಗಳ ಒತ್ತಾಸೆಯಿಂದ ನಾಮಪತ್ರ ಸಲ್ಲಿಸಲಾಗಿದೆ. ಆದರೂ ನನ್ನ ವಿರುದ್ಧ ಸಾಕಷ್ಟು ಅಪಪ್ರಚಾರ, ತೇಜೋವಧೆ ಮಾಡುವ ಮೂಲಕ ಭಯೋತ್ಪಾದಕರ ರೀತಿಯಲ್ಲಿ ತೋರಿಸಲಾಗಿದೆ. ನೂರಾರು ಫೆಕ್ ಖಾತೆಗಳನ್ನು ಸೃಷ್ಟಿಸಿ ಗೊಂದಲ ಉಂಟು ಮಾಡುತ್ತಿದ್ದಾರೆ. ನನಗೆ ನೀಡಿರುವ ವೇದನೆ ಇಡೀ ಹಿಂದು ಸಮಾಜಕ್ಕೆ ನೀಡಿದ ವೇದನೆಯಾಗಿದೆ. ನನ್ನ ಮೇಲೆ ಅಪಪ್ರಚಾರ ಮಾಡುವ ಮೂಲಕ ಕಾರ್ಯಕರ್ತರ ಮಾನಸಿಕತೆ ಕುಗ್ಗಿಸಿ ಚಾರಿತ್ರಿಕ ಹರಣ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಎಲ್ಲಾ ಸವಾಲಿನ ಮಧ್ಯೆ ಗೆಲ್ಲಬೇಕಾಗಿದೆ. ನಮ್ಮ ಬಳಿ ಅಧಿಕಾರದ ವ್ಯವಸ್ಥೆ, ಹಣಕಾಸಿನ ವ್ಯವಸ್ಥೆಗಳಿಲ್ಲ. ಸಾಮಾನ್ಯ ಕಾರ್ಯಕರ್ತರ ಇಟ್ಟಿರುವ ವಿಶ್ವಾಸವೇ ಗೆಲುವಾಗಲಿದೆ. ನೀವು ನನ್ನನ್ನು ನಿಮ್ಮ ಮನೆ ಮಗನಾಗಿ ಸ್ವೀಕರಿಸಿ ಆಶೀರ್ವದಿಸಿ. ಗೆದ್ದ ಬಳಿಕ ಹಿಂದು ಕಾರ್ಯಕರ್ತರ ಮೇಲಿರುವ ಕೇಸುಗಳನ್ನು ಹಿಂಪಡೆಯಲಾಗುವುದು. ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ದಿನದ 24 ಗಂಟೆಯು ನಿಮ್ಮ ಮನೆ ಮಗನಂತೆ ಸೇವೆ ನೀಡಲು ಬದ್ದ ಎಂದು ಅವರು ತಿಳಿಸಿದರು.
ರಾಜೇಶ್ ಮಣಿಯಾಣಿ, ಶರತ್ ಈಶ್ವರಮಂಗಲ ಹಾಗೂ ಕೃತೇಶ್ ಮಾತನಾಡಿದರು. ಚಂದ್ರಶೇಖರ ಬೇರಿಕೆ, ಸುರೇಶ್ ತೂಂಬಡ್ಕ, ಬಾಲಕೃಷ್ಣ ಪೂಜಾರಿ ಉಡ್ಡಂಗಲ, ಪ್ರಸಾದ್ ರೈ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಸಂತ ಭರಣ್ಯ ಸ್ವಾಗತಿಸಿ, ಹರೀಶ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುಮಾರು 300ಕ್ಕೂ ಅಧಿಕ ಮಂದಿ ಪುತ್ತಿಲ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.