ಪುತ್ತೂರು: ರಸ್ತೆಗಳಲ್ಲಿ ಮರಳು, ಮಣ್ಣು ಸಾಗಾಟದ ಸಂದರ್ಭದಲ್ಲಿ ಲಾರಿಗಳಿಗೆ ಹೊದಿಕೆಯನ್ನು ಹಾಕಿ ಚಾಲನೆ ಮಾಡಬೇಕು ಎನ್ನುವ ಕಾನೂನಿದ್ದರೂ,ಕೆಲವೊಂದು ಟಿಪ್ಪರ್ ಗಳು ಈ ಕಾನೂನು ತಮಗೆ ಅನ್ವಯಿಸುವುದಿಲ್ಲ ಎನ್ನುವ ರೀತಿಯಲ್ಲಿ ಓಡಾಟ ನಡೆಸಿ ಅಮಾಯಕ ದ್ವಿಚಕ್ರ ವಾಹನ ಚಾಲಕರ ಸಾವು ನೋವಿಗೆ ಕಾರಣವಾಗುತ್ತಿದೆ. ಪುತ್ತೂರು ದಾರಂದಕುಕ್ಕು ಹೊರ ವಲಯದ ಬಳಿ ಟಿಪ್ಪರ್ ನಲ್ಲಿ ಸಾಗಿಸುತ್ತಿದ್ದ ಮಣ್ಣು ರಸ್ತೆಯಲ್ಲೇ ಚೆಲ್ಲಿದ ಪರಿಣಾಮ ದ್ವಿಚಕ್ರ ವಾಹನಗಳು ಪಲ್ಟಿಯಾಗಿ ಸವಾರರು ಗಾಯಗೊಂಡ ಘಟನೆ ಎ.30 ರಂದು ನಡೆದಿದೆ.
ಪುತ್ತೂರಿನ ಹಲವು ಕಡೆ ಕಟ್ಟಡ ಕಾಮಗಾರಿಗಳು, ಸೈಟ್ ನಿರ್ಮಾಣದ ಕಾರ್ಯಗಳು ಕಳೆದ ಎರಡು ತಿಂಗಳಿಂದ ಭರದಿಂದ ನಡೆಯುತ್ತಿದ್ದು. ಈ ಸಂದರ್ಭ ಮಣ್ಣು ತೆರವು ಮಾಡಿ ಅದನ್ನು ಟಿಪ್ಪರ್ ಗಳಲ್ಲಿ ಬೇರೆ ಕಡೆಗಳಿಗೆ ಸಾಗಾಟ ಕಾರ್ಯ ನಡೆಯುತ್ತಿದೆ. ಮಣ್ಣು ಸಾಗಾಟದ ನೆಪದಲ್ಲಿ ಟಿಪ್ಪರ್ ಗಳು ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಈ ಟಿಪ್ಪರ್ ಲಾರಿಗಳ ಚಾಲಕರು ತಮಗೆ ತೋಚಿದ ರೀತಿಯಲ್ಲಿ ವಾಹನವನ್ನು ಚಲಾಯಿಸುವುದರಿಂದಾಗಿ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳಿಗೆ ಇವುಗಳು ಯಮ ಸ್ವರೂಪಿಯಾಗುತ್ತಿವೆ.
ಬನ್ನೂರು ಪಂಚಾಯತ್ ಸದಸ್ಯರೇ ಈ ಅಪಘಾತಕ್ಕೀಡಾಗಿದ್ದು ಪುತ್ತೂರು ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧ ಪಟ್ಟ ಇಲಾಖೆಯವರು ಮಣ್ಣು ಸಾಗಾಟದ ಲಾರಿಗಳಿಗೆ ಲಗಾಮ್ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ