ಪುತ್ತೂರು ತಾಲೂಕು ಸ್ವೀಪ್ ಸಮಿತಿಯಿಂದ ‘ನಮ್ಮ ನಡೆ ಮತಗಟ್ಟೆ ಕಡೆ’ ಜಾಥಾ

0

ಪುತ್ತೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನದಲ್ಲಿ ಭಾಗವಹಿಸುವುದು ಎಲ್ಲಾ ಮತದಾರರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಪ್ರತಿ ಮತದಾರನೂ ತನ್ನ ಮತದ ಮೌಲ್ಯವನ್ನು ಅರಿತು ಪ್ರಜಾಪ್ರಭುತ್ವದ ಈ ಪವಿತ್ರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸದೃಢ ಹಾಗೂ ಬಲಿಷ್ಟ ದೇಶ ಕಟ್ಟುವಂತಾಗಲಿ ಎಂಬುದೇ ಚುನಾವಣಾ ಆಯೋಗದ ಸದಾಶಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರನ್ನು ಮತದಾನಕ್ಕೆ ಪ್ರೇರೇಪಿಸಲು ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ಹಮ್ಮಿಕೊಂಡು ಬಂದಿದೆ. ಇದೇ ಹಾದಿಯಲ್ಲಿನ ಮತ್ತೊಂದು ಪ್ರಯತ್ನವೇ ’ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮ ಆಗಿದೆ. ಸಾರ್ವಜನಿಕರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ಪ್ರಜಾಪ್ರಭುತ್ವದ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ಪುತ್ತೂರು ತಾಲೂಕು ಸ್ವೀಪ್ ಸಮಿತಿಯಿಂದ ಎ.30ರಂದು ಕಾರ್ಯಕ್ರಮಕ್ಕೆ ತಾಲೂಕು ಆಡಳಿತ ಸೌಧದ ಎದುರು ಚಾಲನೆ ನೀಡಲಾಯಿತು.

ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಮತದಾನ ಜಾಗೃತಿ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಮತದಾನ ಬಹಳ ಶ್ರೇಷ್ಠವಾದದ್ದು, ನಾವೆಲ್ಲರೂ ಮೇ 10ಕ್ಕೆ ಮತ ಚಲಾಯಿಸಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತೇನೆ. ಅದೇ ರೀತಿ ಮತದಾನದ ಮೂಲಕ ಸಂವಿಧಾನ, ಉತ್ತಮ ಸರಕಾರ ಬರುವ ನಿಟ್ಟಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿ ಎಂದರು.

ತಾಲೂಕು ಮತಗಟ್ಟೆಗೆ ಜಾಥಾ: ತಾಲೂಕು ಆಡಳಿತ ಸೌಧದ ಎದುರು ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ತಾಲೂಕು ಮತಗಟ್ಟೆಗೆ ಜಾಥಾ ಮೂಲಕ ತೆರಳಿ ಸಾಂಕೇತಿಕ ಧ್ವಜ ಅಳವಡಿಕೆ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್ ಶಿವಶಂಕರ್, ಪೌರಾಯುಕ್ತ ಮಧು ಎಸ್ ಮನೋಹರ್, ಉಪತಹಸೀಲ್ದಾರ್ ಸುಲೋಚನಾ, ಮತಗಟ್ಟೆ ಅಧಿಕಾರಿಗಳು, ಚುನಾವಣಾ ನಿರ್ವಹಣೆ ಅಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡರು.

ಮತಗಟ್ಟೆಯನ್ನು ಪರಿಚಯಿಸುವ ಉದ್ದೇಶ

ಪ್ರತಿ ಮತಗಟ್ಟೆಯನ್ನು ಮತದಾರರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಂದು ’ಪ್ರಜಾಪ್ರಭುತ್ವದ ಹಬ್ಬ’ದಂತೆ ನಡೆಯಲಿದೆ. ಮೇ 10 ಮತದಾನ ಮಾಡಬೇಕು ಎಂಬ ವಾಕ್ಯವನ್ನು ಹೊಂದಿರುವ ಧ್ವಜವನ್ನು ಪ್ರತಿ ಮತಗಟ್ಟೆಯಲ್ಲಿ ಅಳವಡಿಸಲಾಗುತ್ತದೆ. ಮತದಾರರನ್ನು ಸೆಳೆಯಲು ಸ್ಥಳೀಯ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾಲ್ನಾಡಿಗೆ ಜಾಥಾ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ನವೀನ್ ಕುಮಾರ್ ಭಂಡಾರಿ ಹೆಚ್,
ನೋಡೆಲ್ ಅಧಿಕಾರಿ ಮಾದರಿ ನೀತಿ ಸಂಹಿತೆ ತಾಲೂಕು ಸ್ವೀಪ್ ಸಮಿತಿ

LEAVE A REPLY

Please enter your comment!
Please enter your name here