ಪುತ್ತೂರು: ಮುಂಡೂರು ಗ್ರಾ.ಪಂ ಮಾಜಿ ಸದಸ್ಯ, ಮುಂಡೂರು ಸಿ.ಎ ಬ್ಯಾಂಕ್‌ನ ಪ್ರಸ್ತುತ ನಿರ್ದೇಶಕರೂ ಆಗಿರುವ ಶಿವನಾಥ ರೈ ಮೇಗಿನಗುತ್ತು ಅವರು ಮತ್ತೆ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಸಹಕಾರ ನೀಡುತ್ತಿಲ್ಲ, ಅವರಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದು ಗ್ರಾ.ಪಂಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ತನ್ನನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ 2020 ಡಿಸೆಂಬರ್‌ನಲ್ಲಿ ಗ್ರಾ.ಪಂ ಚುನಾವಣೆ ಸಂರ್ದಭದಲ್ಲಿ ಶಿವನಾಥ ರೈ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಶಿವನಾಥ ರೈ ರಾಜೀನಾಮೆ ವಿಚಾರ ಆ ಸಂದರ್ಭದಲ್ಲಿ ಬಹಳಷ್ಟು ಚರ್ಚೆಗೂ ಕಾರಣವಾಗಿತ್ತು. ಬೆಂಬಲಿಗರ ಜೊತೆ ಬಿಜೆಪಿ ಸೇರುತ್ತಾರೆ ಎಂದೂ ಸುದ್ದಿಯಾಗಿತ್ತು. ಆದರೆ ಅತ್ತ ಬಿಜೆಪಿಗೂ ಸೇರದೇ ಇತ್ತ ಕಾಂಗ್ರೆಸ್‌ನಲ್ಲೂ ಇರದೇ ತಟಸ್ಥರಾಗಿದ್ದರು.
ಇದೀಗ ಶಿವನಾಥ ರೈ ಅವರನ್ನು ಬ್ಲಾಕ್ ಕಾಂಗ್ರೆಸ್ ನಗರ ಪ್ರಚಾರ ಸಮಿತಿ ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಶಿವನಾಥ ರೈ ಅವರು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅಶೋಕ್ ರೈ ಗೆಲ್ಲಿಸಲು ಪ್ರಯತ್ನ-ಶಿವನಾಥ ರೈ
ಕಳೆದ ಗ್ರಾ.ಪಂ ಚುನಾವಣೆ ಸಂದರ್ಭದಲ್ಲಿ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಇಚ್ಚೆಗೆ ವಿರುದ್ಧವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಮತ್ತು ಸ್ಥಳೀಯ ನಾಯಕರ ಏಕ ಪಕ್ಷೀಯ ನಿರ್ಧಾರಗಳಿಂದ ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ್ದೆ. ನನಗೆ ಆ ಸಂದರ್ಭದಲ್ಲಿ ಬೇರೆ ಪಕ್ಷಗಳಿಂದ ಆಫರ್ ಬಂದಿತ್ತಾದರೂ ನಾನು ಯಾವ ಪಕ್ಷಕ್ಕೂ ಸೇರದೇ ತಟಸ್ಥನಾಗಿದ್ದೆ. ಕೊರೋನಾ ಸಂದರ್ಭದಲ್ಲಿ 680 ಮನೆಗಳಿಗೆ ಸ್ಪಷ ಸಹಾಯವಾಣಿ ಮೂಲಕ ದಾನಿಗಳ ಸಹಕಾರದಿಂದ ಆಹಾರ ಕಿಟ್ ವಿತರಿಸಿದ್ದು ಮುಂಡೂರು ಸಿ.ಎ ಬ್ಯಾಂಕ್ ಸಹಯೋಗದೊಂದಿಗೆ 650 ಕ್ಕೂ ಅಧಿಕ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲು ಶಿಬಿರ ನಡೆಸಿದ್ದೇನೆ. ಗ್ರಾ.ಪಂ ವ್ಯಾಪ್ತಿಯ ಪ್ರತಿಭೆಗಳನ್ನು, ಸಾಧಕರನ್ನು ಗುರುತಿಸುವ ಕಾರ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇನೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ಪಕ್ಷ ಜವಾಬ್ದಾರಿಯನ್ನೂ ನೀಡಿದೆ. ಅಶೋಕ್ ರೈ ಗೆಲ್ಲಿಸಲು ನನ್ನಿಂದಾಗುವ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಶಿವನಾಥ ರೈ ಮೇಗಿನಗುತ್ತು ತಿಳಿಸಿದ್ದಾರೆ.