ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಮೂರು ಮಂದಿ ವಿದ್ಯಾರ್ಥಿಗಳು 2023ರ ಎನ್ಡಿಎ – 1 (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ- 1) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಬೆಂಗಳೂರಿನ ಖುಷಿಕರ ಬಿ.ಎಸ್ ಹಾಗೂ ಉದಯಕಲಾ ಎನ್.ಎಲ್ ದಂಪತಿ ಪುತ್ರ ಪ್ರಜ್ವಲ್ ಬಿ.ಕೆ, ಕಡಬದ ಕೃಷ್ಣ ಮೂರ್ತಿ ಕೆ ಹಾಗೂ ಅನುಪಮ ದಂಪತಿ ಪುತ್ರ ಶ್ರೀಶ ಶರ್ಮ ಕೆ ಹಾಗೂ ಪುರುಷರಕಟ್ಟೆಯ ಚರಣ್ ಕುಮಾರ್ ಹಾಗೂ ಮಾಲತಿ ದಂಪತಿ ಪುತ್ರ ಶ್ಯಮಂತ್ ಕುಮಾರ್ ಸಿ.ಕೆ ಎನ್ಡಿಎ ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಯುಪಿಎಸ್ಇಯು ವರ್ಷಕ್ಕೆ ಎರಡು ಬಾರಿ ಎನ್ಡಿಎ ಪರೀಕ್ಷೆ ನಡೆಸುತ್ತಿದ್ದು, ಎಪ್ರಿಲ್ ತಿಂಗಳಲ್ಲಿ ಮೊದಲ ಪರೀಕ್ಷೆ ನಡೆದಿತ್ತು. ದೇಶಾದ್ಯಂತ ಸುಮಾರು ಐದು ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಷ್ಟು ಮಂದಿ ವಿದ್ಯಾರ್ಥಿಗಳಲ್ಲಿ ಕೇವಲ ಎಂಟು ಸಾವಿರ ಮಂದಿ ವಿದ್ಯಾರ್ಥಿಗಳಷ್ಟೇ ಎಸ್ಎಸ್ಬಿ (ಸರ್ವಿಸ್ ಸೆಲೆಕ್ಷನ್ ಬೋರ್ಡ್) ನಡೆಸುವ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಸಂದರ್ಶನದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಮುಂದೆ ಸೈನಿಕ ದಳ, ನೌಕಾದಳ ಅಥವ ವಾಯುದಳದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲಿದ್ದು ನಂತರ ಭಾರತೀಯ ಸೇನೆಯಲ್ಲಿ ನಿಯುಕ್ತಿ ಹೊಂದಲಿದ್ದಾರೆ.
ಅಂಬಿಕಾ ಪದವಿಪೂರ್ವ ವಿದ್ಯಾಲಯವು ಎನ್ಡಿಎ ಪರೀಕ್ಷೆಗಾಗಿ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದು, ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಉತ್ಸಾಹ ಇರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವೆನಿಸಿದೆ. ಪ್ರತಿವರ್ಷವೂ ಇಲ್ಲಿನ ವಿದ್ಯಾರ್ಥಿಗಳು ಎನ್ಡಿಎ ಪರೀಕ್ಷೆಯಲ್ಲಿ ಸಾಧನೆ ತೋರುತ್ತಿದ್ದಾರೆ. ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವುದರೊಂದಿಗೆ ಎನ್ಡಿಎ ಪರೀಕ್ಷೆಗೂ ತರಬೇತಿ ಲಭ್ಯವಾಗುತ್ತಿರುವುದು ಹೆತ್ತವರ ಸಂತಸಕ್ಕೂ ಕಾರಣವೆನಿಸಿದೆ.