ಗ್ರಾಮೀಣ ರಸ್ತೆ ನಿರ್ಮಾಣ, ಉದ್ಯೋಗ ಸೃಷ್ಠಿಗೆ ಆದ್ಯತೆ-ಕೃಷ್ಣಪ್ಪ
ರಾಮಕುಂಜ: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪರವರು ಮೇ 5ರಂದು ಬೆಳಿಗ್ಗೆ ಕೊಯಿಲ, ಗಂಡಿಬಾಗಿಲು, ಶಕ್ತಿನಗರದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು.
ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕ್ಷೇತ್ರ ವ್ಯಾಪ್ತಿಯ ಉದ್ದಕ್ಕೂ ಗ್ರಾಮೀಣ ಪ್ರದೇಶದಲ್ಲಿ ರಸ್ತೆಯೇ ಇಲ್ಲ, ಇರುವ ರಸ್ತೆಗೆ ಡಾಂಬಾರು ಕಾಣದೆ ನಡೆದಾಡುವುದಕ್ಕೂ ಸಾಧ್ಯವಾಗದ ರೀತಿಯಲ್ಲಿ ಕುಲಗೆಟ್ಟು ಹೋಗಿದೆ. ಇವುಗಳ ಅಭಿವೃದ್ಧಿಗೆ ಮತ್ತು ಕ್ಷೇತ್ರ ವ್ಯಾಪ್ತಿಯಲ್ಲೇ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಉದ್ಯೋಗ ಸೃಷ್ಠಿಸಿ ಯುವ ಸಮೂಹಕ್ಕೆ ಉದ್ಯೋಗ ದೊರಕಿಸಿಕೊಡುವುದಕ್ಕೆ ಆದ್ಯತೆ ನೀಡುತ್ತೇನೆ, ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಹಾದಿ ಸುಗಮವಾಗಿದೆ. ಪಕ್ಷದ ಕಾರ್ಯಕರ್ತರು, ಯುವಕರು ಇನ್ನಷ್ಟು ಕ್ರಿಯಾಶೀಲರಾಗಿ ಗೆಲುವಿನ ಅಂತರವನ್ನು ಹೆಚ್ಚಿಸಬೇಕು ಎಂದರು.
ಮತಯಾಚನೆ ಸಂದರ್ಭದಲ್ಲಿ ಕೊಯಿಲ ಯುವಕ ಕಾಂಗ್ರೆಸ್ ಅಧ್ಯಕ್ಷ ರಾಝಿಕ್ ಆತೂರು, ಚುನಾವಣಾ ಉಸ್ತುವಾರಿ ಹೆಚ್.ಆದಂ, ಗ್ರಾಮ ಪಂಚಾಯಿತಿ ಸದಸ್ಯ ನಝೀರ್ ಪೂರಿಂಗ, ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಎಸ್., ಪಕ್ಷದ ಪ್ರಮುಖರಾದ ಎ.ಕೆ. ಬಶೀರ್, ಪೆರ್ನು ಬಡ್ಡಮೆ, ಸಲೀಕತ್, ಎನ್. ಸಿದ್ದಿಕ್, ಪೊಡಿಕುಂಞ ನೀರಾಜೆ, ಝಕರಿಯಾ ಮುಸ್ಲಿಯಾರ್, ಇಸ್ಮಾಯಿಲ್ ಪಾಲೆತ್ತಡಿ, ಝೈನ್ ಆತೂರು ಮತ್ತಿತರರು ಉಪಸ್ಥಿತರಿದ್ದರು.