ದುರಿತಗಳನ್ನು ಪರಿಹರಿಸುವ ಶಕ್ತಿ ಶ್ರೀ ನರಸಿಂಹ ದೇವರಿಗೆ ಇದೆ-ಕಾಣಿಯೂರು ಶ್ರೀ
ಕಾಣಿಯೂರು: ಬದುಕಿನಲ್ಲಿ ನೆಮ್ಮದಿಯನ್ನು ಕಾಣಬೇಕಾದರೆ ಸದಾ ಸತ್‌ಚಿಂತನೆಯೊಂದಿಗೆ ಭಗವಂತನ ಸ್ಮರಣೆ ಮಾಡಬೇಕು. ನಿತ್ಯ ದೇವರ ಸ್ಮರಣೆ, ಒಳ್ಳೆಯ ವಿಚಾರಗಳ ಚಿಂತನೆ, ಸಾಮಾಜಿಕ ಕಾರ್ಯಗಳತ್ತ ಒಲವು ಮನುಷ್ಯನನ್ನು ಸತ್ಪಥದಲ್ಲಿ ಸಾಗುವಂತೆ ಮಾಡುತ್ತದೆ. ಮನುಷ್ಯ ಒಂದಲ್ಲ ಒಂದು ಸಮಸ್ಯೆಗಳಿಂದ ಇರುತ್ತಾನೆ. ನಮ್ಮ ದುರಿತಗಳನ್ನು ಪರಿಹರಿಸುವ ಶಕ್ತಿ ಶ್ರೀ ನರಸಿಂಹ ದೇವರಿಗೆ ಇದೆ. ಆದ್ದರಿಂದ ನಾವೆಲ್ಲರೂ ನರಸಿಂಹ ದೇವರ ಭಜನೆ, ಸ್ತುತಿ ಮಾಡಬೇಕು ಎಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹೇಳಿದರು. ಕಾಣಿಯೂರು ಶ್ರೀ ಮಠದಲ್ಲಿ ಮೇ 5ರಂದು ಶ್ರೀ ನೃಸಿಂಹ ಜಯಂತ್ಯುತ್ಸವ ಕಾರ್ಯಕ್ರಮ ಮತ್ತು ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನರಹರಿ ಸಭಾಭವನವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬೆಳಿಗ್ಗೆ ವಿಶೇಷ ಪೂಜೆ, ಕಾಣಿಯೂರು ಶ್ರೀ ವಿಷ್ಣುಪ್ರಿಯಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ತನ್ವಿ ಪೆರುವಾಜೆ, ತೃಪ್ತಿ ಕೂಟಾಜೆಯವರಿಂದ ಭರತ ನಾಟ್ಯ ನಡೆಯಿತು. ಬಳಿಕ ಶ್ರೀ ಕಾಣಿಯೂರು ಮಠ ಸಂಸ್ಥಾನ ದೇವರ ಪೂಜೆ ನಡೆದು, ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಭಾಸ್ಕರ್ ಬಾರ್ಯ ನಿರ್ದೇಶನದಲ್ಲಿ ಜಾಂಬವತೀ ಕಲ್ಯಾಣ ಯಕ್ಷಗಾನ ತಾಳಮದ್ದಲೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಕಾಣಿಯೂರು ಶ್ರೀ ಮಠದ ನಿರಂಜನ್ ಆಚಾರ್ ಉಪಸ್ಥಿತರಿದ್ದರು. ಸದಾನಂದ ಆಚಾರ್ಯ ಕಾಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಕಾಣಿಯೂರು ಜಾತ್ರೋತ್ಸವದಲ್ಲಿ ದೈವ ದೇವರುಗಳ ಪರಿಚಾರಕರಾದ ಕುಶಾಲಪ್ಪ ಗೌಡ ತೋಟ, ಪುಟ್ಟಣ್ಣ ಗೌಡ ಅಜಿರಂಗಳ, ನಾರ್ಣಪ್ಪ ಗೌಡ ಗುಂಡಿಗದ್ದೆ, ಅಣ್ಣು ಗೌಡ ಕಲ್ಪಡ, ದೇವಣ್ಣ ಗೌಡ ಕಟ್ಟತ್ತಾರು, ಕಾಣಿಯೂರು ಮಠದ ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತಿರುವ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ಸುರೇಶ್ ಓಡಬಾಯಿ, ಕೃಷ್ಣ ಚೆಟ್ಟಿಯಾರ್ ಕಾಣಿಯೂರು, ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಹರಿಪ್ರಸಾದ್ ರೈ ಕಾಣಿಯೂರು, ಲಕ್ಷ್ಮಣ ಗೌಡ ಮುಗರಂಜ, ಬೆಳಿಯಪ್ಪ ಗೌಡ ಪೆರ್ಲೋಡಿ, ಕುಶಾಲಪ್ಪ ಗೌಡ ಗುಂಡಿಗದ್ದೆ, ಅಧ್ಯಕ್ಷ ವಿಶ್ವನಾಥ ಗೌಡ ಓಡಬಾಯಿ, ಕಾಣಿಯೂರು ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಭಾಭವನವನ್ನು ಕಾಮಗಾರಿ ನಡೆಸಿರುವ ಚೇತನ್ ಕಟ್ಟತ್ತಾರು, ಛಾವಣಿಯನ್ನು ನಿರ್ಮಿಸಿರುವ ದಿವಾಕರ ಕೋಳಿಗದ್ದೆ, ವಿದ್ಯುತ್ ಕೆಲಸ ನಿರ್ವಹಿಸಿದ ಪ್ರೀತಮ್ ಕಂಡೂರು ಇವರಿಗೆ ಸ್ವಾಮೀಜಿಯವರು ಶಾಲು ಹೊದಿಸಿ, ಸ್ಮರಣಿಕೆ, ಮಂತ್ರಾಕ್ಷತೆ ನೀಡಿದರು.
ಕಾಣಿಯೂರು ಶ್ರೀ ಮಠದಲ್ಲಿ ಗ್ರಾಮದ ಭಕ್ತರು ವಿಶೇಷವಾಗಿ ನಿತ್ಯ ಪೂಜೆ ಸೇವೆ ಮಾಡಿಕೊಳ್ಳಬೇಕು. ಆ ಮೂಲಕ ಶ್ರೀ ನರಸಿಂಹ ದೇವರ ಅನುಗ್ರಹಕ್ಕೆ ಪ್ರಾಪ್ತಿಯಾಗಬೇಕು.- ಕಾಣಿಯೂರು ಶ್ರೀ