ಫಿಲೋಮಿನಾದಲ್ಲಿ `ಎಸ್‌ಪಿಎಲ್ ಸೀಸನ್-3′ ಲೀಗ್ ಕ್ರಿಕೆಟ್ ಉದ್ಘಾಟನೆ

0

ಕ್ರೀಡೆಯು ಕ್ರೀಡಾಪಟುಗಳಲ್ಲಿ ಚೈತನ್ಯವನ್ನು ಪುನರುಜ್ಜೀವನಗೊಳಿಸುತ್ತದೆ-ವಂ|ಸ್ಟ್ಯಾನಿ ಪಿಂಟೋ

ಪುತ್ತೂರು: ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಕ್ರೀಡಾಪಟುಗಳಲ್ಲಿ ಪ್ರತಿಭೆಯು ಅನಾವರಣವಾಗುತ್ತದೆ. ಕ್ರಿಕೆಟ್ ಎನ್ನುವುದು ಜಂಟಲ್ ಮ್ಯಾನ್ ಗೇಮ್ ಆಗಿದೆ ಜೊತೆಗೆ ಕ್ರೀಡಾಪಟುಗಳಲ್ಲಿ ಚೈತನ್ಯವನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಹೇಳಿದರು.


ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಮೇ 6 ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ಕಾಲೇಜಿನ ಕ್ರೀಡಾಪಟುಗಳಿಗಾಗಿ ನಡೆದ ಸಂತ ಫಿಲೋಮಿನಾ ಪ್ರೀಮಿಯರ್ ಲೀಗ್(ಎಸ್‌ಪಿಎಲ್) ಸೀಸನ್-3′ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ಯಾವುದೇ ಪಂದ್ಯಾಟವಿರಲಿ, ಪ್ರತಿ ಸಲ ಗೆಲ್ಲಲು ಸಾಧ್ಯವಾಗೋದಿಲ್ಲ. ಕೆಲವೊಮ್ಮೆ ಸೋಲಬೇಕಾಗುತ್ತದೆ. ಕ್ರೀಡಾಪಟುಗಳು ಸಂಘಟಿತರಾಗಿ ಒಗ್ಗಟ್ಟಾಗಿ ಆಡಿದಾಗ ಗೆಲುವು ಸಿಗಬಲ್ಲುದು. ವಿದ್ಯಾರ್ಥಿಗಳು ಒಬ್ಬರನೊಬ್ಬರು ಗೌರವದಿಂದ ಕಾಣಬೇಕು, ಸಂಸ್ಥೆಯ ಗೌರವವನ್ನು ಉಳಿಸಿಕೊಳ್ಳಬೇಕು ಎನ್ನುವ ಧೋರಣೆಯೊಂದಿಗೆ ಜೀವನ ಸಾಗಬೇಕು ಎಂದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಚಂದ್ರಶೇಖರ್, ಭಾರತಿ ಎಸ್.ರೈ, ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನುಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮದ್ ಆಶಿಕ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶಿವಾನಿ ವಂದಿಸಿದರು. ವಿದ್ಯಾರ್ಥಿನಿ ರಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

8 ತಂಡಗಳು…ಲೀಗ್ ಮಾದರಿ ಕ್ರಿಕೆಟ್..
ಕೂಟದಲ್ಲಿ ಫಿಲೋ ಹಾಕ್ಸ್, ಟೀಮ್ ಆಗಸ್ತ್ಯ, ಮ್ಯಾಡ್ ಡೆವಿಲ್ಸ್, ಕ್ಸೇವಿಯನ್ಸ್, ಎಕ್ಸ್೬೯, ಹಾಕ್ಸ್ 14, ಟೀಮ್ ಡಿಬಿಝಡ್, ಅಗ್ನಿ ಬ್ರದರ್ ಹೀಗೆ ಎಂಟು ತಂಡಗಳು ಕಣದಲ್ಲಿದ್ದು, ತಂಡಗಳನ್ನುಎ’ ಹಾಗೂ `ಬಿ’ ಎಂಬಂತೆ ಎರಡು ಗುಂಪುಗಳಲ್ಲಿ ನಾಲ್ಕು ತಂಡಗಳಂತೆ ಹಂಚಿಕೆ ಮಾಡಲಾಗಿದೆ. ಪಂದ್ಯಾಟಗಳು ಫಿಲೋಮಿನಾ ಕ್ರೀಡಾಂಗಣದಲ್ಲಿನ ಎರಡು ಅಂಕಣಗಳಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ಪಂದ್ಯಾಟಗಳು ಲೀಗ್ ಮಾದರಿಯಲ್ಲಿ ನಡೆಯಲಿದೆ. ಆಯಾ ತಂಡಗಳಲ್ಲಿ ತಂಡದ ಮಾಲಕರು, ಮ್ಯಾನೇಜರ್, ಮೆಂಟರ್, ಕೋಚ್, ಫಿಸಿಯೋ ಜೊತೆಗೆ ತಲಾ ಈರ್ವರಂತೆ ಐಕಾನ್ ಆಟಗಾರ ಹೊಂದಿರುತ್ತಾರೆ. ಲೀಗ್ ಹಂತದ ಬಳಿಕ ಐಪಿಎಲ್ ನಿಯಮದಂತೆ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.

LEAVE A REPLY

Please enter your comment!
Please enter your name here