ತಲೆ ಮರೆಸಿಕೊಂಡ ಮೂವರು ಆರೋಪಿಗಳ ಪತ್ತೆಗೆ ಬಲೆ ಬೀಸಿದ ಕದ್ರಿ ಠಾಣಾ ಪೊಲೀಸರು
ಪುತ್ತೂರು: ತನ್ನ ಕುರಿತು ಮಾನಹಾನಿಕರ ವಿಡೀಯೋ ಪ್ರಸಾರ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ನೀಡಿದ ದೂರಿನಂತೆ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಠಾಣಾ ಪೊಲೀಸರು ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರೂ ಆಗಿರುವ ಅಶೋಕ್ ಕುಮಾರ್ ರೈಯವರು ಕದ್ರಿ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಂತೆ ಶಿವಶಂಕರ್ ಶೆಟ್ಟಿ ಮತ್ತು ವಿಜೆ ಅಜಯ್ ಅಂಚನ್ ವಿರುದ್ಧ ಕೇಸು ದಾಖಲಾಗಿತ್ತು. ಬಳಿಕ ಮತ್ತೊಂದು ದೂರು ನೀಡಿರುವ ಅಶೋಕ್ ಕುಮಾರ್ ರೈ ಅವರು ಕದ್ರಿ ಠಾಣೆಯಲ್ಲಿ ದಾಖಲಾಗಿರುವ ಕ್ರೈಂ ನಂಬರ್ 34/2023ರಲ್ಲಿಯ ಆರೋಪಿಗಳು ಪ್ರಕರಣ ದಾಖಲಾದ ಬಳಿಕವೂ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತಮ್ಮಣ್ಣ ಶೆಟ್ಟಿ ಎಂಬವರ ಹೇಳಿಕೆಯನ್ನು ಮತ್ತು ಮಾತುಕತೆಯುಳ್ಳ ವೀಡಿಯೋವನ್ನು ಮಾಡಿ ನನಗೆ ಮತ ನೀಡಬಾರದು ಎಂದು ಜನರಲ್ಲಿ ವಿನಂತಿಸಿ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಶಿವಶಂಕರ್ ಶೆಟ್ಟಿ ಮತ್ತು ವಿಜೆ ಅಜಯ್ ಅಂಚನ್ ವಿರುದ್ಧ ದಾಖಲು ಮಾಡಿರುವ ಎಫ್.ಐ.ಆರ್.ಗೆ ತಮ್ಮಣ್ಣ ಶೆಟ್ಟಿಯವರನ್ನು ಆರೋಪಿಯನ್ನಾಗಿ ಸೇರಿಸಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ವೀಡಿಯೋ ವನ್ನು ಅಳಿಸಿ ಹಾಕಲು ಆದೇಶಿಸಬೇಕು ಎಂದು ಮನವಿ ಮಾಡಿದ್ದರು.
ಪ್ರಕರಣ ಒಂದರಲ್ಲಿಯ ಆರೋಪಿಗಳಾದ ಶಿವಶಂಕರ್ ಶೆಟ್ಟಿ ಮತ್ತು ಅಜಯ್ ಅಂಚನ್ ಸದರಿ ದೂರು ದಾಖಲಾದ ಬಳಿಕ ದಿನಾಂಕ 2/5/2023 ರಂದು ತಮ್ಮಣ್ಣ ಶೆಟ್ಟಿ ಎಂಬ ವ್ಯಕ್ತಿಯ ಹೇಳಿಕೆಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುತ್ತಾರೆ. ಸದರಿ ವೀಡಿಯೋದಲ್ಲಿ ನನ್ನನ್ನು ಕೆಟ್ಟದಾಗಿ ಬಿಂಬಿಸಿ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ.
ಮೇಲಿನ ಆರೋಪಿಗಳು ಸಮಾನ ಉದ್ದೇಶದಿಂದ ಒಳಸಂಚು ಮಾಡಿಕೊಂಡು ಸಮಾನ ಉದ್ದೇಶದಿಂದ ಜೊತೆ ಸೇರಿಕೊಂಡು ನನ್ನಲ್ಲಿ 25 ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟು, ಅದನ್ನು ನೀಡಿಲ್ಲ ಎಂಬ ಕಾರಣಕ್ಕೆ ಸುಳ್ಳು ವೀಡಿಯೋ ವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿ ನನ್ನ ಕ್ಷೇತ್ರದ ಮತದಾರರಲ್ಲಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿ, ಮತದಾರರ ಮುಕ್ತ ಅಭಿಪ್ರಾಯದ ಮೇಲೆ, ನಿರ್ಧಾರದ ಮೇಲೆ ಅಡ್ಡಿ ಪಡಿಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುತ್ತಾರೆ.
ಆದುದರಿಂದ ಸದರಿ ತಮ್ಮಣ್ಣ ಶೆಟ್ಟಿ ಎಂಬವರನ್ನು ಉಲ್ಲೇಖ ಒಂದರಲ್ಲಿ ಹೆಚ್ಚುವರಿ ಆರೋಪಿಯನ್ನಾಗಿ ಸೇರಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಅಶೋಕ್ ರೈ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಮೂವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲು ಮಾಡಿಕೊಂಡಿರುವ ಕದ್ರಿ ಠಾಣಾ ಪೊಲೀಸರು ಅವರ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ. ಈ ಮಧ್ಯೆ ಆರೋಪಿಗಳು ಅಶೋಕ್ ರೈ ಅವರು ದೂರು ವಾಪಸ್ ಪಡೆದುಕೊಳ್ಳುವಂತೆ ಮಾಡಬೇಕು ಮತ್ತು ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಮಾಡಬೇಕು ಎಂದು ಮಂಗಳೂರಿನ ಖ್ಯಾತ ವಕೀಲರೋರ್ವರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.