ಬಾತು ಕೋಳಿಯಂತೆ ತೇಲುತ್ತಿವೆ ಪ್ಲಾಸ್ಟಿಕ್‌ಗಳು
- ವರದಿ : ದೀಪಕ್ ಉಬಾರ್

ಉಪ್ಪಿನಂಗಡಿ: ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಕಟ್ಟಲಾಗಿರುವ ಅಣೆಕಟ್ಟಿಗೆ ಗೇಟ್ ಅಳವಡಿಸಿ ಹರಿಯುವ ನೇತ್ರಾವತಿ- ಕುಮಾರಧಾರ ನದಿಗಳ ನೀರನ್ನು ತಡೆಯಲಾಗಿದೆ. ಇದರಿಂದ ಉಪ್ಪಿನಂಗಡಿಯ ಕೂಟೇಲು ತನಕ ನದಿಯಲ್ಲಿ ಹಿನ್ನೀರು ತುಂಬಿದೆ. ಆದರೆ ಉಪ್ಪಿನಂಗಡಿಯಲ್ಲಿ ಅಗಾಧ ಪ್ರಮಾಣದಲ್ಲಿ ಮಲೀನ ನೀರು ಕೂಡಾ ಇದರೊಳಗೆ ಸೇರಿಕೊಳ್ಳುತ್ತಿದ್ದು, ಈಗ ಹಿನ್ನೀರು ಕೂಡಾ ಮಲೀನಗೊಂಡು ದಿನ ದಿನ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ.
ಪೂರ್ವದಿಂದ ಹಸಿರ ಸಿರಿಯ ಪಶ್ಚಿಮ ಘಟ್ಟದ ಮೂಲಕ ಹರಿದು ಬರುವ ನೇತ್ರಾವತಿ ಹಾಗೂ ದಕ್ಷಿಣದಿಂದ ವನಸಿರಿಯ ಮಧ್ಯೆ ಹರಿದು ಬರುವ ಕುಮಾರಧಾರ ನದಿಗಳು ಪರಸ್ಪರ ಸಂಗಮವಾಗುವುದರೊಂದಿಗೆ ಉಪ್ಪಿನಂಗಡಿಯನ್ನು ಪುಣ್ಯಕ್ಷೇತ್ರವನ್ನಾಗಿಸಿದೆ. ಆದರೆ ಅದೇ ಉಪ್ಪಿನಂಗಡಿಯಲ್ಲಿ ಜೀವವಾಹಿನಿಯಾಗಿರುವ ಈ ನದಿಗಳ ಒಡಲಿಗೆ ಶೌಚ ನೀರು, ಮಲೀನ ನೀರನ್ನು ಬಿಡುವ ಮೂಲಕ ಹಾಗೂ ತ್ಯಾಜ್ಯವನ್ನು ಎಸೆಯುವ ಮೂಲಕ ಜೀವಜಲವನ್ನು ಮಲೀನಗೊಳಿಸುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ.
ನದಿ ಒಡಲೇ ತ್ಯಾಜ್ಯ ಗುಂಡಿ:
ಮನೆಯಲ್ಲಿ ಶೇಖರಣೆಯಾಗುವ ಪ್ಲಾಸಿಕ್ ಸೇರಿದಂತೆ ಘನ ತ್ಯಾಜ್ಯ, ಹಸಿ ತ್ಯಾಜ್ಯ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಂದು ಕೆಲವರು ತಂದು ಸೇತುವೆಯ ಮೇಲೆ ನಿಂತು ನೇರ ಎಸೆಯುವುದು ನದಿಯ ಒಡಲಿಗೆ. ಯಾರೂ ತಮ್ಮನ್ನು ಗಮನಿಸುತ್ತಿಲ್ಲ ಎಂದು ಗೊತ್ತಾದ ಕೂಡಲೇ ತ್ಯಾಜ್ಯವನ್ನು ನದಿಯ ಒಡಲಿಗೆ ಎಸೆದು ಅಲ್ಲಿಂದ ಪಲಾಯನ ಮಾಡುವ ಅದೆಷ್ಟೋ ಬುದ್ಧಿವಂತರೆನಿಸಿಕೊಂಡ ಮಾನವರು ಇಲ್ಲಿದ್ದಾರೆ. ಕೆಲವು ಹೊಟೇಲ್‌ನವರು, ರಸ್ತೆ ಬದಿ ಗಾಡಿ ಇಟ್ಟುಕೊಂಡು ತಿಂಡಿ ಮಾಡುವವರೂ ಇದರಲ್ಲೇನು ಕಮ್ಮಿ ಬಿದ್ದಿಲ್ಲ. ಕೋಳಿ, ಹಂದಿ, ಆಡು ಸಾಗಾಟದ ವಾಹನಗಳವರೂ ಸತ್ತ ಕೋಳಿ, ಹಂದಿ ಸೇರಿದಂತೆ ಪ್ರಾಣಿಗಳನ್ನು ತಂದು ನದಿಗೆ ಎಸೆದು ಪರಾರಿಯಾಗುವುದು ಕೂಡಾ ಇದೆ.
ಶೌಚ ನೀರು ಜೀವಜಲಕ್ಕೆ!:
ಉಪ್ಪಿನಂಗಡಿಯಲ್ಲಿ ಚರಂಡಿಗಳೆಲ್ಲಾ ಮುಖ ಮಾಡಿರುವುದು ನದಿಯ ಕಡೆಗೆ. ಆದ್ದರಿಂದ ಕೂಟೇಲು ಬಳಿಯಿಂದ ಹಿಡಿದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದವರೆಗೆ ಹೆಚ್ಚಿನ ಕಡೆ ಶೌಚ ನೀರು, ಮಲೀನ ನೀರೆಲ್ಲಾ ನೇತ್ರಾವತಿ ನದಿ ಗರ್ಭವನ್ನೇ ಸೇರಿ ಜೀವ ಜಲದೊಂದಿಗೆ ವಿಲೀನಗೊಳ್ಳುತ್ತದೆ. ವಸತಿ ಸಮುಚ್ಛಯ, ವಾಣಿಜ್ಯ ಸಂಕೀರ್ಣ, ಹೊಟೇಲ್, ರೆಸ್ಟೋರೆಂಟ್ ಹೀಗೆ ಎಲ್ಲದಕ್ಕೂ ಇಂಗುಗುಂಡಿ ಇದ್ದರೆ ಮಾತ್ರ ಪರವಾನಿಗೆ ನೀಡಬೇಕೆಂಬ ನಿಯಮವಿದ್ದರೂ, ಉಪ್ಪಿನಂಗಡಿಯಲ್ಲಿ ಹೆಚ್ಚಿನ ಕಡೆ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಆದ್ದರಿಂದ ನೇತ್ರಾವತಿ ನದಿಯೇ ಇಲ್ಲಿ ಇಂಗು ಗುಂಡಿಯಾಗಿದೆ. ಉಪ್ಪಿನಂಗಡಿ ಬಸ್ ನಿಲ್ದಾಣದ ಸಮೀಪದ ನೇತ್ರಾವತಿ ಸೇತುವೆಯ ಬಳಿ ಹಾಗೂ ಉಪ್ಪಿನಂಗಡಿ ಶ್ರೀ ವೀರಾಂಜನೇಯ ದೇವಸ್ಥಾನದ ಬಳಿ ವಸತಿ ಸಂಕೀರ್ಣ ಹಾಗೂ ವಾಣಿಜ್ಯ ಮಳಿಗೆಗಳಿಂದ ಮಲೀನ ನೀರು, ಶೌಚ ನೀರನ್ನು ನೇರವಾಗಿ ನೇತ್ರಾವತಿ ನದಿಗೆ ಬಿಡುವ ಕೆಲಸ ರಾಜಾರೋಷವಾಗಿ ನಡೆಯುತ್ತಿದೆ.
ಬಾತು ಕೋಳಿಗಳಂತೆ ಭಾಸ!:
ವರ್ಷದ 365 ದಿನವೂ ಇಲ್ಲಿ ಮಲೀನ ನೀರು ಹಾಗೂ ತ್ಯಾಜ್ಯಗಳು ನದಿಗಳನ್ನು ಸೇರುತ್ತಿದ್ದರೂ, ಹರಿಯುವ ನೀರಿನಲ್ಲಿ ಅದು ಕೂಡಾ ಹರಿದು ಹೋಗುತ್ತಿತ್ತು. ಆದರೆ ಈಗ ಅಣೆಕಟ್ಟಿನಿಂದಾಗಿ ಶೇಖರಣೆಗೊಂಡಿರುವ ಹಿನ್ನೀರಿನಲ್ಲಿ ಮಲೀನತೆಯ ಪ್ರಭಾವ ಜಾಸ್ತಿಯಾಗಿದೆ. ಹಿನ್ನೀರಿನಲ್ಲಿ ತೇಲುತ್ತಿರುವ ಪ್ಲಾಸ್ಟಿಕ್‌ಗಳು, ಪ್ಯಾಂಪರ‍್ಸ್‌ಗಳು ಸೇರಿದಂತೆ ಇನ್ನಿತ್ತರ ತ್ಯಾಜ್ಯಗಳು ಬಾತುಕೋಳಿಗಳ ಹಿಂಡು ಹಿನ್ನೀರಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತಿವೆ. ಇನ್ನು ಮಲೀನ ನೀರು ಕೂಡಾ ಇದರೊಳಗೆ ದಿನಾ ಸೇರುವುದರಿಂದ ದಿನೇ ದಿನೇ ನೀರು ಕಪ್ಪಡರತೊಡಗುತ್ತದೆಯಲ್ಲದೆ, ದುರ್ವಾಸನೆಗೂ ಕಾರಣವಾಗುತ್ತದೆ.
ನೇತ್ರಾವತಿ ನದಿಯು ಮುಂದಕ್ಕೆ ಹರಿದು ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯೊಂದಿಗೆ ಸಂಗಮಗೊಂಡು ಪವಿತ್ರ ಸಂಗಮ ತೀರ್ಥವಾಗುತ್ತಾಳೆ. ಅಲ್ಲೇ ಪರಶಿವನ ಉದ್ಭವಲಿಂಗವೂ ನದಿಯೊಡಳಲ್ಲಿ ಇದ್ದು, ಈಗ ಹಿನ್ನೀರಿನಿಂದಾಗಿ ಜಲಾವೃತಗೊಂಡಿದೆ. ಮಾನವರಿಂದಾಗುವ ಪ್ರಕೃತಿ ಮೇಲಿನ ದೌರ್ಜನ್ಯದಿಂದಾಗಿ ಉದ್ಭವಲಿಂಗ ಕೂಡಾ ಈ ಮಲೀನ ನೀರನ್ನು ಹೊದ್ದುಕೊಂಡೇ ಮುಳುಗುವಂತಾಗಿದೆ.
ನಮ್ಮ ನೆಲ, ಜಲ ನಮ್ಮದು. ಅದನ್ನು ನಾವು ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳಬೇಕೆಂಬ ಪ್ರತಿ ಮನೆ ಮನೆಯಲ್ಲಿಯೂ, ಶಾಲೆಗಳಲ್ಲಿ ಜಾಗೃತಿ ಮೂಡಬೇಕು. ರಸ್ತೆ ಬದಿಗಳಲ್ಲೂ ಕಸ ಹಾಕಿದರೂ ಮಳೆಗಾಲದಲ್ಲಿ ಅದು ಸೇರುವುದು ನದಿಗೆ. ಮಲೀನ ನೀರು ನದಿಗೆ ಹರಿಯದಂತೆ ಸೂಕ್ತ ಇಂಗು ಗುಂಡಿಯ ವ್ಯವಸ್ಥೆ ಮಾಡಬೇಕು. ನದಿಗೆ ಕಸ ಬಿಸಾಡುವವರ ಮೇಲೆನೂ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಗಮ ಕ್ಷೇತ್ರವೆನ್ನುವುದು ಪುಣ್ಯ ಸ್ನಾನದ ಜಾಗ. ಇಲ್ಲಿಗೆ ಪಿಂಡ ಪ್ರದಾನಾದಿ ಕಾರ್ಯಗಳಿಗೆ ಬರುವವರು ಹೂ, ಬಾಳೆ ಎಲೆ, ಬಟ್ಟೆ, ಪ್ಲಾಸ್ಟಿಕ್‌ಗಳನ್ನು ನದಿಗೆ ಬಿಸಾಡಿ ನದಿಯನ್ನು ಮಲೀನಗೊಳಿಸಬಾರದು. ಯಾಕೆಂದರೆ ಈಗ ಇಲ್ಲಿರುವುದು ನಿಂತ ನೀರು. ಇದರಿಂದ ತ್ಯಾಜ್ಯಗಳೆಲ್ಲಾ ಮುಂದಕ್ಕೆ ಹರಿಯದೇ ಅಲ್ಲೇ ಕೊಳೆಯುತ್ತದೆ. ಸ್ಥಳೀಯಾಡಳಿತ ಸಂಸ್ಥೆಗಳು ಕೂಡಾ ನದಿ ಮಲೀನವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಒಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಮತ್ತು ಜನರ ಸಹಕಾರವಿದ್ದಾಗ ಮಾತ್ರ ನದಿಯನ್ನು ಮಲೀನತೆಯಿಂದ ಕಾಪಾಡಬಹುದು.
ಕೈಲಾರು ರಾಜಗೋಪಾಲ ಭಟ್
ಸಾಮಾಜಿಕ ಕಾರ್ಯಕರ್ತರು