ಉಪ್ಪಿನಂಗಡಿ: ಉಪ್ಪಿನಂಗಡಿ ಕಸಬ ಗ್ರಾಮ ಕ್ಷೇತ್ರಕ್ಕೆ ಸಂಬಂಧಪಟ್ಟ ಬಾರ್ಲ ಎಂಬಲ್ಲಿ ಪುನರ್ನಿರ್ಮಾಣಗೊಂಡಿರುವ ಗ್ರಾಮ ದೈವ ಶಿರಾಡಿ ಹಾಗೂ ಪರಿವಾರ ದೈವಗಳ ಧರ್ಮಚಾವಡಿ ಮತ್ತು ದೈವಸ್ಥಾನದಲ್ಲಿ ಶ್ರೀ ದೈವಗಳ ಪುನ: ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮೇ 7 ರಂದು ಬೆಳಿಗ್ಗೆ ಗೋಪಾಲಕೃಷ್ಣ ತೋಳ್ಪಾಡಿತ್ತಾಯರ ನೇತೃತ್ವದಲ್ಲಿ ಶ್ರೀವತ್ಸ ಕೆದಿಲಾಯ ಶಿಬರ ಇವರ ದಿವ್ಯಹಸ್ತದಿಂದ ನಡೆಯಿತು.
ಮೇ ೬ರಂದು ಬೆಳಿಗ್ಗೆ ನವಗ್ರಹ ಹೋಮ, ಭೂ ವರಾಹ ಹೋಮ, ಸಂಜೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಮೇ ೭ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪ್ರತಿಷ್ಠೆ ನಡೆದು 9.57 ರ ಮಿಥುನ ಲಗ್ನದಲ್ಲಿ ಪುನರ್ನಿರ್ಮಾಣಗೊಂಡ ದೈವಸ್ಥಾನದಲ್ಲಿ ಶ್ರೀ ಶಿರಾಡಿ, ಶ್ರೀ ರುದ್ರಚಾಮುಂಡಿ, ಶ್ರೀ ಪಂಜುರ್ಲಿ, ಶ್ರೀ ಕಲ್ಕುಡ, ಶ್ರೀ ಕಲ್ಲುರ್ಟಿ ದೈವಗಳ ಪುನ: ಪ್ರತಿಷ್ಠೆ ನಡೆದು ಬ್ರಹ್ಮಕಲಶೋತ್ಸವ ನಡೆಯಿತು. ಶ್ರೀ ಗುಳಿದ ದೈವದ ಪ್ರತಿಷ್ಠೆಯೂ ನಡೆಯಿತು. ಬಳಿಕ ದೈವಗಳಿಗೆ ತಂಬಿಲ, ನಿತ್ಯ ನೈಮಿತ್ತಿಕ ವಿಷಯ, ಮಹಾಪೂಜೆ ಆಗಿ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಶಾಸಕ ಸಂಜೀವ ಮಠಂದೂರು, ಕೋಡಿಂಬಾಡಿ ರೈ ಎಸ್ಟೇಟ್ನ ಅಶೋಕ್ ಕುಮಾರ್ ರೈ ಸಹಿತ ಊರ, ಪರವೂರಿನ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ದೈವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.