ಪುತ್ತೂರು: ಕಡಬ ಹಾಗೂ ಸುಳ್ಯ ತಾಲೂಕು ವ್ಯಾಪ್ತಿ ಒಳಗೊಂಡಿರುವ ಸುಳ್ಯ ಎಸ್‌ಸಿ ಮೀಸಲು ಕ್ಷೇತ್ರ ಬಿಜೆಪಿಯ ಭದ್ರ ನೆಲೆ ಎಂಬುದು 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸಾಬೀತುಗೊಂಡಿದೆ. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು 30834 ಮತಗಳ ಅಂತರದ ದಾಖಲೆಯ ಜಯಗಳಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
1983ರಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾದ ಬಾಕಿಲ ಹುಕ್ರಪ್ಪ ಅವರು 1985ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ತೊರೆದು ಜನತಾ ಪಕ್ಷದ ಅಭ್ಯರ್ಥಿಯಾದಾಗ ಬಿಜೆಪಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಆಗ ಸುಳ್ಯದಲ್ಲಿ ಬಿಜೆಪಿಯ ಸಂಘಟನೆ ಬಲವಾಗಿರಲಿಲ್ಲ. 1983ರಲ್ಲಿ ಬಾಕಿಲ ಹುಕ್ರಪ್ಪ ಅವರು ಬಿಜೆಪಿಯಿಂದ ಗೆದ್ದಿದ್ದರೂ ಪಕ್ಷದ ಸಂಘಟನಾ ಬಲದಿಂದ ಗೆದ್ದುದಾಗಿರಲಿಲ್ಲ. ಆಗಿನ ಕಾಂಗ್ರೆಸ್ ಸರಕಾರದ ವಿರುದ್ಧದ ಜನಾಭಿಪ್ರಾಯದಲ್ಲಿ ಬಿಜೆಪಿ ಗೆದ್ದು ಬಂದಿತ್ತು. ಗೆದ್ದು ಶಾಸಕರಾದವರನ್ನು ಬಿಜೆಪಿ ನಾಯಕರು ನಿಯಂತ್ರಿಸಲು ಯತ್ನಿಸಿದಾಗ ಅದು ತಮ್ಮನ್ನು ಕಟ್ಟಿ ಹಾಕಲು ಮಾಡುವ ಪ್ರಯತ್ನದಂತೆ ಅನಿಸತೊಡಗಿ ಅವರು ರಾಮಕೃಷ್ಣ ಹೆಗಡೆಯವರ ನಾಯಕತ್ವದ ಜನತಾ ಪಕ್ಷದತ್ತ ವಾಲತೊಡಗಿದರು. ಅದಕ್ಕೆ ತಕ್ಕಂತೆ ಸುಳ್ಯದ ಜನತಾಪಕ್ಷದ ನಾಯಕರ ಆತ್ಮೀಯತೆ ಅವರಿಗೆ ಅಪ್ಯಾಯಮಾನವಾಯಿತು. ಆದ್ದರಿಂದಾಗಿ 1985ರಲ್ಲಿ ಬಾಕಿಲ ಹುಕ್ರಪ್ಪ ಅವರು ಜನತಾಪಕ್ಷದ ಅಭ್ಯರ್ಥಿಯಾಗಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಗ್ರಹಾರ ದುಗ್ಗಪ್ಪ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಈ ಚುನಾವಣೆಯಲ್ಲಿ 700 ಮತಗಳ ಅಂತರದಿಂದ ಹುಕ್ರಪ್ಪ ಅವರು ಸೋತು, ಕಾಂಗ್ರೆಸ್‌ನ ಕೆ.ಕುಶಲ ಅವರು ಗೆದ್ದಿದ್ದರು. ಇದಾದ ಬಳಿಕ ಬಿಜೆಪಿ ನಾಯಕರು ಗಮನ ಕೊಟ್ಟಿದ್ದು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸಲು. ಅದಕ್ಕಾಗಿ ಪ್ರತಿ ಸಂದರ್ಭವನ್ನು ಅವರು ಉಪಯೋಗಿಸಿಕೊಂಡರು. 1991ರಲ್ಲಿ ನಡೆದ ಕೋಮು ಗಲಭೆ ಅದಕ್ಕೆ ಗಟ್ಟಿಯಾದ ಅಡಿಪಾಯ ಒದಗಿಸಿತು. ಮರು ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರ ನೀಡಿದ ಲೀಡೇ ವಿ.ಧನಂಜಯಕುಮಾರ್ ಎಂ.ಪಿ.ಯಾಗುವುದಕ್ಕೆ ಕಾರಣವಾಯಿತು. 1994ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಂಗಾರ ಅವರು ಗೆದ್ದರು. ನಂತರ ಇದುವರೆಗೆ 30 ವರ್ಷಗಳ ಕಾಲ ಅಂಗಾರರೇ ಶಾಸಕರಾಗಿದ್ದರು. ಬಲವಾದ ಸಂಘಟನೆಯೇ ಇದಕ್ಕೆ ಕಾರಣವಾಗಿದೆ. ಈ ಬಾರಿ ಅಂಗಾರ ಅವರ ಬದಲಿಗೆ ಜಿ.ಪಂ.ಮಾಜಿ ಸದಸ್ಯೆ ಕು.ಭಾಗೀರಥಿ ಮುರುಳ್ಯರನ್ನು ಅಭ್ಯರ್ಥಿಯಾಗಿಸಿದ್ದು ಕೂಡ ಸಂಘಟನೆಯ ಧೈರ್ಯದಿಂದಲೇ. ಈಗ ಅದಕ್ಕೆ ಮಾನ್ಯತೆಯೂ ಸಿಕ್ಕಿದೆ. ಅಷ್ಟು ಲೀಡ್‌ನಲ್ಲಿ ಭಾಗೀರಥಿಯವರು ಗೆದ್ದಿದ್ದಾರೆ. ಈ ಏಳು ಚುನಾವಣೆಯಲ್ಲಿ ಅತೀ ಹೆಚ್ಚಿನ ಲೀಡ್ ಈ ಬಾರಿಯದ್ದು ಆಗಿದೆ.
ಸುಳ್ಯದಲ್ಲೂ ಪುತ್ತಿಲರಿಗೆ ಜೈ.. ಮೇ 13ರಂದು ಸಂಜೆ ಮಂಗಳೂರಿನ ಮತ ಎಣಿಕೆ ಕೇಂದ್ರದಿಂದ ಆಗಮಿಸಿದ ಭಾಗೀರಥಿಯವರನ್ನು ಕನಕಮಜಲು, ಜಾಲ್ಸೂರಿನಲ್ಲಿ ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ತೆರೆದ ವಾಹನದಲ್ಲಿ ಸುಳ್ಯಕ್ಕೆ ಕರೆ ತರಲಾಯಿತು. ಸುಳ್ಯ ಬಿಜೆಪಿ ಕಚೇರಿ ತಲುಪುತ್ತಲೇ ಸಿಡಿಮದ್ದು ಸಿಡಿಸಿ ಸಂಭ್ರಮಿಸಲಾಯಿತು. ಭಾಗೀರಥಿಯವರು ತೆರೆದ ವಾಹನದಲ್ಲಿ ಸುಳ್ಯ ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಭಾಗೀರಥಿಯವರಿಗೆ ಜೈ..ಪುತ್ತಿಲರಿಗೆ ಜೈ ಘೋಷಣೆ ಕೂಗಿದರು.
ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿ
ಸುಳ್ಯ ವಿಧಾನಸಭಾ ಕ್ಷೇತ್ರದ 60ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಶಾಸಕರಾಗಿ ಗೆದ್ದುಬಂದಿದ್ದಾರೆ. ಈ ಮೂಲಕ ಭಾಗೀರಥಿ ಮುರುಳ್ಯ ಅವರು ಸುಳ್ಯ ಮೀಸಲು ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಂಗಾರರ ಅಭಿವೃದ್ಧಿ ಕಾರ್ಯ, ಕಾರ್ಯಕರ್ತರ ಶ್ರಮದಿಂದ ಗೆಲುವು ಆಗಿದೆ. ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸುವೆ ಎಂದು ಗೆದ್ದ ಬಳಿಕ ಭಾಗೀರಥಿ ಮುರುಳ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವ ಎಸ್.ಅಂಗಾರ ಅವರು ಸುಳ್ಯ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಈ ಚುನಾವಣೆಯಲ್ಲಿ ಮನೆ ಮನೆಗೆ ತಲುಪಿಸಿದ್ದೇವೆ. ಎಲ್ಲಾ ಕಾರ್ಯಕರ್ತರು, ನಾಯಕರು, ಸಂಘಟನೆಯ ಹಿರಿಯರು ಶ್ರಮ ಪಟ್ಟು ದುಡಿದಿದ್ದಾರೆ. ಆದ್ದರಿಂದ ಇಲ್ಲಿ ಬಿಜೆಪಿಗೆ ಗೆಲುವಾಗಿದೆ ಎಂದು ಭಾಗೀರಥಿ ಮುರುಳ್ಯ ಹೇಳಿದ್ದಾರೆ.
1994ರಿಂದ ಬಿಜೆಪಿಗೆ ಸಿಕ್ಕ ಲೀಡ್
1994ರಲ್ಲಿ ಎಸ್.ಅಂಗಾರ ಅವರು ಕುಶಲರಿಗಿಂತ 15,044 ಮತಗಳ ಲೀಡ್‌ನಲ್ಲಿ ಗೆದ್ದಿದ್ದರು. 1997ರಲ್ಲಿ 6,997 ಲೀಡ್, 2004ರಲ್ಲಿ 17,085 ಲೀಡ್, 2009ರಲ್ಲಿ 4322 ಲೀಡ್ ದೊರೆತಿತ್ತು. 2013ರಲ್ಲಿ ಡಾ.ರಘು ಅವರ ಎದುರು ಅಂಗಾರ ಅವರ ಲೀಡ್ 1371ಕ್ಕೆ ಇಳಿದಿತ್ತು. ಆದರೆ 2018ರಲ್ಲಿಲೀಡ್ 26,068 ಮತಗಳಿಗೆ ನೆಗೆದಿತ್ತು. ಈ ಬಾರಿ ಭಾಗೀರಥಿಯವರು ಹಿಂದಿನ ದಾಖಲೆಗಳನ್ನು ಮುರಿದು 30874 ಮತಗಳ ಲೀಡ್ ಪಡೆದಿದ್ದಾರೆ. ಮತದಾನದ ಪ್ರಮಾಣ ತಗ್ಗಿದ್ದುದರಿಂದ ಮತ್ತು ಜನರಲ್ಲಿ ಅಷ್ಟೊಂದು ಉತ್ಸಾಹ ಕಂಡು ಬರುತ್ತಿರಲಿಲ್ಲವಾದುದರಿಂದ ಭಾಗೀರಥಿಯವರಿಗೆ 10 ಸಾವಿರ ಮತಗಳ ಲೀಡಷ್ಟೇ ದೊರೆಯಬಹುದು ಎಂದು ಜನರು ಮತ್ತು ಕೆಲವು ಬಿಜೆಪಿ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದರು. ಆದರೆ ಕ್ಷೇತ್ರದಲ್ಲಿ ಬಿಜೆಪಿ ಬಲವಾಗಿ ಬೇರೂರಿರುವುದರಿಂದ ಹಾಗೂ ಸಕ್ರಿಯ ಕಾರ್ಯಕರ್ತರ ತಂಡದ ಸಂಘಟಿತ ಪ್ರಯತ್ನದಿಂದ ಈ ರೀತಿಯ ಭಾರೀ ಲೀಡ್ ಸಾಧ್ಯವಾಗಿದೆ ಎಂಬ ಮಾತು ಕೇಳಿಬಂದಿದೆ.
ಹೈಲೈಟ್ಸ್
- ಸುಳ್ಯ ವಿಧಾನಸಭಾ ಕ್ಷೇತ್ರದ 231 ಬೂತ್‌ಗಳಲ್ಲಿ 187 ಬೂತ್‌ಗಳಲ್ಲಿ ಬಿಜೆಪಿ ಲೀಡ್ ಪಡೆದಿದೆ. ಕಾಂಗ್ರೆಸ್ 44 ಬೂತ್‌ಗಳಲ್ಲಿ ಲೀಡ್ ಪಡೆದುಕೊಂಡಿದೆ.
- ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 2552 ಮತಗಳು ನೋಟಾಗೆ ಚಲಾಯಿಸಲ್ಪಟ್ಟಿದೆ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಹೊರತಾಗಿ ಮೂರನೇ ಸ್ಥಾನದಲ್ಲಿ ನೋಟಾ ಮತಗಳ ಸಂಖ್ಯೆ ಇದೆ.
- ಸುಳ್ಯ ವಿಧಾನಸಭಾ ಕ್ಷೇತ್ರದ ಐನೆಕಿದು(67), ಬಾಳುಗೋಡು(60), ಪಾಲ್ತಾಡು(69), ದೋಳ್ಪಾಡಿ(57), ಬಂಗ್ಲೆಗುಡ್ಡೆ (53), ಹರಿಹರ ಪಲ್ಲತ್ತಡ್ಕ(41), ಕಂದ್ರಪ್ಪಾಡಿ(40) ಮತಗಟ್ಟೆಯಲ್ಲಿ ಹೆಚ್ಚು ನೋಟಾ ಮತಗಳು ಚಲಾವಣೆಯಾಗಿವೆ.
- ಭಾಗೀರಥಿ ಮುರುಳ್ಯ ಅವರ ತವರು ಮತಗಟ್ಟೆಯಾಗಿರುವ ಮುರುಳ್ಯ ಶಾಂತಿನಗರ ಬೂತ್‌ನಲ್ಲಿ ಅವರು 731 ಮತ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 199 ಮತ ಪಡೆದಿದ್ದಾರೆ.
- ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಅಂಚೆ ಮತಗಳಲ್ಲೂ ಭಾಗೀರಥಿ ಮುರುಳ್ಯ 875 ಮತಗಳ ಮುನ್ನಡೆ ಹೊಂದಿದ್ದಾರೆ.
- 632 ಅಂಚೆ ಮತಗಳು ತಿರಸ್ಕೃತಗೊಂಡಿದ್ದವು.