ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸ ನಾಳೆಯಿಂದಲೇ ಆರಂಭ: ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಕಾರ್ಯಕರ್ತರು ಮತ್ತು ಪಕ್ಷದ ನಾಯಕರ ಅವಿರತ ಶ್ರಮದ ಫಲವಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ, ಈ ಗೆಲುವು ನನ್ನದಲ್ಲ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವಾಗಿದೆ. ತಳಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸ ಮತ್ತೆ ಆರಂಭವಾಗಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.
ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ಪ್ರತೀಯೊಬ್ಬ ಕಾಂಗ್ರೆಸ್ಸಿರೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮ ಗೆಲುವು ಸಾಧ್ಯವಾಗಿದೆ.ಬಿಜೆಪಿಗೆ ಮತಗಳು ಕಡಿಮೆಯಾಗಿ ಪಕ್ಷೇತರ ಅಭ್ಯರ್ಥಿಗೆ ಸ್ವಲ್ಪ ಹೆಚ್ಚಿನ ಮತಗಳು ಬಿದ್ದಿರುವ ಕಾರಣ ಅಂತರದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ಹೇಳಿದರು.
ಅಭಿವೃದ್ದಿಯಲ್ಲಿ ನಾವು ರಾಜಕೀಯ ಮಾಡುವುದಿಲ್ಲ, ದ್ವೇಷದ ರಾಜಕಾರಣ ನನ್ನಲ್ಲಿಲ್ಲ. ಯಾವುದೇ ಪಕ್ಷ ಬೇದವಿಲ್ಲದೆ ಎಲ್ಲರನ್ನೂ ಅಭಿವೃದ್ದಿಯ ಜೊತೆ ಸೇರಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರತಿಜ್ಞಾ ವಿಧಿ ಸ್ವೀಕಾರದ ಬಳಿಕ ಪುತ್ತೂರಿನಲ್ಲಿ ಅಧಿಕಾರಿಗಳ ಸಭೆಯನ್ನು ಕರೆಯುತ್ತೇನೆ. ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಕಾರ್ಯಸೂಚಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದೇನೆ. ಅಕ್ರಮ ಸಕ್ರಮ ಮತ್ತು 94ಸಿ ಹಕ್ಕು ಪತ್ರವನ್ನು ಗ್ರಾಮ ಮಟ್ಟದಲ್ಲೇ ವಿತರಣೆ ಮಾಡುವ ಕೆಲಸವನ್ನು ಮಾಡುತ್ತೇನೆ. ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದೇನೆ ಎಂದು ಹೇಳಿದರು.
ಪುತ್ತೂರಿನ ಸಮಗ್ರ ಅಭಿವೃದ್ದಿಗೆ ಎಲ್ಲರ ಸಹಕಾರವನ್ನು ಕೋರಿದರು.
ವೇದಿಕೆಯಲ್ಲಿ ಪುತ್ತೂರು ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಡಾ.ರಾಜಾರಾಂ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ ಎಸ್ ಮಹಮ್ಮದ್, ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ , ಮಾಜಿ ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ನ್ಯಾಯವಾದಿ ಭಾಸ್ಕರ ಕೋಡಿಂಬಾಳ, ನಝೀರ್ ಮಠ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶುಕೂರ್ ಹಾಜಿ , ಮಾಜಿ ಜಿಪಂ ಸದಸ್ಯ ಸೋಮನಾಥ , ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಹಮ್ಮದ್ ಬಡಗನ್ನೂರು ಸ್ವಾಗತಿಸಿ, ಕಾಂಗ್ರೆಸ್ ಮುಖಂಡ ಮುರಳೀದರ್ ರೈ ಮಠಂತಬೆಟ್ಟು ವಂದಿಸಿದರು.