ಪುತ್ತೂರು: ಪುತ್ತೂರಿನಲ್ಲಿ ಬ್ಯಾನರಿಗೆ ಚಪ್ಪಲಿ ಹಾರ ಹಾಕಿ ಬಿಜೆಪಿ ನಾಯಕರಿಗೆ ಅವಮಾನ ಮಾಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾದ ಯುವಕರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ರಾಷ್ಟ್ರ ವ್ಯಾಪಿ ಸುದ್ದಿಯಾಗಿದ್ದು, ರಾಜ್ಯವೇ ತಲೆತಗ್ಗಿಸುವಂತಾಗಿದೆ. ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಡಿವೈಎಸ್ ಪಿ ವೀರಯ್ಯ ಹಿರೇಮಠ ಗೆ ದೂರವಾಣಿ ಕರೆ ಮಾಡಿದ ಮಾಜಿ ಶಾಸಕಿ ಕೆ ಶಕುಂತಲಾ ಶೆಟ್ಟಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಹಲವು ಕರೆಗಳು ಬಂದಿದ್ದು ಸಿಟ್ಟಿಗೆದ್ದ ಶಕುಂತಲಾ ಶೇಟ್ಟಿ ಅವರು ಡಿವೈಎಸ್ಪಿ ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಮತ್ತು ಡಿ ವಿ ಸದಾನಂದ ಗೌಡರ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಯುವಕರ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸರು ನಡೆಸಿದ ಮೂರನೇ ದರ್ಜೆ ಟ್ರೀಟ್ಮೆಂಟನ್ನು ಖಂಡಿಸಿರುವ ಶಕುಂತಲಾ ಶೆಟ್ಟಿ, ಪೊಲೀಸರ ಈ ಕೃತ್ಯ ಜನರಲ್ಲಿ ಭಯ ಮೂಡಿಸಿದೆ ಎಂದು ಹೇಳಿದ್ದಾರೆ.
ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿದರೆ ಯಾವ ನಾಯಕನು ಸಣ್ಣವನಾಗುವುದಿಲ್ಲ, ಹೂವಿನ ಹಾರ ಹಾಕಿದ ತಕ್ಷಣ ದೊಡ್ಡವನು ಆಗುವುದಿಲ್ಲ ಕೈ ಚಪಲ ತೀರಿಸಲು ಎರಡು ಏಟು ಕೊಟ್ಟು ಕೇಸು ದಾಖಲಿಸಿ ಬಿಡಬಹುದಾಗಿತ್ತು. ಯಾರದೋ ಒತ್ತಡಕ್ಕೆ ಈ ರೀತಿಯ ಕ್ರಮ ಸರಿಯಲ್ಲ. ಒತ್ತಡವಿಲ್ಲದೆ ನೀವು ಈ ರೀತಿ ಮಾಡಿದ್ದೀರಿ ಎಂದಾದರೆ ನಿಮ್ಮನ್ನು ಇಲ್ಲಿಂದ ಕಳುಹಿಸಬೇಕಾಗುತ್ತದೆ ನಿಮ್ಮ ಕೃತ್ಯ ಪೊಲೀಸ್ ಇಲಾಖೆಗೆ ಶೋಭೆ ತರುವಂತದಲ್ಲ. ಅತ್ಯಾಚಾರಿಯೊಬ್ಬನ ಮೇಲೆ ಇಂತಹ ದೌರ್ಜನ್ಯ ನಡೆದಿದ್ದರೆ ಬಹುಶಃ ಯಾರು ಪ್ರಶ್ನಿಸುತ್ತಿರಲಿಲ್ಲ.. ಆದರೆ ಬ್ಯಾನರ್ ನಂತಹ ಸಣ್ಣ ವಿಷಯಕ್ಕೆ ಈ ರೀತಿಯ ಹಿಂಸೆ ಪೊಲೀಸ್ ಇಲಾಖೆ ಗಣತೆಗೆ ಸರಿಯಾದ ಕ್ರಮವಲ್ಲ ಎಂದು ಪುತ್ತೂರು ಡಿ ವೈ ಎಸ್ ಪಿ ವೀರಯ್ಯ ಹಿರೇಮಠ ಅವರನ್ನು ಶಕುಂತಲಾ ಶೆಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ ಸುದ್ದಿಯೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು ನಾಳೆ ಆಸ್ಪತ್ರೆಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.