ಇಳಂತಿಲ ಹೊಳೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ; ಮಾಮೂಲಿಗೆ ಅಧಿಕಾರಿಗಳು ಮೌನವೇ?: ಸಾರ್ವಜನಿಕರ ಪ್ರಶ್ನೆ

0

ಉಪ್ಪಿನಂಗಡಿ: ಈ ಬಾರಿಯ ಬಿರು ಬೇಸಿಗೆಯಲ್ಲಿ ನೀರಿಲ್ಲದೆ ಸಂಪೂರ್ಣ ಬತ್ತಿ ಹೋದ ಸಣ್ಣ ಹೊಳೆಗಳಿಂದಾಗಿ ಅಕ್ರಮ ಮರಳು ದಂಧೆಯವರಿಗೆ ಈಗ ಸುಗ್ಗಿಯ ಕಾಲ ಬಂದೊದಗಿದಂತಿದೆ. ಅಕ್ರಮ ಮರಳುಗಾರಿಕೆಯ ಮೂಲಕ ಸಣ್ಣ ಹೊಳೆಗಳ ಒಡಲನ್ನು ಬರಿದಾಗಿಸುವ ಕೆಲಸವೀಗ ಎಗ್ಗಿಲ್ಲದೆ ನಡೆಯುತ್ತಿದೆ.

ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕಾಯರ್ಪಾಡಿ ಬಳಿಯ ಶ್ರೀ ಕಲ್ಕುಡ ಮೂಲ ಮಧ್ಯ ಸ್ಥಾನದ ಬಳಿ ಕಾಂಕ್ರೀಟ್ ರಸ್ತೆಯೊಂದಿದ್ದು, ಅದರಲ್ಲಿ ಹೋಗಿ ಅಲ್ಲಿರುವ ಇಳಂತಿಲ ಹೊಳೆಗೆ ಇಳಿದರೆ ಅಲ್ಲಿ ಅಕ್ರಮ ಮರಳುಗಾರಿಕೆಯ ಅಡ್ಡೆಗಳ ದರ್ಶನವಾಗುತ್ತದೆ. ಇಲ್ಲಿ ಹೊಳೆಯನ್ನು ಮನಬಂದಂತೆ ಅಗೆದಿದ್ದು, ಮರಳು ತೆಗೆದು ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಮುಂದೆ ಮಳೆಗಾಲದಲ್ಲಿ ಇಲ್ಲಿ ನೀರಿರುವ ಸಂದರ್ಭ ಹೊಂಡ- ಗುಂಡಿಗಳ ಅರಿವಿಲ್ಲದೆ ಅಪಾಯವಾಗುವ ಸಂಭವವೂ ಎದುರಾಗುವ ಸಾಧ್ಯತೆಯಿದೆ.

ಟಿಪ್ಪರ್‌ನಲ್ಲಿ ಸಾಗಾಟ: ಉತ್ತರ ಭಾರತ ಮೂಲದ ಕಾರ್ಮಿಕರನ್ನು ಬಳಸಿಕೊಂಡು ಇಲ್ಲಿ ಮರಳು ತೆಗೆಯುವ ಕಾರ್ಯ ನಿರಂತರ ನಡೆಯುತ್ತಿದ್ದು, ಅದನ್ನು ಸ್ಥಳದಲ್ಲಿಯೇ ಜಾಲಿಸಿ ಟಿಪ್ಪರ್‌ಗಳಿಗೆ ಲೋಡ್ ಮಾಡಲಾಗುತ್ತದೆ. ದಿನಕ್ಕೆ ಒಂದು ಅಡ್ಡೆಯಿಂದ ಏನಿಲ್ಲದಿದ್ದರೂ 5 ಲೋಡ್‌ನಷ್ಟಾದರೂ ಮರಳನ್ನು ತೆಗೆಯಲಾಗುತ್ತದೆ. ಮರಳಿಗೆ ಈಗ ಉತ್ತಮ ದರವಿದ್ದು, ಯಾವುದೇ ತೆರಿಗೆಯ ಹೊರೆ ಇಂತಹ ಅಕ್ರಮ ದಂಧೆಗೆ ಇಲ್ಲದ್ದರಿಂದ ಅಕ್ರಮ ದಂಧೆಕೋರರಿಗೆ ಉತ್ತಮ ಲಾಭ ಮಾಡುವುದಲ್ಲದೆ, ಸರಕಾರದ ಬೊಕ್ಕಸಕ್ಕೂ ನಷ್ಟ ಮಾಡುತ್ತಿದ್ದಾರೆ.

ಮಾಮೂಲಿಗೆ ಮೌನವಾದರೆ ?: ಸ್ಥಳೀಯವಾಗಿ ಗ್ರಾಮ ಲೆಕ್ಕಾಧಿಕಾರಿ (ಗ್ರಾಮ ಆಡಳಿತಾಧಿಕಾರಿ), ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಪೊಲೀಸರು ಇದ್ದರೂ, ಇಲ್ಲಿ ಅಕ್ರಮ ಮರಳುಗಾರಿಕೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ದಂಧೆಕೋರರು ನೀಡುವ ಮಾಮೂಲಿಗೆ ಸೋತು ಇವರು ಅಕ್ರಮ ತಡೆಯುವಲ್ಲಿ ಮೌನವಾದರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಮಾರಾಟಕ್ಕಲ್ಲ, ಸ್ವಂತಕ್ಕೆ!: ಇಲ್ಲಿ ಅಕ್ರಮವಾಗಿ ಮರಳು ತೆಗೆಯುವವರನ್ನು ಪ್ರಶ್ನಿಸಿದರೆ, ಇದು ಮಾರಾಟಕ್ಕಲ್ಲ. ನಾವು ಮನೆ ಕಟ್ಟುತ್ತಿದ್ದೇವೆ ಅದಕ್ಕೆ ಎಂಬ ಉತ್ತರ ದೊರೆಯುತ್ತದೆ ಎನ್ನುತ್ತಾರೆ ಸಾರ್ವಜನಿಕರು. ಆದರೆ ಇಲ್ಲಿ ಹೊಳೆಯನ್ನೇ ಬಗೆದು ಮರಳು ತೆಗೆದಿರುವುದನ್ನು ನೋಡಿದಾಗಲೇ ಅರ್ಥವಾಗುತ್ತದೆ. ಇದು ಸ್ವಂತಕ್ಕ ಮಾರಾಟಕ್ಕ ಎನ್ನುವುದು ತಿಳಿಯುವ ರೀತಿಯಲ್ಲಿ ಇಲ್ಲಿ ಮರಳನ್ನು ತೆಗೆದಿರುವುದು ಕಂಡು ಬರುತ್ತಿದೆ.

ರಸ್ತೆಗಳು ಹಾಳು: ದಿನವಿಡೀ ಮರಳು ತುಂಬಿದ ಟಿಪ್ಪರ್‌ಗಳ ಓಡಾಟದಿಂದ ಇಲ್ಲಿನ ಸಂಪರ್ಕ ರಸ್ತೆಯೂ ಹಾಳಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕರ ಹೆಸರು ದುರ್ಬಳಕೆ!: ನಾವು ಶಾಸಕರ ಜನಗಳು ಎಂದು ಹೇಳಿಕೊಂಡು ಅಕ್ರಮ ಮರಳು ದಂಧೆ ಮಾಡುವ ಕೆಲವರು ಇಲ್ಲಿ ಸ್ಥಳೀಯರ ಬಾಯಿಮುಚ್ಚಿಸುವ ಸಲುವಾಗಿ ಬೆಳ್ತಂಗಡಿ ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುವ ಸಾರ್ವಜನಿಕರು, ಇಲ್ಲಿ ನಡೆಯುತ್ತಿರುವ ವಿಚಾರ ಶಾಸಕರಿಗೆ ಗೊತ್ತೇ ಇರದು ಎನ್ನುತ್ತಾರೆ.

ಒಟ್ಟಿನಲ್ಲಿ ಹೊಳೆಗಳಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ಕೃಷಿಕ ಕಂಗಾಲಾಗಿದ್ದರೆ, ಅಕ್ರಮ ಮರಳು ದಂಧೆಯವರಿಗೆ ಅನುಕೂಲಕರ ವಾತಾವರಣ ಲಭ್ಯವಾದಂತಾಗಿದೆ. ಅಧಿಕಾರಿಗಳು ಇಂತಹ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here