ಎಸ್‌ಡಿಪಿಐ ಕಚೇರಿಗಳಿಗೆ ಬೀಗ – ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿದ್ದ ಎಸ್‌ಡಿಪಿಐ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

0
  • ಪಿಎಫ್‌ಐ ನಿಷೇಧದ ಬಳಿಕ ಎಸ್‌ಡಿಪಿಐ ಕಚೇರಿಗಳನ್ನು ಜಪ್ತಿ ಮಾಡಿ ಬೀಗಜಡಿದಿದ್ದ ಸರಕಾರ
  • ಜಪ್ತಿ ಮಾಡಿರುವ ಕಚೇರಿ ತೆರವು ಮನವಿಗೆ ಸ್ಪಂದಿಸದ ಹಿನ್ನೆಲೆ ಹೈಕೋರ್ಟ್‌ಗೆ ಎಸ್‌ಡಿಪಿಐ ಅರ್ಜಿ
  • ಪಿಎಫ್‌ಐ ಜೊತೆ ಯಾವುದೇ ಸಂಬಂಧ ಹೊಂದಿಲ್ಲ-ವಾದ
  • ಪಿಎಫ್‌ಐ, ಸಿಎಫ್‌ಐ ಸಂಘಟನೆಗಳ ಚಟುವಟಿಕೆಗಳಿಗೆ ಎಸ್‌ಡಿಪಿಐ ಕಚೇರಿ ಬಳಕೆ-ರಾಜ್ಯ ಸರಕಾರ

ಬೆಂಗಳೂರು:ಕೇಂದ್ರ ಸರಕಾರ ಪಿಎಫ್‌ಐ ಮತ್ತದರ ಅಂಗಸಂಸ್ಥೆಗಳನ್ನು ನಿಷೇಧಿಸಿದ್ದ ಬಳಿಕದ ಬೆಳವಣಿಗೆಯಲ್ಲಿ ದ.ಕ.ಜಿಲ್ಲೆಯಲ್ಲಿದ್ದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ)ಕಚೇರಿಗಳಿಗೆ ಬೀಗ ಹಾಕಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಎಸ್‌ಡಿಪಿಐ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಆದರೆ, ಕಾನೂನುಬಾಹಿರ ಚಟುವಟಿಕೆಗಳ ತಡೆ (ಯುಎಪಿ) ಕಾಯಿದೆಯಡಿ ಜಿಲ್ಲಾ ನ್ಯಾಯಾಧೀಶರ ಮುಂದೆ ಈ ಎಲ್ಲಾ ವಿವಾದಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೇಳಿದೆ.

2022ರ ಸೆಪ್ಟೆಂಬರ್ 28ರಂದು ಕೇಂದ್ರ ಗೃಹ ಇಲಾಖೆಯು ಐದು ವರ್ಷಗಳ ಅವಧಿಗೆ ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ(ಯುಎಪಿಎ)ಅಡಿ ನಿಷೇಧಿಸಿತ್ತು.ಬಳಿಕ, ಯುಎಪಿ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಮರುದಿನ, ರಾಜ್ಯ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಎಸ್‌ಡಿಪಿಐಗೆ ಸೇರಿದ ಕಚೇರಿಗಳ ಮೇಲೂ ದಾಳಿ ನಡೆಸಿ, ಜಪ್ತಿ ಮಾಡಿ ಕಚೇರಿಗಳಿಗೆ ಬೀಗ ಹಾಕಿತ್ತು. ತಹಶೀಲ್ದಾರ್‌ಗಳು, ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಪೊಲೀಸರ ಜೊತೆಗೂಡಿ ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳು ಹಾಗೂ ದಕ್ಷಿಣ ಕನ್ನಡದ ಎಸ್‌ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ, ಜಫ್ತಿ ಮಾಡಿದ್ದರು. ಜಪ್ತಿ ಮಾಡಿರುವ ಕಚೇರಿಗಳನ್ನು ತೆರವು ಮಾಡುವಂತೆ ಎಸ್‌ಡಿಪಿಐ ಪ್ರತಿವಾದಿಗಳಿಗೆ ಮನವಿ ಮಾಡಿತ್ತು. ಇದಕ್ಕೆ ಪ್ರತಿವಾದಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಹೈಕೋರ್ಟ್ ಮೆಟ್ಟಿಲೇರಿತ್ತು.

ಪಿಎಫ್‌ಐ ಜೊತೆ ಎಸ್‌ಡಿಪಿಐ ಸಂಬಂಧ ಹೊಂದಿಲ್ಲ-ವಾದ: ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರವೂ ಪಿಎಫ್‌ಐ ಜೊತೆ ಎಸ್‌ಡಿಪಿಐ ಸಂಬಂಧ ಹೊಂದಿಲ್ಲ. ಪಿಎಫ್‌ಐ ಮತ್ತದರ ಅಂಗ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಗೃಹ ಸಚಿವಾಲಯ ಎಸ್‌ಡಿಪಿಐ ಹೆಸರು ಸೇರಿಸಿಲ್ಲ. ಹೀಗಿದ್ದರೂ, ಸರ್ಕಾರ ಪಕ್ಷಕ್ಕೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿದೆ.ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಮೀರಿ ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಎಸ್‌ಡಿಪಿಐ ನ್ಯಾಯಪೀಠದ ಗಮನ ಸೆಳೆದಿತ್ತು.

ಎಸ್‌ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್‌ಸಾದತ್ ಅರ್ಜಿ ಸಲ್ಲಿಸಿದ್ದರು. ದಾಳಿ ನಡೆಸಿ, ಜಪ್ತಿ ಮಾಡಿರುವ ಸ್ವತ್ತುಗಳಿಗೆ ಹಾಕಲಾಗಿರುವ ಸೀಲ್ (ಮೊಹರು) ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಅವರು ಕೋರಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿತ್ತು.

ಪಿಎಫ್‌ಐ, ಸಿಎಫ್‌ಐ ಚಟುವಟಿಕೆಗಳಿಗೆ ಎಸ್‌ಡಿಪಿಐ ಕಚೇರಿ ಬಳಕೆ-ಸರಕಾರ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರ, ಎಸ್‌ಡಿಪಿಐ ಕಚೇರಿಗಳನ್ನು ನಿಷೇಧಿತ ಪಿಎಫ್‌ಐ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ) ಸಂಘಟನೆಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು.ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿಯೋಜಿಸಿರುವ ಅಧಿಕಾರದಂತೆಯೇ ಸಮಗ್ರ ಮಾಹಿತಿ ಕಲೆಹಾಕಿ, ತನಿಖೆ ನಡೆಸಿದ ನಂತರವೇ ಜಿಲ್ಲಾಧಿಕಾರಿಗಳು ಕಚೇರಿಗಳಿಗೆ ಬೀಗ ಮುದ್ರೆ ಹಾಕಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದೆ.

ಸೀಲ್ ತೆರವು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲು ಮನವಿ: ಅರ್ಜಿದಾರರ ಪರ ವಕೀಲರು, ಯಾವುದೇ ಮಾಹಿತಿ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐ ಕಚೇರಿಗಳು, ಚುನಾಯಿತ ಕಾರ್ಪೊರೇಟರ್‌ಗಳ ಕಚೇರಿಗಳಿಗೆ ಬೀಗ ಹಾಕಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಎಸ್‌ಡಿಪಿಐ ಪಕ್ಷದ ಹಲವು ಮಂದಿ ಚುನಾಯಿತರಾಗಿದ್ದಾರೆ. ದಕ್ಷಿಣ ಕನ್ನಡದಲಿ 200ಕ್ಕೂ ಅಧಿಕ ಚುನಾಯಿತ ಪ್ರತಿನಿಗಳಿದ್ದು, ರಾಜಕೀಯ ಚಟುವಟಿಕೆ ನಡೆಸಲು ಅವರಿಗೆ ಕಚೇರಿಯ ಅಗತ್ಯವಿದೆ.ಆದ್ದರಿಂದ,ಜಪ್ತಿ ಮಾಡಿರುವ ಕಚೇರಿಗಳಿಗೆ ಹಾಕಲಾಗಿರುವ ಮೊಹರು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದರು.
ಪ್ರಜಾಪ್ರತಿನಿಧಿ ಕಾಯಿದ-1951ರ ಅಡಿ ನೋಂದಾಯಿತ ರಾಜಕೀಯ ಪಕ್ಷವಾಗಿರುವ ಎಸ್‌ಡಿಪಿಐ, ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಕೆಲ ವಿಭಜನಕಾರಿ ಶಕ್ತಿಗಳ ಕೆಂಗಣ್ಣಿಗೆ ಪಕ್ಷ ಗುರಿಯಾಗಿದ್ದು, ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದೆ.ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾ (ಪಿಎಫ್‌ಐ) ಜತೆ ಎಸ್‌ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ.‌ ಪಿಎಫ್‌ಐ ಮತ್ತದರ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಗೃಹ ಸಚಿವಾಲಯ ಎಸ್‌ಡಿಪಿಐ ಹೆಸರು ಸೇರಿಸಿಲ್ಲ. ಹೀಗಿದ್ದರೂ, ಜಿಲ್ಲಾಡಳಿತವು ಪಕ್ಷಕ್ಕೆ ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದೆ’ ಎಂದು ಆಕ್ಷೇಪಿಸಿದ್ದರು. ಮುಂಚಿತವಾಗಿ ನೋಟಿಸ್ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐನ 17 ಕಚೇರಿಗಳನ್ನು ಸೀಲ್ ಮಾಡಿದ್ದಾರೆ. ಸೀಲ್ ಹಾಕಿದ್ದರೂ ಕಚೇರಿಗಳಿದ್ದ ಕಟ್ಟಡಗಳಿಗೆ ಬಾಡಿಗೆ ಕಟ್ಟುತ್ತಿದ್ದೇವೆ.ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಎಸ್‌ಡಿಪಿಐ ಸಿದ್ಧತೆ ನಡೆಸಬೇಕಿದ್ದು,ಕಚೇರಿಗಳನ್ನು ಬಂದ್ ಮಾಡಿರುವುದರಿಂದ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲಾಗುತ್ತಿಲ್ಲ.ಆದ್ದರಿಂದ, ಸೀಲ್‌ಗಳನ್ನು ತೆರವು ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಅಕ್ರಮ ಚಟುವಟಿಕೆ ದೃಢಪಟ್ಟ ನಂತರವೇ ಡಿಸಿ ಕ್ರಮ-ಎಎಜಿ: ರಾಜ್ಯ ಸರ್ಕಾರದ ಪರ ವಾದಿಸಿದ್ದ ಆಗಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್‌ಶ್ಯಾಮ್ ಅವರು, ಎಸ್‌ಡಿಪಿಐ ಕಚೇರಿಗಳನ್ನು ನಿಷೇಽತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸಂಘಟನೆಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಆಧರಿಸಿ, ಜಿಲ್ಲಾಧಿಕಾರಿಗಳು ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದನ್ನು ದೃಢಪಡಿಸಿಕೊಂಡ ನಂತರವೇ ಕ್ರಮ ಕೈಗೊಂಡಿದ್ದಾರೆ ಎಂದರು. ಜಿಲ್ಲಾಡಳಿತ ಸಮಗ್ರ ಮಾಹಿತಿ ಕಲೆಹಾಕಿ, ತನಿಖೆ ನಡೆಸಿ, ಶಾಂತಿ ಭಂಗ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಉದ್ದೇಶದ ಕೃತ್ಯಗಳನ್ನು ನಡೆಸುತ್ತಿದೆ ಎಂಬುದನ್ನು ಮನಗಂಡ ಬಳಿಕವೇ ಎಸ್‌ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ, ನಂತರ ಅವುಗಳಿಗೆ ಬೀಗ ಹಾಕಲಾಗಿದೆ. ಒಂದು ವೇಳೆ ಅರ್ಜಿದಾರರು ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸುವುದಾದರೆ ಅದನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದರು. ಕಚೇರಿ ಜಾಗದ ಬಗ್ಗೆ ಮಾಡಿಕೊಂಡಿರುವ ಬಾಡಿಗೆ ಒಪ್ಪಂದಗಳಲ್ಲಿ ಉದ್ದೇಶವನ್ನು ನಮೂದಿಸಿಲ್ಲ.ಕೆಲವು ಒಪ್ಪಂದಗಳ ಅವಧಿ ಮುಗಿದಿದೆ, ಆ ಕಟ್ಟಡಗಳ ಮಾಲೀಕರನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂದು ಅರುಣ್‌ಶ್ಯಾಂ ವಿವರಿಸಿದರು.

ನಿಷೇಧಿತ ಪಿಎಫ್‌ಐ ಸಂಘಟನೆ ಚಟುವಟಿಕೆ ನಡೆಯುತ್ತಿದ್ದುದರಿಂದ ಕ್ರಮ-ಎಎಸ್‌ಜಿ: ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಹಾಯಕ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ಅವರು,‘ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ನಿಷೇಧಿಸಿದೆ. ರಾಜ್ಯ ಸರ್ಕಾರ ತನ್ನ ಗುಪ್ತಚರ ಮಾಹಿತಿ ಆಧರಿಸಿ, ಎಸ್‌ಡಿಪಿಐ ಕಚೇರಿಗಳಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಚಟುವಟಿಕೆಗಳನ್ನು ನಡೆಯುತ್ತಿದ್ದರಿಂದ ಅದರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿದೆ’ಎಂದು ಸಮರ್ಥಿಸಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಎಸ್‌ಡಿಪಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಕೇಂದ್ರ ಸರಕಾರ ಪಿಎಫ್‌ಐ ಮತ್ತದರ ಅಂಗ ಸಂಸ್ಥೆಗಳನ್ನು ಐದು ವರ್ಷದ ಅವಧಿಗೆ ನಿಷೇಧಿಸಿದ ಬಳಿಕದ ಬೆಳವಣಿಗೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿ ಸೀಲ್ ಮಾಡಿರುವ ಎಸ್‌ಡಿಪಿಐ ಕಚೇರಿ, ಸೊತ್ತುಗಳ ಸೀಲ್ ತೆರವಿಗೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಎಸ್‌ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

LEAVE A REPLY

Please enter your comment!
Please enter your name here