ಶಾಸಕ ಅಶೋಕ್ ರೈಯವರ ಉದ್ಯಮದ ಸಾರಥ್ಯ ವಹಿಸಿದ ಪತ್ನಿ ಸುಮಾ ಎ.ರೈ

0

ಪುತ್ತೂರು: ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈಯವರ ಉದ್ಯಮ, ಸಮಾಜಸೇವೆ ಮತ್ತು ಧಾರ್ಮಿಕ ಕ್ಷೇತ್ರಗಳ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದ ಅವರ ಪತ್ನಿ ಸುಮಾ ಎ. ರೈ ಇದೀಗ ಪೂರ್ಣ ಪ್ರಮಾಣದಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮನೆ ಮನೆಗೆ ತೆರಳಿ ಪತಿ ಅಶೋಕ್ ಕುಮಾರ್ ರೈ ಪರ ಮತಯಾಚಿಸಿ ಅವರ ಗೆಲುವಿನ ಪಾತ್ರವಾಗಿದ್ದ ಅಶೋಕ್ ಕುಮಾರ್ ರೈ ಅವರ ಪತ್ನಿ ಸುಮಾ ಎ. ರೈ ಈಗ ಪತಿ ಮುನ್ನಡೆಸುತ್ತಿದ್ದ ಉದ್ಯಮ ಕ್ಷೇತ್ರದ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ಉದ್ಯಮಿ ಅಶೋಕ್ ಕುಮಾರ್ ರೈ ಅವರ ಪರ ಸದ್ದಿಲ್ಲದೆ ಮನೆ ಭೇಟಿ ಮಾಡಿ ಮತಯಾಚಿಸಿದ್ದ ಸುಮಾ ಎ ರೈ ಅವರು ಈ ರಾಜಕಾರಣ ಎಲ್ಲ ಕ್ಷೇತ್ರದಂತಲ್ಲ, ಇದು ಭಿನ್ನ, ವಿಭಿನ್ನ ಅನ್ನುತ್ತಲೇ ಹೊಸ ಅನುಭವ ಸಿಕ್ಕಿತು ಎಂದು ಹೇಳುತ್ತಾರೆ. ರಾಜಕಾರಣದಲ್ಲಿ ಪತಿ, ನಾನೇನಿದ್ದರೂ ಉದ್ಯಮ ಕ್ಷೇತ್ರ. ಜತೆಗೆ ಮನೆ ಜವಾಬ್ದಾರಿ ನಿರ್ವಹಿಸುವೆ ಎನ್ನುವ ಸುಮಾ ರೈ ಪಾಲಿಟಿಕ್ಸ್ ನಿಂದ ಮರಳಿ ಉದ್ಯಮ ಕ್ಷೇತ್ರದತ್ತ ಹೆಜ್ಜೆ ಇರಿಸಿ ಕೆಲಸ ಪ್ರಾರಂಭಿಸಿದ್ದಾರೆ.


ಅಶೋಕ್ ಕುಮಾರ್ ರೈ ಅವರು ರಿಯಲ್ ಎಸ್ಟೇಟ್ ಉದ್ಯಮಿ. ಜತೆಗೆ ಬಡವರ ಸೇವೆಗೆಂದೇ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ರಚಿಸಿದ್ದಾರೆ. ಕಳೆದ 12 ವರ್ಷಗಳಿಂದ ಟ್ರಸ್ಟ್ ಮೂಲಕ ಸಾವಿರಾರು ಕುಟುಂಬಗಳಿಗೆ ನೆರವಾಗಿದ್ದಾರೆ. ಪತಿ ಅಶೋಕ್ ರೈ ಜತೆಗೆ ಸುಮಾ ಎ ರೈ ಅವರು ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಅರ್ಧದಷ್ಟು ಈ ಎರಡು ಕ್ಷೇತ್ರದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಪತಿ ಶಾಸಕರಾದ ಕಾರಣ ಇನ್ನು ಪೂರ್ಣ ಪ್ರಮಾಣದಲ್ಲಿ ಈ ಜವಾಬ್ದಾರಿ ಹೊರಲಿದ್ದಾರೆ.

700 ಮನೆ ಭೇಟಿ:
ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ ನಂತರ ಪತಿಯನ್ನು ಗೆಲ್ಲಿಸುವಲ್ಲಿ ತನ್ನ ಶ್ರಮ ಧಾರೆಯೆರೆಯಲು ಸುಮಾ ಮುಂದಡಿ ಇಟ್ಟರು. ನಾಮಪತ್ರ ಸಲ್ಲಿಕೆಯ ದಿನದಿಂದ ಮತ ಎಣಿಕೆಯ ತನಕ ಸುಮಾ ರೈ ಪೂರ್ಣ ಪ್ರಮಾಣದಲ್ಲಿ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. 10 ದಿನಗಳ ಕಾಲ ಪಕ್ಷದ ಮಹಿಳಾ ನಾಯಕಿಯರ ಜತೆಗೆ ಮತದಾರರ ಮನೆ ಸಂಪರ್ಕ ಮಾಡಿದರು. ಸುಡು ಬಿಸಿಲು ಲೆಕ್ಕಿಸದೆ ದಿನವೊಂದಕ್ಕೆ 70 ಮನೆಯಂತೆ ಒಟ್ಟು 700 ಮನೆಗಳನ್ನು ಭೇಟಿ ಮಾಡಿ ಪತಿ ಪರ ಮತ ನೀಡುವಂತೆ ಮನವೊಲಿಸಿದ್ದರು. ಉಳಿದ ದಿನಗಳಲ್ಲಿ ಪಕ್ಷದ ಚುನಾವಣಾ ಕಚೇರಿಯಲ್ಲಿ ಲೆಕ್ಕಪತ್ರ ನಿರ್ವಹಣೆ ಹೊಣೆ ಹೊತ್ತಿದ್ದರು.
ಮತ ಎಣಿಕೆ ಮುಗಿದು ಅಶೋಕ್ ರೈ ಗೆಲುವಿನ ಗೆರೆ ದಾಟಿದ್ದಾರೆ. ಹಾಗಾಗಿ ಸುಮಾ ಅವರ ಪಾಲಿಗೆ ಇನ್ನೊಂದು ದೊಡ್ಡ ಜವಾಬ್ದಾರಿ ಸಿಕ್ಕಿದೆ. ಈ ತನಕ ಉದ್ಯಮದ ಭಾಗವಾಗಿ ಪತಿಯೊಂದಿಗೆ ಭಾಗಿಯಾಗಿದ್ದವರು ಇನ್ನು ಮುಂದೆ ತಾನೇ ಆ ಕ್ಷೇತ್ರದ ಸಂಪೂರ್ಣ ಹೊಣೆ ಹೊರಲಿದ್ದಾರೆ. ಅಶೋಕ್ ರೈ ಅವರು ಶಾಸಕನಾಗಿ ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕಾರಣ ಉದ್ಯಮ ಮುನ್ನಡೆಸುವುದು ಸುಮಾ ರೈ ಅವರ ಜವಾಬ್ದಾರಿಯಾಗಿದೆ. ಮಂಗಳೂರು ಮತ್ತು ಕೋಡಿಂಬಾಡಿಯ ರೈ ಎಸ್ಟೇಟ್ ನಿವಾಸದಲ್ಲಿ ಪತಿ ಅಶೋಕ್ ರೈ, ಮಕ್ಕಳಾದ ರಿಧಿ ರೈ,‌ ಪ್ರಧಿಲ್ ರೈ ಮತ್ತು ಶೃಧಿ ರೈ ಜತೆ ಸುಮಾ ರೈ ಅವರು ಸಂಸಾರ ಸಾಗಿಸುತ್ತಿದ್ದಾರೆ. ಕೋಡಿಂಬಾಡಿಯ ರೈ ಎಸ್ಟೇಟಿಗೆ ಬಂದಾಗ ಅತ್ತೆ ಗಿರಿಜಾ ಎಸ್.ರೈ ಅವರೊಂದಿಗೆ ಸುಮಾ‌ ರೈ ಮನೆ ಕೆಲಸ‌ ನಿರ್ವಹಿಸುತ್ತಾರೆ.‌ ಜತೆಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ.‌
ಚುನಾವಣೆಯ ವೇಳೆ ಪತಿಯ ಗೆಲುವಿಗೆ ಪತ್ನಿಯಾಗಿ ನೀಡಬಹುದಾದ ಸಹಕಾರ ನೀಡಿದ್ದೇನೆ. ಮನೆ ಮನೆಗೆ ಭೇಟಿ ನೀಡಿದಾಗ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಪತಿಯ ದಾನಧರ್ಮದ ಬಗ್ಗೆ ಜನರಾಡಿದ ಒಳ್ಳೆಯ ಮಾತುಗಳನ್ನು ಕೇಳಿದ್ದೇನೆ. ಹೀಗಾಗಿ ಮುಂದಿನ ಐದು ವರ್ಷಗಳ ಕಾಲ ಪತಿಯ ಯಾವುದೇ ಕಾರ್ಯಕ್ಕೆ ಹಸ್ತಕ್ಷೇಪ ಮಾಡದೆ ಜನ ಸೇವೆಗೆ ಬೆಂಬಲ ನೀಡುತ್ತೇನೆ. ಪತಿ ಮುನ್ನಡೆಸುತ್ತಿದ್ದ ಉದ್ಯಮದ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸುತ್ತೇನೆ ಎನ್ನುತ್ತಾರೆ ಸುಮಾ ಅಶೋಕ್ ರೈ.

LEAVE A REPLY

Please enter your comment!
Please enter your name here