ವಿದ್ಯಾರ್ಥಿಯನ್ನು ಅತ್ಯುತ್ತಮ ವ್ಯಕ್ತಿಯಾಗಿ ರೂಪಿಸುವ ಜವಾಬ್ದಾರಿ ವಿದ್ಯಾಸಂಸ್ಥೆಗಳ ಮೇಲಿದೆ: ಮಹೇಶ್ ಕಜೆ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಮೇ 30ರಂದು ನಡೆಯಿತು.
ಭಾರತ ಸರಕಾರ ಜಾರಿ ನಿರ್ದೇಶನಾಲಯದ ವಿಶೇಷ ಸರಕಾರಿ ಅಭಿಯೋಜಕರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ಉಪಾಧ್ಯಕ್ಷರೂ ಆದ ನ್ಯಾಯವಾದಿ ಮಹೇಶ್ ಕಜೆ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಹಣಗಳಿಕೆಯ ಎಟಿಎಂಗಳಾಗಿ ರೂಪಿಸದೇ ಸಮಾಜಕ್ಕೆ ಅತ್ಯುತ್ತಮವಾದ ವ್ಯಕ್ತಿಗಳಾಗಿ ರೂಪಿಸುವ ಬಹುದೊಡ್ಡ ಜವಾಬ್ದಾರಿ ವಿದ್ಯಾಸಂಸ್ಥೆಗಳ ಮೇಲಿದೆ. ಆದ್ದರಿಂದ ಎಜುಕೇಷನ್ ನಮ್ಮೊಳಗೆ ಸತ್ಯದರ್ಶನ, ಅರಿವು ಮೂಡಿಸುವಂತಿರಬೇಕು. ಸಂಸ್ಕಾರ ಇಲ್ಲದ ವಿದ್ಯಾಭ್ಯಾಸದಿಂದ ಏನೂ ಪ್ರಯೋಜನವಿಲ್ಲ. ಕಲಿಕೆ ವಿಸ್ತಾರ, ಸಚ್ಚಾರಿತ್ರ್ಯತೆ, ಗುರಿ ಸಾಧನೆ, ಕೃತಜ್ಞತೆ, ಭಾವಶುದ್ಧತೆ, ಧನಾತ್ಮಕ ಚಿಂತನೆಯಿಂದ ಕೂಡಿರಬೇಕು ಎಂದರು. ಪಿಯುಸಿ ವಿದ್ಯಾರ್ಥಿಗಳ ಪಾಲಿನ ನಿರ್ಣಾಯಕ ಹಂತವಾಗಿದ್ದು ಜೀವನದ ಉದ್ದೇಶ, ಭವಿಷ್ಯ ನಿರ್ಧರಿಸುವ ಕಾಲವಾಗಿದೆ. ವಿದ್ಯಾಭ್ಯಾಸ ಎಂದಿಗೂ ಹೊರೆಯಲ್ಲ, ಅದನ್ನು ಪ್ರೀತಿಸಬೇಕು. ಆವಾಗ ಆಸಕ್ತಿ ಬೆಳೆಯುತ್ತದೆ. ವಿದ್ಯಾರ್ಥಿಗಳ ಮನಸ್ಸು ಮುಕ್ತವಾಗಿರಬೇಕು ಎಂದು ಮಹೇಶ್ ಕಜೆ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ಮಾತನಾಡಿ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳಿಗೆ 100 ವರ್ಷಗಳ ಇತಿಹಾಸವಿದೆ. 1919ರಲ್ಲಿ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಗೋಪುರದಲ್ಲಿ ಆರಂಭಗೊಂಡ ಸಂಸ್ಕೃತ ಪಾಠ ಶಾಲೆ ಬೆಳೆದು ಈಗ ಪದವಿ ತನಕದ ತರಗತಿಗಳು ನಡೆಯುತ್ತಿವೆ. ಸುಮಾರು 30 ಎಕ್ರೆ ಜಾಗದಲ್ಲಿ ಸಂಸ್ಥೆ ವ್ಯಾಪಿಸಿದ್ದು ಪ್ರಶಾಂತ ವಾತಾವರಣ, ವಿಶಾಲ ಆಟದ ಮೈದಾನ, ಗ್ರಂಥಾಲಯ, ಯೋಗ, ಮಧ್ಯಾಹ್ನ ಊಟ, ಬಸ್ಸಿನ ವ್ಯವಸ್ಥೆಯನ್ನೂ ಒಳಗೊಂಡಿದೆ. ಇಲ್ಲಿನ ಹಳೆವಿದ್ಯಾರ್ಥಿಗಳು ಪ್ರಪಂಚದೆಲ್ಲೆಡೆ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದು ಉನ್ನತ ಸಾಧನೆ ಮಾಡಿದ್ದಾರೆ. ಪ್ರಥಮ ಪಿಯುಸಿಗೆ ಯಾವುದೇ ಮಾನದಂಡ ಇಲ್ಲದೇ ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು ೨೪ ಗಂಟೆಯೂ ಕೆಲಸ ನಿರ್ವಹಿಸುವ ಉಪನ್ಯಾಸಕ ತಂಡವಿದೆ. ಇಲ್ಲಿ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಇಲ್ಲಿನ ಸವಲತ್ತು ಸದುಪಯೋಗಪಡೆದುಕೊಂಡು ಜೀವನ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ್ ಕೊಯಿಲ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾಧವ ಭಟ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಸತೀಶ್ ಭಟ್, ಉಪನ್ಯಾಸಕರಾದ ಚೇತನ್ ಮೊಗ್ರಾಲ್, ತಾರನಾಥ, ವಿಶ್ವೇಶ್ವರ, ಶ್ಯಾಮ್ ಪ್ರಸಾದ್, ಚೈತ್ರಾ, ಶ್ವೇತಾ, ಸ್ವಾತಿ, ತಿಲಕಾಕ್ಷ, ತನುಜಾ, ವಿನಿಲ್ ರೋಹನ್ ಡಿ.ಸೋಜ, ಲೋಹಿತ್, ಸುಧೀಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಶಾಲೆಯ ನಿಯಮಗಳ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕ ಚೇತನ್ ಮೊಗ್ರಾಲ್ ಅತಿಥಿ ಮಹೇಶ್ ಕಜೆ ಅವರ ಪರಿಚಯ ಮಾಡಿದರು. ಉಪನ್ಯಾಸಕರಾದ ಶಿವಪ್ರಸಾದ್ ಸ್ವಾಗತಿಸಿ, ಸುಬ್ರಹ್ಮಣ್ಯ ಕಾರಂತ ವಂದಿಸಿದರು. ಉಪನ್ಯಾಸಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಕಜೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.