ಸೌತಡ್ಕ: ಅರುಣ್‌ಕುಮಾರ್ ಪುತ್ತಿಲ ಭೇಟಿ, ರಂಗಪೂಜೆ, ಅಭಿಮಾನಿಗಳ ಜೊತೆ ಸಂವಾದ

0

ಹಿಂದುತ್ವ ಪ್ರತಿಪಾದನೆಗೆ ಶಕ್ತರಾಗಿದ್ದೇವೆ ಎಂಬ ಸಂದೇಶ ಜಿಲ್ಲೆಗೆ ರವಾನೆಯಾಗಿದೆ: ಅರುಣ್ ಕುಮಾರ್ ಪುತ್ತಿಲ

ನೆಲ್ಯಾಡಿ: ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗಮನ ಸೆಳೆದಿರುವ ಹಿಂದೂ ಸಂಘಟನೆಗಳ ಮುಖಂಡ ಅರುಣ್‌ಕುಮಾರ್ ಪುತ್ತಿಲ ಅವರು ಮೇ 28ರಂದು ಸಂಜೆ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿ ರಂಗಪೂಜೆ ನೆರವೇರಿಸಿ, ಕಾರ್ಯಕರ್ತರ ಜೊತೆ ಸಂವಾದ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅರುಣ್‌ಕುಮಾರ್ ಪುತ್ತಿಲ ಅವರು, ಬೆಳ್ತಂಗಡಿ ಕ್ಷೇತ್ರದಲ್ಲಿ ಹಿಂದುತ್ವಕ್ಕೆ ಜಯ ಸಿಕ್ಕಿದೆ. ಆದರೆ ಪುತ್ತೂರು ಕ್ಷೇತ್ರದಲ್ಲಿ ಹಿಂದುತ್ವಕ್ಕೆ ಜಯ ಸಿಗುತ್ತದೆ ಎಂಬ ಸಂದರ್ಭದಲ್ಲಿ ನೋವು ಕೊಡುವ ಕೆಲಸವನ್ನು ಸಂಘ, ಪಕ್ಷದ ಹಿರಿಯರೇ ಮಾಡಿದ್ದರು. ಪರಿಣಾಮ ಚುನಾವಣೆಯಲ್ಲಿ ಹಿಂದುತ್ವಕ್ಕೆ ಸೋಲಾಯಿತು. ಆದರೆ ಸೈದ್ಧಾಂತಿಕ ಜಯ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ಮತ್ತೆ ಮುಂದುವರಿಸುವ ಕೆಲಸ ಯಶಸ್ವಿಯಾಗಿ ನಡೆದಿದೆ. ಚುನಾವಣೆ ಸಂದರ್ಭ ಪುತ್ತೂರು ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗಳು ದ.ಕ.ಜಿಲ್ಲೆಯ ಜನರ ಕಣ್ಣು ತೆರೆಸುವ ಸನ್ನಿವೇಶ ನಿರ್ಮಾಣ ಮಾಡಿದೆ. ಜಿಲ್ಲೆಯ 2.50 ಲಕ್ಷ ಜನ ಪಕ್ಷೇತರ ಅಭ್ಯರ್ಥಿಯ ಪರ ನಿಂತಿದ್ದಾರೆ. ಜಿಲ್ಲೆಯೆಲ್ಲೆಡೆ 670 ಪ್ಲೆಕ್ಸ್ ಅಳವಡಿಸುವ ಮೂಲಕ ಮುಂದಿನ ಚುನಾವಣೆಯಲ್ಲೂ ಹಿಂದುತ್ವ ಪ್ರತಿಪಾದನೆಗೆ ಶಕ್ತರಾಗಿದ್ದೇವೆ ಎಂಬ ಸಂದೇಶ ರವಾನೆಯಾಗಿದೆ ಎಂದು ಹೇಳಿದರು.


ನಮ್ಮಲ್ಲಿ ಕೆಲವೊಂದು ಗೊಂದಲ ಇರಬಹುದು. ಆದರೆ ಕಾರ್ಯಕರ್ತರ ಆಧಾರಿತ ಪಕ್ಷ, ಸಂಘಟನೆ ನಮ್ಮ ಜೊತೆ ಇದೆ. ಸಿದ್ಧಾಂತ, ತತ್ವ ಅಳವಡಿಸಿಕೊಂಡು ಮತ್ತೆ ಒಂದೇ ಸರಿ ದಾರಿಯಲ್ಲಿ ಹೋಗಬೇಕಾದ ಸೂಕ್ಷ್ಮತೆ ಅರಿತುಕೊಂಡು ಹೆಜ್ಜೆ ಇಡಬೇಕಾಗಿದೆ. ಸರ್ವಾಧಿಕಾರಿ ಧೋರಣೆ, ಸ್ವಜನ ಪಕ್ಷಪಾತದಿಂದ ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು. ಇದರ ಪರಿಣಾಮವನ್ನು ಮುಂದಿನ 5 ವರ್ಷಗಳ ಕಾಲ ಎದುರಿಸಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಸಂಘಟಿತರಾಗಿ, ಧರ್ಮ ಆಧಾರಿತ ಬದುಕಿನ ಜೊತೆಗೆ ಹಿಂದುತ್ವ ಪ್ರತಿಪಾದಿಸುವ ಕಾರ್ಯಕರ್ತನಿಗೆ ನೋವಾಗದಂತೆ, ಹಿನ್ನಡೆಯಾಗದಂತೆ ನಡೆದುಕೊಳ್ಳಬೇಕಿದೆ ಎಂದರು.


ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಮಾತನಾಡಿ, ತೇಜೋವಧೆ ಮಾಡುವುದರಿಂದ ವ್ಯಕ್ತಿಯೊಬ್ಬ ಹೇಗೆ ಬೆಳೆಯುತ್ತಾರೆ ಎಂಬುದಕ್ಕೆ ಅರುಣ್‌ಕುಮಾರ್ ಪುತ್ತಿಲ ನಿದರ್ಶನ ಆಗಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ತೊಂದರೆಯಾದಾಗ ಅವರಿಗೆ, ಅವರ ಮನೆಯವರಿಗೆ ಧೈರ್ಯ ತುಂಬುವ ಕೆಲಸ ಅರುಣ್‌ಕುಮಾರ್ ಪುತ್ತಿಲ ಹಿಂದಿನಿಂದಲೂ ಮಾಡಿದ್ದಾರೆ. ಅವರು ಹಿಂದೂ ಸಂಘಟನೆಯ ಶಕ್ತಿಯಾಗಿದ್ದು ಇನ್ನಷ್ಟೂ ಎತ್ತರಕ್ಕೆ ಬೆಳೆಯಬೇಕೆಂದು ಹೇಳಿದರು. ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೇದಮೂರ್ತಿ ಬಾಲಕೃಷ್ಣ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಾಂತಪ್ಪ ಮಡಿವಾಳ, ಕೊಕ್ಕಡ ಗ್ರಾ.ಪಂ.ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ ಪುಡಿಕೆತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸುಬ್ರಹ್ಮಣ್ಯ ಶಗ್ರಿತ್ತಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗುರುಮೂರ್ತಿ ಶಗ್ರಿತ್ತಾಯ ವಂದಿಸಿದರು. ಕೊಕ್ಕಡ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಮತ್ತು ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಅರುಣ್‌ಕುಮಾರ್ ಪುತ್ತಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಅವರು ಕ್ಷೇತ್ರದ ಪರವಾಗಿ ಗೌರವಿಸಿದರು.

LEAVE A REPLY

Please enter your comment!
Please enter your name here