ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಿರಿಯ ಮೋಟಾರು ನಿರೀಕ್ಷಕ ಶ್ರೀಧರ ರಾವ್‌ರವರಿಗೆ ಬೀಳ್ಕೊಡುಗೆ

0

ಪುತ್ತೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ ಮೋಟಾರು ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಎನ್.ಶ್ರೀಧರ ರಾವ್‌ರವರಿಗೆ ಬೀಳ್ಕೊಡುಗೆ ಸಮಾರಂಭವು ಮೇ.31ರಂದು ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಮಾತನಾಡಿ, ಶ್ರೀಧರ ರಾವ್‌ರವರು ಪುತ್ತೂರಿನ ಮುತ್ತು, ಹೆಸರಿಗೆ ಸೊಬಗು ಎನ್ನುವ ರೀತಿಯಲ್ಲಿ ಸೇವೆ ಸಲ್ಲಿಸಿದವರು. ಸಿಂಗಲ್ ಮೆನ್ ಆರ್ಮಿ ಇದ್ದಂತೆ ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಕೆಲಸದ ಪರಿಣಿತರು. ಕಚೇರಿಯೇ ದೇಗುಲ ಎಂಬಂತೆ ಕೆಲಸ ನಿರ್ವಹಿಸಿ ಮೇಲಾಧಿಕಾರಿಗಳ ಪ್ರಸಂಶೆಗೆ ಒಳಗಾಗಿದ್ದಾರೆ ಎಂದ ಅವರು ಎಲ್ಲಾ ಕಚೇರಿಗಳಲ್ಲಿಯೂ ಸಿಬಂಧಿಗಳ ಕೊರತೆಯಿದ್ದು ಜನ ಇಲ್ಲ ಎಂಬ ಚಿಂತೆ ಬೇಡ. ಕೆಲಸದಲ್ಲಿ ಕಠಿಣ ಪರಿಶ್ರಮ ಬೇಕಾಗಿಲ್ಲ. ಬುದ್ದಿ ಶಕ್ತಿಯನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸಿಬಂದಿಗಳಿಗೆ ಕಿವಿ ಮಾತು ಹೇಳಿದರು.


ಬಂಟ್ವಾಳ ಕಚೇರಿಯ ಹಿರಿಯ ಮೋಟಾರು ನಿರೀಕ್ಷಕ ಚರಣ್ ಮಾತನಾಡಿ, ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ ಶ್ರೀಧರ ರಾವ್ ಎಲ್ಲರೊಂದಿಗೆ ಅಚ್ಚು ಮೆಚ್ಚಿನ ಅಧಿಕಾರಿಯಾಗಿ ಎಲ್ಲರ ಮನ ಗೆದ್ದವರಾಗಿದ್ದಾರೆ ಎಂದರು.


ನಿವೃತ್ತ ಹಿರಿಯ ಮೋಟಾರು ನಿರೀಕ್ಷಕ ನಾಗರಾಜ ಭಟ್ ಮಾತನಾಡಿ, ಮಿತಭಾಷಿ ಹಾಗೂ ಪರೋಪಕಾರಿಯಾಗಿದ್ದ ಶ್ರೀಧರ್‌ರವರು ಇಲಾಖೆಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿನಿವೃತ್ತಿ ಹೊಂದುತ್ತಿದ್ದಾರೆ ಎಂದರು.


ಸನ್ಮಾನ ಸ್ವೀಕರಿಸಿದ ಶ್ರೀಧರ ರಾವ್ ಮಾತನಾಡಿ, ತನ್ನ ಸುದೀರ್ಘ ವರ್ಷಗಳ ಸೇವಾವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಷತೆ ಸಲ್ಲಿಸುತ್ತಾ ಭಾವುಕರಾದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ಅಜಿಲ ಮಾತನಾಡಿ, ಕರ್ತವ್ಯ ನಿಷ್ಠೆಗೆ ಇನ್ನೊಂದು ಹೆಸರೇ ಶ್ರೀಧರ ರಾವ್. ತನ್ನ ನಿವೃತ್ತಿ ಕೊನೆಯ ತನಕವೂ ಯಾವುದೇ ಬೇಧ ಭಾವವಿಲ್ಲದೆ ಜನತೆಗೆ ಸೇವೆ ನೀಡಿದಾರೆ. ಯಾವುದೇ ದರ್ಪ, ಅಹಂಕಾರವಿಲ್ಲದ, ಸರಳ ವ್ಯಕ್ತಿತ್ವದ ವ್ಯಕ್ತಿಯಾಗಿ ಇಲಾಖೆಯಲ್ಲಿ ದಕ್ಷತೆ ಹಾಗೂ ಪ್ರಮಾಣಿಕ ಸೇವೆಯ ಮೂಲಕ ಜನಮನ್ನಣೆ ಗಳಿಸಿದ್ದಾರೆ ಎಂದರು.
ಸಿಬಂದಿ ಶೋಭಾ ಪ್ರಾರ್ಥಿಸಿದರು. ಪುರುಷೋತ್ತಮ ಸ್ವಾಗತಿಸಿದರು. ಅಧೀಕ್ಷಕ ದೀಪಕ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಥಮ ದರ್ಜೆ ಸಹಾಯಕರಾದ ನಾಗರಾಜ್,
ವಿವೇಕ್, ಗಿರೀಶ್ ಕುಮಾರ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ಅಧೀಕ್ಷಕ ಆಸ್ಕರ್ ಸಂತೋಷ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here