ಸವಣೂರು: ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಂತ ಫಿಲೋಮಿನಾ ಕಾಲೇಜು ದರ್ಬೆ, ಗ್ರಾಮ ಪಂಚಾಯತ್ ಸವಣೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ವಲಯ ಇದರ ವತಿಯಿಂದ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು
ಆಸ್ಪತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ ಜೂನ್ 4ರ ಭಾನುವಾರ 10:30 ರಿಂದ ಸವಣೂರಿನ ಸರಕಾರಿ ಶಾಲೆಯಲ್ಲಿ ಉಚಿತ ಅರೋಗ್ಯ ತಪಾಸಣೆ ಮತ್ತು ದಂತ ತಪಾಸಣಾ ಶಿಬಿರ ನಡೆಯಲಿರುವುದು.
ಈ ಶಿಬಿರದಲ್ಲಿ ದಂತ ತಪಾಸಣೆ, ಸಾಮಾನ್ಯ ರೋಗ ಹಾಗೂ ಗಂಟಲು ಕಿವಿ ಮೂಗು ತಪಾಸಣೆ, ಇ. ಸಿ.ಜಿ ಪರೀಕ್ಷೆ, ಮಧುಮೇಹ , ಸ್ತ್ರೀ ರೋಗ, ಕಣ್ಣಿನ ತಪಾಸಣೆ, ಚರ್ಮ ರೋಗ ಸೇರಿದಂತೆ ಮಕ್ಕಳ ವಿಭಾಗದ ತಪಾಸಣೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ಮಾಡಲಾಗುವುದು.
ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೇರೊ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ. ವಿ. ಶೆಟ್ಟಿ ವಹಿಸಲಿದ್ದಾರೆ.
ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಉಚಿತವಾಗಿದ್ದು ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿದ್ದು,
ರಕ್ತ ಮತ್ತು ಇನ್ನಿತರ ಪರೀಕ್ಷೆಗಳು/ ಎಕ್ಸರೇ, ಸ್ಕ್ಯಾನಿಂಗ್ ಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ದೊರಕಲಿದೆ.
ಸರಕಾರಿ ಪ್ರಾಯೋಜಿತ ಆರೋಗ್ಯ ವಿಮೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆಗೆ ಒಳಪಟ್ಟವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಇದ್ದು, ಒಳರೋಗಿಗಳಾಗಿ ದಾಖಲಾಗುವವರಿಗೆ ಉಚಿತ ಊಟ, ತಿಂಡಿ, ಬೆಡ್ ಒದಗಿಸಲಾಗುವುದು.
ಎ.ಜೆ. ದಂತ ವೈದ್ಯಕೀಯ ಆಸ್ಪತ್ರೆಯಲ್ಲಿ ಎಲ್ಲಾ ಆರಂಭಿಕ ಮೂಲಭೂತ ಚಿಕಿತ್ಸೆಗಳನ್ನು ಸಾರ್ವಜನಿಕ ದಂತ ಆರೋಗ್ಯ ವಿಭಾಗದಲ್ಲಿ ಮಾತ್ರ ಉಚಿತವಾಗಿ ಮಾಡಲಾಗುವುದು.
ಎಲ್ಲಾ ವಿಶೇಷ/ಹೆಚ್ಚಿನ ಚಿಕಿತ್ಸೆಗಳಿಗೆ ಶುಲ್ಕ ವಿಧಿಸಲಾಗುತ್ತದೆ ಮತ್ತು ಸಂಬಂಧಪಟ್ಟ ವಿಭಾಗಗಳಲ್ಲಿ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡುದಾರರಿಗೆ ಕರ್ನಾಟಕ ಸರ್ಕಾರ ದಂತಭಾಗ್ಯ ಯೋಜನೆಯಡಿಯಲ್ಲಿ ಉಚಿತವಾಗಿ ಕೃತಕ ದಂತಪಕ್ತಿ ಅಳವಡಿಸುವಿಕೆ ಸೌಲಭ್ಯ ಇಲ್ಲಿ ಲಭ್ಯವಿದೆ.
ಸಂತ ಫಿಲೋಮಿನಾ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಅಧ್ಯಾಪಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಿಂದ ಈ ಕಾರ್ಯಕ್ರಮ ನಡೆಯಲಿದೆ.