ಜನಮಾನಸದಲ್ಲಿ ಉಳಿಯುವಂತಹ ಕಾರ್ಯ ರೋಟರಿ ಮಾಡಿದೆ-ಸೀತಾರಾಮ್ ರೈ
ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಇದರ ಸದಸ್ಯರುಗಳಿಗೆ ಹಾಗೂ ಸದಸ್ಯರ ಕುಟುಂಬಿಕರಿಗೆ ಕ್ಲಬ್ ಹಿರಿಯ ಸದಸ್ಯ ಸೀತಾರಾಮ ಶೆಟ್ಟಿ ಹಾಗು ಶ್ರೀಮತಿ ಪೂರ್ಣಿಮಾ ಶೆಟ್ಟಿಮತ್ತು ಮನೆಯವರ ಆತಿಥ್ಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಮೇ 28 ರಂದು ಸೀತಾರಾಮ ಶೆಟ್ಟಿಯವರ ಸ್ವಗೃಹವಾದ ಬೆಳ್ಳಿಪ್ಪಾಡಿ ರಸ್ತೆಯ ಹೆಗ್ಡೆಹಿತ್ಲುವಿನಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ‘ಸಹಕಾರಿ ರತ್ನ’ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈಯವರು ಮಾತನಾಡಿ, ಪುತ್ತೂರಿನಲ್ಲಿ ಏಳು ರೋಟರಿ ಕ್ಲಬ್ ಗಳು ಸಮಾಜದ ಉನ್ನತಿಗಾಗಿ ಬಹಳಷ್ಟು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಕ್ಲಬ್ ಆಗಿರುವ ರೋಟರಿ ಪುತ್ತೂರು ಕ್ಲಬ್ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಸೆಂಟರ್ ಸೇರಿದಂತೆ ಜನಮಾನಸದಲ್ಲಿ ಉಳಿಯುವಂತಹ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಕುಟುಂಬ ಸಮ್ಮಿಲನ ಕಾರ್ಯಕ್ರಮವು ರೋಟರಿ ಸದಸ್ಯರನ್ನು ಮತ್ತಷ್ಟು ಹತ್ತಿರವಾಗಿಸುವಂತೆ ಮಾಡುತ್ತಿದೆ ಎಂದು ಹೇಳಿ ತನ್ನ 40ನೇ ವೈವಾಹಿಕ ಜೀವನದ ಸಂವತ್ಸರಗಳನ್ನು ಪೂರೈಸಿದ ಹಿರಿಯರಾದ ಸೀತಾರಾಮ್ ಶೆಟ್ಟಿ ದಂಪತಿಗಳಿಗೆ ಶುಭ ಹಾರೈಸಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಜೆ ರೈ ಮಾತನಾಡಿ, ರೋಟರಿ ಸಂಸ್ಥೆಯು ಸ್ವಹಿತ ಮೀರಿದ ಸೇವೆಯೊಂದಿಗೆ ಸಮಾಜಕ್ಕೆ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಸದಸ್ಯರುಗಳ ಸಮಾನ ಮನಸ್ಕ ಚಿಂತನೆಯೊಂದಿಗೆ ಮಿತೃತ್ವ, ಬಾಂಧವ್ಯ, ಗೆಳೆತನ ವೃದ್ಧಿಗೊಳ್ಳುವಂತಾಗಿದೆ. ರೋಟರಿಯ ವಿವಿಧ ಸೇವಾ ವಿಭಾಗಗಳಲ್ಲಿ ರೋಟರಿ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ರೋಟರಿಯ ಉನ್ನತಿಯಲ್ಲಿ ಸಹಕರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕವಿತ ದಿವಾಕರ್ ಪ್ರಾರ್ಥಿಸಿದರು.ಅಧ್ಯಕ್ಷತೆ ವಹಿಸಿದ್ದ ರೋಟರಿ ಪುತ್ತೂರು ಅಧ್ಯಕ್ಷ ಉಮಾನಾಥ್ ಪಿ.ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ತನ್ನ ಅಧ್ಯಕ್ಷಾವಧಿಯಲ್ಲಿ ಕ್ಲಬ್ ಪದಾಧಿಕಾರಿಗಳು ಹಾಗೂ ಸದಸ್ಯರು ಕ್ಲಬ್ ಬೆಳವಣಿಗೆಯಲ್ಲಿ ನನಗೆ ಬಹಳಷ್ಟು ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ. ಶೀಘ್ರದಲ್ಲಿ ಕ್ಲಬ್ ನ ಮಹತ್ವಾಕಾಂಕ್ಷಿ ಯೋಜನೆಯಾದ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್ ಕಣ್ಣಿನ ಆಸ್ಪತ್ರೆಯು ಲೋಕಾರ್ಪಣೆಗೊಳ್ಳಲಿದ್ದು ಸದಸ್ಯರ ಸಹಕಾರ ಮೆಚ್ಚುವಂತಹುದು ಎಂದರು.
ರೋಟರಿ ಪುತ್ತೂರು ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ. ವರದಿ ವಾಚಿಸಿದರು. ಸದಸ್ಯ ಗಂಗಾಧರ್ ರೈ ವಂದಿಸಿದರು. ಪಿಡಿಜಿ ಡಾ.ಭಾಸ್ಕರ್, ಡಾ.ಶ್ಯಾಮ್, ಡಾ.ಅಶೋಕ್ ಪಡಿವಾಳ್, ಡಾ.ಶ್ರೀಪತಿ ರಾವ್, ಡಾ.ಗೋಪಿನಾಥ್ ಪೈ, ನಿಯೋಜಿತ ಅಧ್ಯಕ್ಷ ಜೈರಾಜ್ ಭಂಡಾರಿ, ವಾಮನ್ ಪೈ ಸಹಿತ ಸದಸ್ಯರು ಉಪಸ್ಥಿತರಿದ್ದರು.
40ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೀತಾರಾಮ್ ಶೆಟ್ಟಿ ದಂಪತಿಗೆ ಸನ್ಮಾನ…
ರೋಟರಿ ಕ್ಲಬ್ ಪುತ್ತೂರು ಸದಸ್ಯ, ಕುಟುಂಬ ಸನ್ಮಿಲನದ ಆತಿಥ್ಯ ವಹಿಸಿಕೊಂಡಿರುವ ಹಿರಿಯರಾದ ಸೀತಾರಾಮ್ ಶೆಟ್ಟಿ ಹಾಗೂ ಪೂರ್ಣಿಮಾ ಸೀತಾರಾಮ್ ಶೆಟ್ಟಿ ದಂಪತಿ ತಮ್ಮ ದಾಂಪತ್ಯ ಜೀವನದ 40ನೇ ವಾರ್ಷಿಕೋತ್ಸವವನ್ನು ಆಚರಿಸುವ ಹಿನ್ನೆಲೆಯಲ್ಲಿ ಸೀತಾರಾಮ್ ಶೆಟ್ಟಿ ದಂಪತಿ ಸಂಭ್ರಮದ ಕೇಕ್ ಕತ್ತರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಸೀತಾರಾಮ್ ಶೆಟ್ಟಿ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದರು.