ಪುತ್ತೂರು: ನೆಲ್ಯಾಡಿ ಶ್ರೀ ಧರ್ಮಸ್ಥಳ ಆಡಳಿತಕ್ಕೊಳಪಟ್ಟ ಕಾಂಚನ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳನ್ನು ಒಡ್ಡೋಲಗದೊಂದಿಗೆ ಮೆರವಣಿಗೆಯ ಮೂಲಕ ಶಾಲೆಗೆ ಬರಮಾಡಿಕೊಂಡು, ಆರತಿ ಬೆಳಗಿಸಿ ತಿಲಕವಿಟ್ಟು, ಹೂವನ್ನು ನೀಡಿ, ಸಿಹಿಯೊಂದಿಗೆ ಸ್ವಾಗತಿಸಲಾಯಿತು.
ಶಾಲೆಯ ಹಿರಿಯ ವಿದ್ಯಾರ್ಥಿ ಶಿವಾನಂದ ಕಾರಂತ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ತಮ್ಮ ಶಾಲಾ ಅನುಭವಗಳೊಂದಿಗೆ ಮಕ್ಕಳಲ್ಲಿ ಚೈತನ್ಯ ತುಂಬಿದರು. ಈ ಸಂದರ್ಭದಲ್ಲಿ ಪಠ್ಯಪುಸ್ತಕ ವಿತರಣೆ ಹಾಗೂ ಹತ್ತನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಾದ ಪವನ್, ರಕ್ಷಿತಾ, ದಿವ್ಯ, ಪೂರ್ವಿಕ,ಸ್ವಾತಿ, ಹಿತಾಕ್ಷಿ ಮತ್ತು ಎನ್ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡ 8ನೇ ತರಗತಿ ಪ್ರೀತಿಕಾ ಇವರನ್ನು ಗೌರವಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ರಮೇಶ್ ಮಯ್ಯ ಮಾತನಾಡಿ ಶಾಲೆಯ ಮುಂದಿನ ಆಗುಹೋಗುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು. ಸಭೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೇಣುಗೋಪಾಲ್ ಕುಳ್ಳಾಜೆ ಹಾಗೂ ವಿಕ್ರಮ ಯುವಕ ಮಂಡಲದ ಉಪಾಧ್ಯಕ್ಷ ಸಚಿನ್ ಮುದ್ಯ, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿ, ಸುಜಾತಾ ಸ್ವಾಗತಿಸಿ, ವಿಜಯಲಕ್ಷ್ಮಿ ವಂದಿಸಿದರು.