ಕಾವು: ಮಾಡ್ನೂರು ಗ್ರಾಮದ ಪರನೀರು ನಿವಾಸಿ ಈಶ್ವರ ಗೌಡರವರ ಮನೆಗೆ ಸಿಡಿಲು ಬಡಿದು ಮನೆಗೋಡೆ ಬಿರುಕು ಬಿಟ್ಟು, ಮನೆಯ ವಿದ್ಯುತ್ ಮೀಟರ್ ಸುಟ್ಟು ಹೋದ ಘಟನೆ ಜೂ.10ರಂದು ಮಧ್ಯಾಹ್ನದ ವೇಳೆ ನಡೆದಿದೆ.
ಮಧ್ಯಾಹ್ನದ ವೇಳೆ ಸುರಿದ ಭಾರೀ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದ ಘಟನೆ ನಡೆದಿದೆ.
ಮನೆಯ ಹಿಂಭಾಗದ ಗೋಡೆಗೆ ಸಿಡಿಲು ಬಡಿದ ರಭಸಕ್ಕೆ ಮನೆಯ ಒಳಭಾಗದ ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿದೆ, ನೆಲಕ್ಕೆ ಹಾಕಲಾಗಿದ್ದ ಟೈಲ್ಸ್ ಎದ್ದು ಪುಡಿ ಪುಡಿಯಾಗಿದೆ, ಮನೆಯ ವಿದ್ಯುತ್ ಮೀಟರ್ ಸೇರಿದಂತೆ ವಯರಿಂಗ್ ಕನೆಕ್ಷನ್ ಸಂಪೂರ್ಣ ಹಾನಿಯಾಗಿದೆ. ಘಟನೆಯ ಸಂದರ್ಭದಲ್ಲಿ ಈಶ್ವರ ಗೌಡರವರ ಪತ್ನಿ ಚಿತ್ರಕಲಾರವರು ಒಬ್ಬರೇ ಮನೆಯಲ್ಲಿದ್ದರು.
ಮಾಜಿ ಶಾಸಕ ಮಠಂದೂರು ಭೇಟಿ :
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರುರವರು ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡು ತಹಶೀಲ್ದಾರ್ ರವರಿಗೆ ದೂರವಾಣಿ ಮೂಲಕ ಮಾತನಾಡಿ ಘಟನೆಯ ಬಗ್ಗೆ ಸ್ಥಳಪರಿಶೀಲನೆ ನಡೆಸಿ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಹರಿಪ್ರಸಾದ್ ಯಾದವ್, ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕ ಲೋಕೇಶ್ ಚಾಕೋಟೆ, ಅರಿಯಡ್ಕ ಗ್ರಾ.ಪಂ ಸದಸ್ಯೆ ಹೇಮಾವತಿ ಚಾಕೋಟೆಯವರು ಜತೆಗಿದ್ದರು.