ಉಪ್ಪಿನಂಗಡಿ: ನೂತನ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಉಪ್ಪಿನಂಗಡಿಯಲ್ಲಿ ಅಭಿನಂದನಾ ಸಮಾರಂಭ ಜೂ.10ರಂದು ನಿಗದಿಪಡಿಸಲಾಗಿತ್ತು. ಶಾಸಕರು ನಿಗದಿತ ಸಮಯಕ್ಕಿಂತ ಕಾರ್ಯಕ್ರಮಕ್ಕೆ ಬರುವುದು ಒಂದು ಗಂಟೆ ತಡವಾಗಿದ್ದರೂ, ಅದಕ್ಕೆ ಹೆಚ್ಚಿನ ಮಹತ್ವ ನೀಡದ ಶಾಸಕರು ಉಪ್ಪಿನಂಗಡಿ ಆಗಮಿಸದವರೇ ನೇರವಾಗಿ ನಟ್ಟಿಬೈಲ್ ಪರಿಸರಕ್ಕೆ ಆಗಮಿಸಿ ಅಲ್ಲಿ ಕೃತಕ ನೆರೆ ಬಾರದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಡೆಸುತ್ತಿದ್ದ ಚರಂಡಿ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ, ಸಲಹೆ ಸೂಚನೆ ನೀಡಿದರು. ಈ ಮೂಲಕ ಸನ್ಮಾನ ಪಡೆಯುವುದಕ್ಕಿಂತ ಮುಖ್ಯವಾಗಿ ತನಗೆ ಅಭಿವೃದ್ಧಿ ಮುಖ್ಯ ಎಂದು ತೋರಿಸಿಕೊಟ್ಟ ಶಾಸಕರ ನಡೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.
ಬಿ.ಸಿ.ರೋಡ್- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಗಳಿಂದಾಗಿ ೩-೪ ವರ್ಷದಿಂದ ಇಲ್ಲಿದ್ದ ಚರಂಡಿ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಮೊದಲಿದ್ದ ತೋಡು ಮುಚ್ಚಿ ಹೋಗಿತ್ತು. ಅದಕ್ಕೆ ಪರ್ಯಾಯವಾಗಿ ತೋಡಿನ ವ್ಯವಸ್ಥೆ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ತೋರಿದ್ದರು. ಇದರಿಂದಾಗಿ ಪ್ರತಿ ಮಳೆಗಾಲದಲ್ಲಿ ನಟ್ಟಿಬೈಲ್ ಪರಿಸರದಲ್ಲಿ ಕೃತಕ ನೆರೆಗೆ ಇದು ಕಾರಣವಾಗುತ್ತಿತ್ತಲ್ಲದೆ, ತಗ್ಗು ಪ್ರದೇಶದೆಲ್ಲೆಡೆ ಕೊಳಚೆ ನೀರು ನಿಂತು ಆರೋಗ್ಯದ ಸಮಸ್ಯೆಗೂ ಕಾರಣವಾಗುತ್ತಿತ್ತು. ಕಳೆದ ಬಾರಿ ಇಲ್ಲಿ ಕೃತಕ ನೆರೆ ಬಂದು ನೀರು ನಿಂತಿದ್ದರಿಂದ ಹಲವರ ಅಡಿಕೆ ಮರಗಳಿಗೆ ಸಂಪೂರ್ಣ ಹಾನಿಯಾಗಿತ್ತು. ಕಳೆದ ವಾರ ಉಪ್ಪಿನಂಗಡಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ನೆರೆ ಮುಂಜಾಗ್ರತಾ ಸಭೆಯಲ್ಲಿ ಈ ಬಗ್ಗೆ ಸಾರ್ವಜನಿಕ ದೂರುಗಳು ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ಗೆ ಮಳೆಗಾಲ ಆರಂಭವಾಗುವುದರೊಳಗೆ ಸಮರ್ಪಕ ತೋಡಿನ ವ್ಯವಸ್ಥೆ ಕಲ್ಪಿಸುವಂತೆ ಖಡಕ್ ಸೂಚನೆ ನೀಡಿದ್ದರು. ಆ ಬಳಿಕ ಹೆದ್ದಾರಿ ಇಲಾಖೆಯು ಸಮರೋಪಾದಿಯಲ್ಲಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ಇಲ್ಲಿ ಈಗಲೇ ಭಾಗಶಃ ಚರಂಡಿ ನಿರ್ಮಾಣ ಕಾರ್ಯ ನಡೆದಿದೆ. ಜೂ.೧೦ರಂದು ಅಭಿನಂದನಾ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭ ಮೊದಲು ಕಾಮಗಾರಿ ಸ್ಥಳಕ್ಕೆ ತೆರಳಿದ ಶಾಸಕರು ಕಾಮಗಾರಿ ವೀಕ್ಷಿಸಿದರಲ್ಲದೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ರನ್ನು ಕರೆಸಿ, ಸಲಹೆ- ಸೂಚನೆಗಳನ್ನು ನೀಡಿದರು. ಬಳಿಕ ಅಭಿನಂದನಾ ಕಾರ್ಯಕ್ರಮಕ್ಕೆ ತೆರಳಿದರು.
ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಪ್ರತಿ ಸಭೆಯಲ್ಲಿಯೂ ನನಗೆ ಹಾರ- ತುರಾಯಿಯ ಸನ್ಮಾನ ಬೇಡ. ನಿಮ್ಮ ಪ್ರೀತಿ ಸಾಕು. ಸನ್ಮಾನಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ನೀಡಿ ಎಂದು ಹೇಳುತ್ತಿದ್ದರು. ಇಂದು ಕೂಡಾ ಅವರು ಅಲ್ಲಿ ನೂರಾರು ಮಂದಿ ತಮ್ಮನ್ನು ಕಾಯುತ್ತಿದ್ದರೂ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ ನೀಡಿರುವ ಅವರ ನಡೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಅಬ್ದುಲ್ ರಹಿಮಾನ್ ಕೆ., ಯು.ಟಿ. ತೌಸೀಫ್ ಯು.ಟಿ., ಉದ್ಯಮಿ ರಾಜೇಶ್ ಶೆಟ್ಟಿ ಸಂಪ್ಯಾಡಿ, ಪ್ರಮುಖರಾದ ಶಬೀರ್ ಕೆಂಪಿ ಮತ್ತಿತರರು ಉಪಸ್ಥಿತರಿದ್ದರು.