ನೆಲ್ಯಾಡಿ; ಬಜತ್ತೂರು ಗ್ರಾಮದ ಹೊಸಗದ್ದೆ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಉಮೇಶ್ ಓಮಂದೂರು ಹಾಗೂ ಉಪಾಧ್ಯಕ್ಷೆಯಾಗಿ ವಸಂತಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾದರು.
ತೆರವಾಗಿದ್ದ 2 ಸದಸ್ಯ ಸ್ಥಾನಗಳಿಗೆ ರುಕ್ಮಯ್ಯ ಗೌಡ ಓಮಂದೂರು ಮತ್ತು ದೇವಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಹೊಸಗದ್ದೆ ಶಾಲಾ ಸಭಾಂಗಣದಲ್ಲಿ ಜೂ.10ರಂದು ನಡೆದ ಪೋಷಕರ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು. ಬಜತ್ತೂರು ಗ್ರಾಪಂ ಸದಸ್ಯ ಗಂಗಾಧರ್ ಗೌಡ ನೆಕ್ಕರಾಜೆ ಈ ಸಂದರ್ಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಶೇ.90ರಷ್ಟು ಪೋಷಕರ ನೆರವು ಬೇಕು. ಉತ್ತಮ ಶಿಕ್ಷಕರಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆತ್ತವರ ಪ್ರೋತ್ಸಾಹ ಅತೀ ಅಗತ್ಯವಾಗಿದೆ. ಸರ್ಕಾರದಿಂದ ಸೌಲಭ್ಯಗಳು ದೊರೆತರೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಹಿಸದಿದ್ದರೆ ಈ ಶಾಲೆಗಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಪ್ರತೀ ಪೋಷಕರಲ್ಲಿಯೂ ಸರ್ಕಾರಿ ಶಾಲೆ ನಮ್ಮ ಶಾಲೆ ಎಂಬ ಭಾವನೆ ಉಂಟಾದಾಗ ಸರ್ಕಾರಿ ಶಾಲೆಗಳು ಯಶಸ್ಸು ಕಾಣಬಹುದು. ಇಲ್ಲಿನ ಪ್ರತೀ ಚಟುವಟಿಕೆಯಲ್ಲೂ ಪೋಷಕರು ಸಹಕಾರ ನೀಡಬೇಕು. ಶಾಲಾಭಿವೃದ್ಧಿ ಸಮಿತಿ ಜತೆಗೆ ತಾವು ಕೈಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ಗಮನ ಅಧ್ಯಕ್ಷೆ ಪುಷ್ಪಾ ವಹಿಸಿದ್ದರು. ಶಾಲಾ ಶಿಕ್ಷಕಿ ವಿದ್ಯಾ ಕೆ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮೇಬಲ್ ಗ್ರೇಸಿ ಲಸ್ರಾದೋ ವಂದಿಸಿದರು. ಗೌರವ ಶಿಕ್ಷಕಿ ಪವಿತ್ರಾ ಸಹಕರಿಸಿದರು.