ರಾಮಕ್ಷತ್ರಿಯ ಸಂಘದ ವಾರ್ಷಿಕ ಸಮಾರಂಭ, ಸತ್ಯನಾರಾಯಣ ಪೂಜೆ

0

ಪುತ್ತೂರು: ರಾಮಕ್ಷತ್ರಿಯ ಸೇವಾ ಸಂಘ, ರಾಮಕ್ಷತ್ರಿಯ ಮಹಿಳಾ ವೃಂದ ಹಾಗೂ ಯುವ ವೃಂದದ ವಾರ್ಷಿಕ ಸಮಾರಂಭವು ಜೂ.11ರಂದು ತೆಂಕಿಲ ವಿವೇಕ ನಗರದ ಸ್ವಾಮಿ ಕಲಾ ಮಂದಿರದಲ್ಲಿ ನೆರವೇರಿತು.


ವಾರ್ಷಿಕ ಸಂಭ್ರಮದ ಅಂಗವಾಗಿ ಪೂರ್ವಾಹ್ನ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮಗಳು ನೆರವೇರಿತು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಲ್.ಐ.ಸಿಯ ಶಾಖಾ ವ್ಯವಸ್ಥಾಪಕ ಯಜ್ಞೇಶ್ ಚಂದ್ರಗಿರಿ ಮಾತನಾಡಿ, ಪಾಶ್ಚಾತ್ಯಕರಣದ ಪರಿಣಾಮವಾಗಿ ನಮ್ಮ ಪುರಾತನ ಸಂಸ್ಕೃತಿ, ಆಚರಣೆಗಳು ಕ್ಷೀಣಿಸುತ್ತಿದೆ. ಸೀರಿಯಲ್ ಸಂಸ್ಕೃತಿಯಿಂದಾಗಿ ಭಜನೆ ಮಾಯವಾಗಿದೆ. ಇದಕ್ಕಾಗಿ ಸಮಾಜದ ಕಾರ್ಯಕ್ರಮಗಳಲ್ಲಿ ಯುವಕರನ್ನು ಅಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮುಖಾಂತರ ಪುರಾತನ ಸಂಸ್ಕೃತಿ, ಆಚರಣೆಗಳನ್ನು ಮುಂದಿನ ತಲೆ ಮಾರಿಗೆ ವರ್ಗಾಯಿಸುವ ಕೆಲಸವಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಪೊಲೀಸ್ ನಿರೀಕ್ಷಕ ಸವಿತ್ರ ತೇಜ ಮಾತನಾಡಿ, ತನ್ನನ್ನು ತಾನು ಅರ್ಥಮಾಡಿಕೊಂಡವರು ಜಗತ್ತಿನಲ್ಲಿ ಏನನ್ನೂ ಸಾಧಿಸಬಹುದು. 4 ವರ್ಣಗಳಲ್ಲಿ ಕ್ಷತ್ರಿಯ ಪ್ರಮುಖವಾದುದು. ಧರ್ಮದ ರಕ್ಷಣೆಯೇ ಕ್ಷತ್ರೀಯ ಸಮಾಜದಿಂದ ಆಗಿದೆ. ಕ್ಷತ್ರಿಯರು ಇತಿಹಾಸದಲ್ಲಿಯೇ ಪ್ರಮುಖ ಸ್ಥಾನ ಪಡೆದವರಾಗಿದ್ದು, ಪ್ರಸ್ತುತ ದಿನಗಳಲ್ಲಿಯೂ ಪರಂಪರೆ ಮರುಕಳಿಸಬೇಕು. ಸಮಾಜದ ಬಾಂಧವರನ್ನು ಒಗ್ಗೂಡಿಸಿ, ಸಂಘಟನೆಯನ್ನು ಬಲಪಡಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದರು.
ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಕೆಮ್ಮಿಂಜೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತೆ ಚೈತ್ರ ಕುಂದಾಪುರ, ರಾಮಕ್ಷತ್ರಿಯ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಪ್ರಮೋದ್ ನಾಯಕ್ ಬೆಳ್ತಂಗಡಿ, ರಾಮ ಕ್ಷತ್ರಿಯ ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಕೆಮ್ಮಿಂಜೆ, ಕಾರ್ಯದರ್ಶಿ ಅರುಣ್ ಕುಮಾರ್ ಕ್ಯಾಂಪ್ಕೋ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ನವೀನ್, ಕಾರ್ಯದರ್ಶಿ ಸೌಮ್ಯ ಅರುಣ್ ಹಾರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಮುಖ್ಯ ಮಂತ್ರಿ ಚಿನ್ನದ ಪದಕ ಪುರಸ್ಕೃತ ಸಹಾಯಕ ಆರಕ್ಷಕ ಉಪನಿರೀಕ್ಷಕ ಸಂತೋಷ್, ವೈದ್ಯಕೀಯ ಪದವೀಧರ ಸಂಕೇತ್ ವಿ.ಕಾವೇರಿಕಟ್ಟೆಯವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಾರ್ಷಿಕ ಸಂಭ್ರಮಾಚರಣೆಯ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಸ್ವರ್ಣಾ ಹಾಗೂ ವರ್ಷಾ ಪ್ರಾರ್ಥಿಸಿದರು. ಪ್ರೇಮಲತಾ ಉದಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ವೃಂದದ ಕಾರ್ತಿಕ್ ವರದಿ ವಾಚಿಸಿದರು. ನವೀನ್ ಕೊಂಬೆಟ್ಟು, ಅರುಣ್ ಆಲಂಕಾರು, ನಿತೀನ್ ಕುಮಾರ್, ರಾಜೇಶ್ ಕಾವೇರಿಕಟ್ಟೆ, ವಿಜಯಲಕ್ಷ್ಮಿ ಅತ್ತಾಳ, ರಾಧಾಕೃಷ್ಣ ಕೊಂಬೆಟ್ಟು, ಸೀಮಾ ರೋಷನ್, ಸುಬ್ರಹ್ಮಣ್ಯ ಕೆಮ್ಮಿಂಜೆ ಅತಿಥಿಗಳನ್ನು ಶಾಲು ಹಾಕಿ, ಹೂಗುಚ್ಚ ನೀಡಿ ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ ಸಮಾರೋಪ ಸಮಾರಂಭ ನೆರವೇರಿತು.

LEAVE A REPLY

Please enter your comment!
Please enter your name here