ನೆಲ್ಯಾಡಿ: ಯುವಶಕ್ತಿ ಗೆಳೆಯರ ಬಳಗ ಮುರಿಯೇಲು ಮತ್ತು ಶಾಂತಿನಗರ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ರೂ.27ಸಾವಿರಕ್ಕಿಂತಲೂ ಅಧಿಕ ಮೊತ್ತದ ನೋಟ್ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು.
ಶಾಲಾ ನಿಕಟಪೂರ್ವ ಅಧ್ಯಕ್ಷ ಮೋನಪ್ಪ ಪೂಜಾರಿ ಡೆಂಬಲೆ ಅವರು ಉದ್ಘಾಟಿಸಿ ಮಾತನಾಡಿ, ಶಾಂತಿನಗರ ಶಾಲೆಯು ಗುಣಾತ್ಮಕ ಶಿಕ್ಷಣದ ಮೂಲಕ ಊರ ಪರವೂರ ವಿದ್ಯಾಭಿಮಾನಿಗಳ ಗಮನ ಸೆಳೆದಿದೆ. ಖಾಸಗಿ ಶಾಲೆಗಳಿಗಿಂತ ಗುಣಾತ್ಮಕ ಶಿಕ್ಷಣದಲ್ಲಿ ಮೇಲ್ಮಟ್ಟದಲ್ಲಿದ್ದು ಈ ಶಾಲೆಯಿಂದ 7ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೇ ಮುಂದಿನ ಶಾಲೆಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತಿರುವುದು ಹಾಗೂ ಇಲ್ಲಿನ ಪ್ರತೀ ವಿದ್ಯಾರ್ಥಿಗಳು ಇಂಗ್ಲಿಷ್ ಸಂವಹನ ನಡೆಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷರಾದ ಪುರುಷೋತ್ತಮ ಪೂಜಾರಿಯವರು ಮಾತನಾಡಿ, 2023-24ನೇ ಸಾಲಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾಗಿ ಸಹಪಠ್ಯ ಚಟುವಟಿಕೆಗಳಾದ ಯಕ್ಷಗಾನ, ಭರತನಾಟ್ಯ ಹಾಗೂ ಇತರೇ ವಿಷಯಗಳಿಗೆ ವಿಶೇಷ ಶಿಕ್ಷಕರನ್ನು ಕರೆಸಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಶಕ್ತಿ ಗೆಳೆಯರ ಬಳಗದ ಅಧ್ಯಕ್ಷ ಪವನ್ ರೈ ಕುದ್ಮಾರುಗುತ್ತು ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಮೀನಾಕ್ಷಿ, ಯುವಶಕ್ತಿ ಗೆಳೆಯರ ಬಳಗದ ಕಾರ್ಯದರ್ಶಿ ಸಂದೇಶ್, ದಾನಿ ಶಿವಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಮಂಜುನಾಥ ಮಣಕವಾಡ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವೀಕ್ಷಿತಾ ವಂದಿಸಿದರು. ಸಹಶಿಕ್ಷಕಿಯರಾದ ಪ್ರಮೀಳಾ, ತಾರಾ ಸಹಕರಿಸಿದರು.