ಪುತ್ತೂರು: ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡು ಚರಂಡಿಗೆ ಬಿದ್ದಿದ್ದು, ವ್ಯಕ್ತಿಯನ್ನು ಸಾರ್ವಜನಿಕರ ಮಾಹಿತಿಯಂತೆ ಮರಳಿ ಆಸ್ಪತ್ರೆಗೆ ಸೇರಿಸಿದ ಘಟನೆ ನಡೆದಿದೆ.
ಚರಂಡಿಯಲ್ಲಿ ವ್ಯಕ್ತಿಯೋರ್ವ ಬಿದ್ದಿರುವ ಬಗ್ಗೆ ಸ್ಥಳೀಯ ಸಾವರ್ಜನಿಕರ ಮಾಹಿತಿಯಂತೆ ಅದೇ ದಾರಿಯಲ್ಲಿ ಬರುತ್ತಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ ದೀಪಕ್ ರೈ ಮತ್ತು ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ವ್ಯಕ್ತಿಯನ್ನು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದ್ದಾರೆ.
ಅನಾರೋಗ್ಯದಿಂದ ಚೇತರಿಕೆಗೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ವ್ಯಕ್ತಿ ಜೂ.13 ಬೆಳಿಗ್ಗೆ ರಸ್ತೆ ಬದಿ ಕುಸಿದು ಬಿದ್ದಿದ್ದರು. ಈ ಕುರಿತು ಮಾಹಿತಿ ಪಡೆದ ಸ್ಥಳೀಯರು ಅವರಿಗೆ ಉಪಚರಿಸಿದ್ದಾರೆ. ಆದರೆ ವ್ಯಕ್ತಿ ಮತ್ತೆ ಅಸ್ವಸ್ಥಗೊಂಡು ಚರಂಡಿಯಲ್ಲಿ ಬಿದ್ದಿದ್ದರು. ಈ ಕುರಿತು ಮಾಹಿತಿ ಪಡೆದ ದಲಿತ್ ಸೇವಾ ಸಮಿತಿ ಜಿಲ್ಲಾ ಮುಖಂಡ ಸೇಶಪ್ಪ ಬೆದ್ರಕಾಡು ಅವರು ಅಸ್ವಸ್ಥ ವ್ಯಕ್ತಿಗೆ ಮೂರ್ಚೆರೋಗ ಇರುವ ಸಾಧ್ಯತೆ ಇದೆ ಎಂದು ಕೀ ಗೊಂಚಲನ್ನು ನೀಡಿದ್ದರು. ಇದೇ ಸಂದರ್ಭದಲ್ಲಿ ತಾಲೂಕು ಅರೋಗ್ಯಾಧಿಕಾರಿ ಡಾ ದೀಪಕ್ ರೈ ಮತ್ತು ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಆಗಮಿಸಿ ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವಲ್ಲಿ ರಿಕ್ಷಾ ಚಾಲಕರ ಜೊತೆ ಸಹಕರಿಸಿದರು.