ಪುತ್ತೂರು: ಹಿಂದು ರಾಷ್ಟ್ರ ಸ್ಥಾಪನೆಯ ಉದ್ದೇಶದೊಂದಿಗೆ ಪ್ರತಿ ವರ್ಷದಂತೆ ಜೂ.16ರಿಂದ 22ರವರೆಗೆ ಗೋವಾದ ಫೋಂಡಾ ನಗರದ ಶ್ರೀ ರಾಮನಾಥ ದೇವಸ್ಥಾನದ ಆವರಣದಲ್ಲಿ ‘11ನೇ ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನ’ (ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ) ಆಯೋಜಿಸಲಾಗಿದೆ. ಪುತ್ತೂರಿನಿಂದ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಕೆಲವು ಪ್ರಮುಖರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಬಗ್ಗೆ ವಿಶೇಷ ತಜ್ಞರ ಚರ್ಚಾಕೂಟ, ಗೌರವಾನ್ವಿತರ ಸಂದರ್ಶನ ಇರಲಿದೆ. ದೇವಸ್ಥಾನ ಸಂಸ್ಕೃತಿಯ ರಕ್ಷಣೆ, ಕಾಶ್ಮೀರಿ ಹಿಂದುಗಳ ಪುನರ್ವಸತಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದುಗಳ ಮೇಲಿನ ದೌರ್ಜನ್ಯ ಸೇರಿ ವಿವಿಧ ವಿಷಯಗಳ ಜತೆಗೆ ಹಿಂದು ರಾಷ್ಟ್ರದ ಅಡಿಪಾಯಕ್ಕಾಗಿ ಅವಶ್ಯಕ ವಿಷಯಗಳ ಮೇಲೆ ಚರ್ಚೆ, ವಿಚಾರ ವಿನಿಮಯ ಆಗಲಿದೆ. ಈ ಅಧಿವೇಶನಕ್ಕೆ ಅಮೇರಿಕಾ, ಬಾಂಗ್ಲಾದೇಶ, ನೇಪಾಳ, ಇಂಗ್ಲೆಂಡ್, ಸಿಂಗಾಪುರ ದೇಶಗಳ ಹಿಂದೂ ಮುಖಂಡರು ಮತ್ತು ಭಾರತದಲ್ಲಿನ 28 ರಾಜ್ಯಗಳಲ್ಲಿನ 350ಕ್ಕೂ ಹೆಚ್ಚಿನ ಹಿಂದು ಸಂಘಟನೆಗಳ 15೦೦ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳನ್ನು ಆಮಂತ್ರಿಸಲಾಗಿದೆ. ಪುತ್ತೂರಿನಿಂದ ಅರುಣ್ ಪುತ್ತಿಲ ಸೇರಿ ಸುಮಾರು 250ಕ್ಕೂ ಅಧಿಕ ಹಿಂದುತ್ವವಾದಿ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.