ಧಾವಂತದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗದಿರಿ-ಶಿವಾನಂದ ತಗಡೂರು
ಆರಂಭಿಕ ಚಿಕಿತ್ಸೆ ಮೂಲಕ ಗುಣಪಡಿಸಬಹುದು- ಡಾ.ಬದ್ರುದ್ದೀನ್
ಪುತ್ತೂರು:ಇವತ್ತಿನ ಸಂದರ್ಭಕ್ಕೆ, ದಶಕಗಳ ಹಿಂದಿನಂತೆ ನಾಳೆ ನಾಡಿದ್ದು ವರದಿ ಮಾಡಿದರೆ ಆಗುವುದಿಲ್ಲ.ಇವತ್ತು ಈಗಿನ ಘಟನೆಯನ್ನೇ ತಕ್ಷಣಕ್ಕೆ ವರದಿ ಮಾಡಬೇಕು.ಅದರಲ್ಲೂ ಮುಂದೆ ನಡೆಯುವ ಘಟನೆಯನ್ನು ಗ್ರಹಿಸಿಕೊಳ್ಳುವ ಹಂತಕ್ಕೆ ಈಗಿನ ಬೆಳವಣಿಗೆಯಾಗಿದೆ.ಇವೆಲ್ಲ ಧಾವಂತಗಳ ಬದುಕು.ಇದರಿಂದಾಗಿ ಅತಿ ಹೆಚ್ಚಿನ ಪತ್ರಕರ್ತರಿಗೆ ಬಿಪಿ, ಶುಗರ್ ಇದೆ.ಈ ನಿಟ್ಟಿನಲ್ಲಿ ಧಾವಂತದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗದಿರಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ಚಿಕಿತ್ಸಾ ಘಟಕ ಪುತ್ತೂರು ಸಹಯೋಗದೊಂದಿಗೆ ಜೂ.13ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆದ ‘ಕ್ಷಯಮುಕ್ತ ಭಾರತ’ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.ಪದೇ ಪದೇ ರಾಜ್ಯದಲ್ಲಿ ಅತೀ ಹೆಚ್ಚು ಪ್ರಚಾರ ಪಡೆದ ಚುನಾವಣೆಯಾಗಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆಯನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಡೆಸಲು ಎಲ್ಲರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದ ತಗಡೂರು, ಸಮಾಜದಲ್ಲಿ ಆರೋಗ್ಯಕರ ಜೀವನದಲ್ಲಿ ನಮ್ಮ ದೇಹವನ್ನು ಶುದ್ದಿಯಾಗಿಟ್ಟುಕೊಂಡು ನಮ್ಮ ದೇಹಕ್ಕೆ ಏನು ಬೇಕು ಬೇಡ ಎಂದು ವಿವೇಚನೆಯಿಂದ ವ್ಯವಸ್ಥಿತವಾಗಿ ನೋಡಿಕೊಳ್ಳಬೇಕು.ಬ್ರೇಕಿಂಗ್ ನ್ಯೂಸ್‌ನ ಲೋಕದಲ್ಲಿ ನಾನೇ ಮೊದಲು ಎನ್ನುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಸಂದರ್ಭದಲ್ಲಿ ಒತ್ತಡಗಳ ನಡುವೆ ಅನೇಕ ಸಂದರ್ಭದಲ್ಲಿ ಪತ್ರಕರ್ತರು ತೊಂದರೆಗೆ ಒಳಗಾಗುತ್ತಾರೆ.ಈ ನಿಟ್ಟಿನಲ್ಲಿ ಪತ್ರಕರ್ತರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಆರಂಭಿಕ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು: ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಅವರು ಕ್ಷಯರೋಗ ಬರುವ ಲಕ್ಷಣಗಳು ಮತ್ತು ಪತ್ತೆ ಹಚ್ಚುವಿಕೆ ಹಾಗು ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.ಕ್ಷಯರೋಗವು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಲ್ಲದೆ ದೇಹದ ಇತರ ಪ್ರಮುಖ ಅಂಗಾಂಗಗಳಿಗೂ ಹಾನಿಯನ್ನುಂಟು ಮಾಡುತ್ತದೆ.ಆದರೂ ಆರಂಭಿಕ ಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದು.ಅಲ್ಲದೆ ಸೂಕ್ತ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದರು.ಕ್ಷಯರೋಗ ಅಥವಾ ಟಿಬಿ, ಬ್ಯಾಕ್ಟೀರಿಯಾಗಳ ಕಾರಣದಿಂದ ಉಂಟಾಗುತ್ತದೆ.ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡದೇ ಇದ್ದರೆ ಮಾರಕವಾಗಿ ಪರಿಣಮಿಸಬಹುದು.ಸೋಂಕು ಇರುವ ವ್ಯಕ್ತಿಯು ಕೆಮ್ಮುವುದರಿಂದ ಅಥವಾ ಸೀನುವುದರಿಂದ ಕ್ಷಯರೋಗ ಹರಡುತ್ತದೆ.ಸೋಂಕಿಗೆ ಒಳಗಾದ ಹೆಚ್ಚಿನವರಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಗೋಚರವಾಗುವುದಿಲ್ಲ, ಜೊತೆಗೆ ಇದಕ್ಕೆ ಚಿಕಿತ್ಸೆಯ ಅಗತ್ಯವೂ ಇರುವುದಿಲ್ಲ.ಈ ಸೋಂಕು ಇರುವವರಲ್ಲಿ ಕಫ, ಕೆಮ್ಮು, ತೂಕ ಇಳಿಕೆ, ರಾತ್ರಿ ವೇಳೆ ಬೆವರುವುದು ಹಾಗೂ ಜ್ವರದಂತಹ ಲಕ್ಷಣಗಳು ಕಾಣಿಸಬಹುದು.ಭಾರತದಲ್ಲಿ ಶೇ.28ರಷ್ಟು ಕ್ಷಯರೋಗಿಗಳಿದ್ದಾರೆ.ಸದ್ಯ ದೇಶದಲ್ಲಿ ಎಚ್ಎ3ನ್2 ಇನ್ಲುಯೆನ್ಸ್ ಹಾಗೂ ಕೋವಿಡ್ ಪರಿಣಾಮದಿಂದಾಗಿ ಕ್ಷಯರೋಗಿಗಳ ಸಂಖ್ಯೆ ಜಾಸ್ತಿ ಆಗಿದೆ.ಟಿಬಿ ಕೇವಲ ಶ್ವಾಸಕೋಶ ಮಾತ್ರವಲ್ಲ, ಕೀಲು ಹಾನಿ, ಯಕ್ರತ್ತು, ಮೂತ್ರಪಿಂಡದ ಸಮಸ್ಯೆ ಹಾಗೂ ಮೂಳೆ ಸೋಂಕು ಇಂತಹ ತೊಂದರೆಗಳಿಗೂ ಕಾರಣವಾಗಬಹುದು.ಆದ್ದರಿಂದ ಆರಂಭಿಕ ಹಂತದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ ಎಂದು ಹೇಳಿದ ಡಾ.ಬದ್ರುದ್ದೀನ್, ರಕ್ತಪರೀಕ್ಷೆ, ಹೃದಯ ಭಾಗದ ಎಕ್ಸ್-ರೇ ಹಾಗೂ ಸಿಟಿ ಸ್ಕ್ಯಾನ್ ಮೂಲಕ ಈ ರೋಗವನ್ನು ಖಚಿತಪಡಿಸಿಕೊಳ್ಳಬಹುದು ಎಂದರು.
ಕ್ಷಯರೋಗದ ಚಿಕಿತ್ಸೆಯು ನೀವು ಯಾವ ಹಂತದಲ್ಲಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿದೆ.ಇದರ ಚಿಕಿತ್ಸಾ ಅವಧಿಯು ಎರಡು ತಿಂಗಳಿಂದ 2 ವರ್ಷಗಳವರೆಗೆ ಇದೆ ಎಂದ ಅವರು, ನಮ್ಮ ಊರನ್ನು ಕ್ಷಯಮುಕ್ತರನ್ನಾಗಿಸೋಣ ಎಂದರು.
ಕ್ಷಯ ರೋಗ ನಿಯಂತ್ರಣಾಧಿಕಾರಿ ಕಚೇರಿ ಸಂಯೋಜಕ ಮನೋಜ್ ಅವರು ಮಾತನಾಡಿ ಕ್ಷಯರೋಗ ಪತ್ತೆ ಗೌಪ್ಯತೆಗಾಗಿ ಕೆಲವರು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವವರಿದ್ದಾರೆ. ಆದರೆ ಪ್ರತಿ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳು ಕ್ಷಯರೋಗದ ಕುರಿತು ವರದಿ ನೀಡಬೇಕು.ಅದೇ ರೀತಿ ಈ ಕುರಿತು ಜಾಗೃತಿ ಮೂಡಿಸಲು ಶಾಲಾ ಕಾಲೇಜು ಮತ್ತು ಸಂಘ ಸಂಸ್ಥೆಗಳಲ್ಲಿ ಅರಿವು ಕಾರ್ಯಕ್ರಮ ನೀಡಲಾಗುತ್ತದೆ ಎಂದರು.
ಪುತ್ತೂರು ಆಸ್ಪತ್ರೆಯ ಕ್ಷಯರೋಗ ನಿಯಂತ್ರಣಾಧಿಕಾರಿ ನಟೇಶ್ ಅವರು ಮಾಹಿತಿ ನೀಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.
ಪುತ್ತೂರಿನಲ್ಲಿ 112 ಕೇಸ್
ಕ್ಷಯರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತದೆ.ಇವತ್ತು ಹಂತ ಹಂತವಾಗಿ ನಿಯಂತ್ರಣದಲ್ಲಿದೆ.ಕೇಂದ್ರ ಸರಕಾರ 2025ಕ್ಕೆ ಕ್ಷಯರೋಗ ಮುಕ್ತ ಭಾರತದ ಗುರಿಯನ್ನು ಇಟ್ಟುಕೊಂಡಿದೆ.ಡಬ್ಲ್ಯೂಎಚ್‌ಒ ಪ್ರಕಾರ 2030ಕ್ಕೆ ಕ್ಷಯರೋಗ ಸಂಪೂರ್ಣ ನಿರ್ಮೂಲನೆ ಆಗಬೇಕೆಂಬ ನಿರ್ದೇಶನವಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2008ರಲ್ಲಿ 3,256 ಕೇಸ್ ಇತ್ತು, 2019ರಲ್ಲಿ 3419, 2020ರಲ್ಲಿ 2472, 2020ರಲ್ಲಿ 20438, ಕೋವಿಡ್‌ನಿಂದಾಗಿ 2022ರಲ್ಲಿ 2964ಕ್ಕೆ ಏರಿಕೆಯಾಗಿತ್ತು.ಇದೀಗ 2023ರ ಜೂನ್ 12ರ ವರದಿಯಂತೆ 1280 ಕೇಸ್ ಇದೆ. ಪುತ್ತೂರಿನಲ್ಲಿ 112 ಕೇಸ್ ಇದೆ-
ಡಾ.ಬದ್ರುದ್ದೀನ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ