ಸರಕಾರಿ ಪ್ರ.ದರ್ಜೆ ಮಹಿಳಾ ಕಾಲೇಜಿನಲ್ಲಿ ರೇಂಜರ್ಸ್ ಸ್ವಯಂಸೇವಕಿಯರಿಗೆ ಮಾಹಿತಿ ಕಾರ್ಯಾಗಾರ

0

ಯುವ ವಿದ್ಯಾರ್ಥಿಗಳು ರಾಷ್ಟ್ರಸೇವೆಯಲ್ಲಿ ತೊಡಗಿಕೊಳ್ಳಲು ಅವಕಾಶವಾಗಿದೆ-ಮಹಮದ್ ಸಾಹೇಬ್

ಪುತ್ತೂರು: ಸ್ಕೌಟ್ಸ್ ಅಂಡ್ ಗೈಡ್ಸ್ ಚಳುವಳಿಯು ವಿಶ್ವದಾದ್ಯಂತ ಹಬ್ಬಿದ್ದು ಯುವಜನರನ್ನು ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಳೆಸಲು ಅದು ತುಂಬಾ ಸಹಾಯಕ ಎಂದು ರೋಟರಿ ಕ್ಲಬ್ ಪುತ್ತೂರು ಸಿಟಿಯ ಅಧ್ಯಕ್ಷ ಮಹಮದ್ ಸಾಹೇಬ್ ರವರು ಹೇಳಿದರು. 

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇದರ ರೇಂಜರ್ಸ್ ಸ್ವಯಂಸೇವಕಿಯರಿಗೆ ಸಂಘಟಿಸಲಾದ ಮಾಹಿತಿ ಕಾರ್ಯಾಗಾರದ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಯುವಜನರು ತಮ್ಮ ಸಂಪನ್ಮೂಲಗಳನ್ನು ತಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಅದರೊಂದಿಗೆ ರಾಷ್ಟ್ರದ ಹಾಗೂ ಒಟ್ಟಾರೆ ಸಮಾಜದ ಬೆಳವಣಿಗೆಗಾಗಿಯೂ ಶ್ರಮಿಸಬೇಕು ಆಗ ಮಾತ್ರ ಜೀವನದ ಉದ್ದೇಶ ಯಶಸ್ವಿಯಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋಪಾಲಕೃಷ್ಣ ಕೆ.ರವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ನೀಡುತ್ತಾ ಬಂದಿರುವ ನಮ್ಮ ಮಹಿಳಾ ಕಾಲೇಜಿನ ಮಕ್ಕಳನ್ನು ಬದುಕಿನ ಭವಿಷ್ಯದಲ್ಲಿ ಯಶಸ್ವಿ ವ್ಯಕ್ತಿಗಳನ್ನಾಗಿ ಬೆಳೆಸುವುದಕ್ಕಾಗಿ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಅಂತಹ ಒಂದು ವೇದಿಕೆ ಕಾಲೇಜಿನ ರೇಂಜರ್ಸ್ ಘಟಕ ಅದರಲ್ಲಿ ಎಲ್ಲಾ ಸ್ವಯಂಸೇವಕರೂ ಸಂಪೂರ್ಣ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ರೋಟರಿ ಕ್ಲಬ್ ಪುತ್ತೂರು ಸಿಟಿಯ ನಿಯೋಜಿ ಅಧ್ಯಕ್ಷರಾದ ಉಲ್ಲಾಸ್ ಪೈ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿಗೆ ಪುತ್ತೂರು ಸಿಟಿಯ ರೋಟರಿ ಕ್ಲಬ್ ಎಲ್ಲಾ ರೀತಿಯ ಸಹಕಾರಗಳನ್ನು ನೀಡುತ್ತಾ ಬಂದಿದೆ. ಮುಂದೆಯೂ ಇದೇ ರೀತಿ ಕಾಲೇಜಿಗೆ ಭರವಸೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು. ಕಾಲೇಜಿನ ಐಕ್ಯೂಏಸಿ ಸಂಚಾಲಕರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ರವರು ಕಾಲೇಜಿನಲ್ಲಿ ಕಳೆದ ಹತ್ತು ವರ್ಷಗಳಿಂದ ಆಗಿರುವ ನಿರಂತರ ಪ್ರಗತಿ ಹಾಗೂ ವಿದ್ಯಾರ್ಥಿ ಸಂಖ್ಯೆಯಲ್ಲಿ ಸಾಧಿಸಿರುವ ಯಶಸ್ಸನ್ನು ತಿಳಿಸಿದರು. ಕಾಲೇಜಿನ ರೇಂಜರ್ಸ್ ಘಟಕದ ಲೀಡರ್ ಪ್ರೊ.ವೇದಶ್ರೀ ನಿಡ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಪುರಸ್ಕಾರ ವಿಜೇತ ರೋವರ್ ಸ್ಕೌಟ್ಸ್ ಲೀಡರ್ ಭರತ್ ನಾಯಕ್ ರವರು ಎರಡು ದಿನಗಳ ರೇಂಜರ್ಸ್ ತರಬೇತಿಯನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here