ಬಿಜೆಪಿ ಸರಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು, ಹಳೆಯ ಕಾಯ್ದೆಯ ಮೂಲ ಸ್ವರೂಪ ಉಳಿಸಿ ಸುಧಾರಿತ ರೂಪದಲ್ಲಿ ತಿದ್ದುಪಡಿ; ಸಚಿವ ಎಚ್.ಕೆ.ಪಾಟೀಲ್ ಮಾಹಿತಿ

0

ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿ, ಹಳೆ ಕಾಯ್ದೆಯ ಮೂಲ ಸ್ವರೂಪ ಉಳಿಸಿಕೊಂಡು ಸುಧಾರಿತ ರೂಪದಲ್ಲಿ ತಿದ್ದುಪಡಿ ತರಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಯ್ದೆಯ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಸಲಾಗಿದೆ. ಎಪಿಎಂಸಿ ತಿದ್ದುಪಡಿ ವಿಧೇಯಕವನ್ನು ಜುಲೈನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲಾಗುವುದು. ಮುಂದಿನ ವಾರ ಮತ್ತೊಂದು ಸಭೆ ನಡೆಸಿ ತಜ್ಞರ ಅಭಿಪ್ರಾಯ ಪಡೆದು ವಿಧೇಯಕಕ್ಕೆ ಅಂತಿಮ ರೂಪ ನೀಡಲಾಗುವುದು ಎಂದು ಹೇಳಿದರು.

ಹಿಂದಿನ ಸರಕಾರದ ಅವಧಿಯಲ್ಲಿ ರೈತರ ಕಲ್ಯಾಣವನ್ನು ಬದಿಗೊತ್ತಿ ಕೃಷಿ ಮಾರುಕಟ್ಟೆ ಸಮಿತಿಗಳ ಸತ್ವ ಹಾಗೂ ಶಕ್ತಿಯನ್ನು ತೆಗೆದು ಹಾಕುವ, ಸಡಿಲಗೊಳಿಸುವ ತಿದ್ದುಪಡಿ ಮಾಡಲಾಗಿತ್ತು. ರೈತರಿಂದ ವಿರೋಧವಾದ ನಂತರ ಕೇಂದ್ರ ಸರಕಾರ ವಿಧೇಯಕಗಳನ್ನು ವಾಪಸ್ ಪಡೆದರೂ, ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಪುನರುಜ್ಜೀವನಗೊಳಿಸಿರಲಿಲ್ಲ. ಹೀಗಾಗಿ ನಾವು ಎಪಿಎಂಸಿ ಕಾಯಿದೆಯ ಮೂಲ ಸ್ವರೂಪವನ್ನು ಉಳಿಸಿಕೊಂಡು ರೈತರಿಗೆ ಅನುಕೂಲವಾಗುವ ಅಂಶಗಳನ್ನು ಉಳಿಸಿ ಮತ್ತಷ್ಟು ಸುಧಾರಿತ ರೂಪದಲ್ಲಿ ವಿಧೇಯಕ ತರುತ್ತಿದ್ದೇವೆ ಅವರು ಸಚಿವರು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನದಂತೆ ನಾನು ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಸಭೆ ನಡೆಸಿ ಸುರ್ದೀಘವಾದ ಚರ್ಚೆ ಮಾಡಿದ್ದೇವೆ. ಕರ್ನಾಟಕದ ಎಪಿಎಂಸಿ ಕಾಯ್ದೆ ರಾಷ್ಟ್ರಕ್ಕೆ ಮಾದರಿಯಾಗಿತ್ತು. ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಸುಧಾರಿತ ರೂಪದಲ್ಲಿ ಇನ್ನು ಹೆಚ್ಚಿನ ಮಾದರಿಯಾಗುವಂತೆ ತಿದ್ದುಪಡಿ ತರಲಾಗುವುದು. ತಿದ್ದುಪಡಿ ಕಾಯ್ದೆಯಡಿ ಖಾಸಗಿ ಮಾರುಕಟ್ಟೆ ಯಾರ್ಡ್‌ಗಳು, ದಲ್ಲಾಳಿಗಳು ಕೂಡ ನಿಯಂತ್ರಣಕ್ಕೆ ಒಳಪಡುತ್ತಾರೆ. ಎಪಿಎಂಸಿ ಒಳಗೆ ಹಾಗೂ ಹೊರಗೆ ಒಂದೇ ಧಾರಣೆ ದೊರೆಯುವಂತೆ ಆಗಬೇಕು ಎಂದು ಸಚಿವರು ಹೇಳಿದರು.

ಮತ್ತೊಂದೆಡೆ ವ್ಯಾಜ್ಯ ನಿರ್ವಹಣಾ ಪದ್ಧತಿಯಲ್ಲೇ ಲೋಪ ಇದ್ದು, ರಾಜ್ಯ ಸರಕಾರ 1.85 ಲಕ್ಷ ಪ್ರಕರಣಗಳಲ್ಲಿ ಸೋತಿದೆ. ಹೀಗಾಗಿ, ವ್ಯಾಜ್ಯ ನಿರ್ವಹಣೆಯಲ್ಲಿ ಸರಕಾರದ ಹಾಗೂ ರಾಜ್ಯದ ಹಿತ ಕಾಪಾಡುವ ಉದ್ದೇಶದಿಂದ ಸಿಪಿಸಿಗೆ ತಿದ್ದುಪಡಿ ತರುತ್ತೇವೆ. ಮುಂದೆ ಈ ರೀತಿ ಆಗಬಾರದು ಎಂಬ ಕಾರಣಕ್ಕಾಗಿ ತಿದ್ದುಪಡಿ ವಿಧೇಯಕವನ್ನು ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಹಿರಿಯ ಅಽಕಾರಿಗಳು ಉಪಸ್ಥಿತರಿದ್ದರು.

ಕರ್ನಾಟಕದ ಎಪಿಎಂಸಿ ಕಾಯ್ದೆ ರಾಷ್ಟ್ರಕ್ಕೆ ಮಾದರಿಯಾಗಿತ್ತು. ರೈತರ ಹಿತಕಾಪಾಡುವ ನಿಟ್ಟಿನಲ್ಲಿ ಸುಧಾರಿತ ರೂಪದಲ್ಲಿ ಇನ್ನು ಹೆಚ್ಚಿನ ಮಾದರಿಯಾಗುವಂತೆ ತಿದ್ದುಪಡಿ ತರಲಾಗುವುದು. ತಿದ್ದುಪಡಿ ಕಾಯ್ದೆಯಡಿ ಖಾಸಗಿ ಮಾರುಕಟ್ಟೆ ಯಾರ್ಡ್‌ಗಳು, ದಲ್ಲಾಳಿಗಳು ಕೂಡ ನಿಯಂತ್ರಣಕ್ಕೆ ಒಳಪಡುತ್ತಾರೆ. ಎಪಿಎಂಸಿ ಒಳಗೆ ಹಾಗೂ ಹೊರಗೆ ಒಂದೇ ಧಾರಣೆ ದೊರೆಯುವಂತೆ ಆಗಬೇಕು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

LEAVE A REPLY

Please enter your comment!
Please enter your name here