ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರಿಕಿಶನ್ ಟಿ ಗೌಡ ಮತ್ತು ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಂದೀಪ್ ಎಸ್ ಪಾಟೀಲ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಪ್ರಜಾಪ್ರಭುತ್ವವನ್ನು ಸರಿಯಾದ ರೀತಿಯಲ್ಲಿ ಅನುಭವಿಸುವ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕ ಯುವ ಸಮುದಾಯದ್ದಾಗಿದೆ. ತಮ್ಮ ವಿವೇಕ, ಜ್ಞಾನವನ್ನು ರಾಜಕೀಯ ರಂಗದಲ್ಲಿ ತೊಡಗಿಸಿ ನವ ಭಾರತ ದಾಪುಗಾಲು ಇಡುವಲ್ಲಿ ಯುವ ಜನತೆಯು ಪಾತ್ರ ವಹಿಸಬೇಕೆಂದು ಹೇಳಿದರು.
ನಮ್ಮ ದೇಶವನ್ನಾಳಿದ ಉತ್ತಮ ನಾಯಕರುಗಳ ಆದರ್ಶಗಳನ್ನು ಜವಾಬ್ದಾರಿಯುತ ನಡವಳಿಕೆಗಳನ್ನು ವಿದ್ಯಾರ್ಥಿಗಳು ಎಳೆ ವಯಸ್ಸಿನಲ್ಲೆ ಮೈಗೂಡಿಸಿಕೊಳ್ಳಬೇಕು. ನಾಯಕರುಗಳಾದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನರಿತು ಇತರರಿಗೆ ಮಾದರಿಯಾಗಿ ನಡೆದುಕೊಳ್ಳಬೇಕೆಂದು ಸಲಹೆಯಿತ್ತರು.
ವೇದಿಕೆಯಲ್ಲಿ ಪ್ರಾಂಶುಪಾಲೆ ಸುಚಿತ್ರ ಪ್ರಭು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ಗಣಿತಶಾಸ್ತ್ರ ಉಪನ್ಯಾಸಕ ತಿಲೋಶ್ ಕುಮಾರ್ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಎಲ್ಲಾ ಉಪನ್ಯಾಸಕರು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.